Fake News - Kannada
 

ಅಜ್ಜಿಯೊಬ್ಬರೊಂದಿಗೆ ಮೆಟ್ಟಿಲುಗಳ ಮೇಲೆ ಈ ಫೋಟೋದಲ್ಲಿ ಕುಳಿತಿರುವವರು ಭೂಪಾಲಪಲ್ಲಿ ಜಿಲ್ಲಾಧಿಕಾರಿ ಅಬ್ದುಲ್ ಅಜೀಂ

0

ಕಟ್ಟಡವೊಂದರ ಪ್ರವೇಶದ್ವಾರದಲ್ಲಿ ಅಜ್ಜಿಯೊಬ್ಬರ ಎದುರು ವ್ಯಕ್ತಿಯೊಬ್ಬ ಕುಳಿತಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಟೊದಲ್ಲಿರುವ ವ್ಯಕ್ತಿ ತೆಲಂಗಾಣದ ಭುವನಪಲ್ಲಿಯ ಜಿಲ್ಲಾ ನ್ಯಾಯಾಧೀಶರು ಎಂದು ಪ್ರತಿಪಾದಿಸಲಾಗಿದೆ. ಪೆನ್ಶನ್ ಬಾರದ ಸಮಸ್ಯೆಯ ಪ್ರಕರಣದ ವಿಚಾರಣೆಗೆ ಆ ಮಹಿಳೆಯು ಕೋರ್ಟ್ ಜಿಇ ಬಂದು ಮೆಟ್ಟಿಲುಗಳನ್ನು ಏರಲಾಗದೇ ಅಲ್ಲಿಯೇ ಕುಳಿತಿದ್ದಳು. ಇದು ಜಿಲ್ಲಾ ನ್ಯಾಯಾಧೀಶ ಅಬ್ದುಲ್ ಹಸೀಮ್ ರವರ ಗಮನಕ್ಕೆ ಬಂದಾಗ ಅವರು ಕೆಳಗಿಳಿದು ಬಂದು ಮಹಿಳೆಯ ಹೇಳಿಕೆ ಪಡೆದು, ಎರಡು ವರ್ಷದ ಪ್ರಕರಣವನ್ನು ಅಂದೇ ಇತ್ಯರ್ಥ ಮಾಡಿದರು ಎಂದು ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದು ನಿಜವೇ ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ತೆಲಂಗಾಣದ ಭುವನಪಲ್ಲಿಯ ಜಿಲ್ಲಾ ನ್ಯಾಯಾಧೀಶ ಅಬ್ದುಲ್ ಹಸೀಮ್ ಒಬ್ಬ ಅಜ್ಜಿಯೊಂದಿಗೆ ಮೆಟ್ಟಿಲುಗಳ ಮೇಲೆ ಕುಳಿತೇ ಆಕೆಯ ಪ್ರಕರಣ ಇತ್ಯರ್ಥಮಾಡಿಸಿದರು.

ನಿಜಾಂಶ: ಫೋಟೊದಲ್ಲಿರುವ ವ್ಯಕ್ತಿಯು ಜಿಲ್ಲಾ ನ್ಯಾಯಾಧೀಶರಲ್ಲ ಮತ್ತು ತೆಲಂಗಾಣದಲ್ಲಿ ಭುವನಪಲ್ಲಿ ಎಂಬ ಜಿಲ್ಲೆ ಅಸ್ತಿತ್ವದಲ್ಲಿಲ್ಲ. ಆದರೆ ಆ ಘಟನೆ ನಿಜವಾಗಿದ್ದು, ಫೋಟೊದಲ್ಲಿರುವ ವ್ಯಕ್ತಿಯು ‘ಜಯಶಂಕರ್ ಭೂಪಾಲಪಲ್ಲಿ’ ಜಿಲ್ಲೆಯ ಜಿಲ್ಲಾಧಿಕಾರಿ ಅಬ್ದುಲ್ ಅಜೀಂ ಆಗಿದ್ದಾರೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್ ನಲ್ಲಿರುವ ಫೋಟೊವನ್ನು ಗೂಗಲ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಅದೇ ಫೋಟೊ 2020 ಫೆಬ್ರವರಿಯಲ್ಲಿ ಪ್ರಕಟವಾದ ‘ದಿ ಹನ್ಸ್ ಇಂಡಿಯಾ’ ಲೇಖನದಲ್ಲಿ ಪತ್ತೆಯಾಗಿದೆ. ಲೇಖನದಲ್ಲಿ ವಯಸ್ಸಾದ ಮಹಿಳೆಯೊಂದಿಗೆ ಮೆಟ್ಟಿಲುಗಳ ಮೇಲೆ ಕುಳಿತಿರುವವರು ‘ಜಯಶಂಕರ್ ಭೂಪಾಲಪಲ್ಲಿ’ ಜಿಲ್ಲೆಯ ಜಿಲ್ಲಾಧಿಕಾರಿ ಅಬ್ದುಲ್ ಅಜೀಂ ಎಂದು ಉಲ್ಲೇಖಿಸಲಾಗಿದೆ. ಮಂಗಮ್ಮ ಎಂಬ ಈ ಮಹಿಳೆಯು ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲುಗಳ ಮೇಲೆ ಕುಳಿತಿರುವುದನ್ನು ನೋಡಿದ ಅವರು ವಿಚಾರಿಸಿದ್ದಾರೆ. ಎರಡು ವರ್ಷಗಳಿಂದ ಪಿಂಚಣಿ ಬಾರದಿದ್ದ ಬಗ್ಗೆ ಆ ಮಹಿಳೆ ದೂರಿದಾಗ ಅವರು ಕೂಡಲೇ ಡಿ.ಆರ್.ಡಿ.ಒ ಸುಮತಿ ಎಂಬುವವರಿಗೆ ಕರೆ ಮಾಡಿ ಪಿಂಚಣಿ ಬರುವಂತೆ ಮಾಡಿ ಪ್ರಕರಣವನ್ನು ಅಂದೇ ಇತ್ಯರ್ಥ ಮಾಡಿದ್ದಾರೆ.

ಘಟನೆಯು ಇತರ ಸುದ್ದಿಮೂಲಗಳಲ್ಲಿಯೂ ವರದಿಯಾಗಿದೆ. ಅದೇ ಚಿತ್ರವು ಜಿಲ್ಲೆಯ ಅಧಿಕೃತ ವೆಬ್ ಸೈಟ್ ನಲ್ಲಿಯೂ ಸಹ ಕಾಣಸಿಗುತ್ತದೆ.

‘ಜಯಶಂಕರ್ ಭೂಪಾಲಪಲ್ಲಿ’ ಜಿಲ್ಲೆಯ ಅಧಿಕೃತ ವೆಬ್ ಸೈಟ್ ನಲ್ಲಿ  ಜಿಲ್ಲಾಧಿಕಾರಿ ಮೊಹಮ್ಮದ್ ಅಬ್ದುಲ್ ಅಜೀಂರವರ ಫೋಟೊ, ಪ್ರೊಫೈಲ್ ಸಹ ಕಾಣಬಹುದು. ಅಲ್ಲಿಗೆ ಫೋಟೊದಲ್ಲಿರುವ ವ್ಯಕ್ತಿಯು ಜಿಲ್ಲಾ ನ್ಯಾಯಾಧೀಶರಲ್ಲ ಎಂಬ ತೀರ್ಮಾನಕ್ಕೆ ಬರಬಹುದು ಮತ್ತು ತೆಲಂಗಾಣದಲ್ಲಿ ಭುವನಪಲ್ಲಿ ಎಂಬ ಜಿಲ್ಲೆ ಅಸ್ತಿತ್ವದಲ್ಲಿಲ್ಲ.

ಒಟ್ಟಿನಲ್ಲಿ ಈ ಫೋಟೋದಲ್ಲಿ ಮೆಟ್ಟಿಲುಗಳ ಮೇಲೆ ಅಜ್ಜಿಯೊಬ್ಬರ ಜೊತೆಗೆ ಕುಳಿತಿರುವ ವ್ಯಕ್ತಿ ಭೂಪಾಲಪಲ್ಲಿಯ ಜಿಲ್ಲಾಧಿಕಾರಿ ಅಬ್ದುಲ್ ಅಜೀಂ.

Share.

About Author

Comments are closed.

scroll