Fake News - Kannada
 

ಇಲ್ಲ, ಈ ಮೂವರು ಐಪಿಎಸ್ ಅಧಿಕಾರಿಗಳು ಒಡಹುಟ್ಟಿದವರಲ್ಲ, ಸಹಪಾಠಿಗಳು!

0

ಮೂವರು ಪೊಲೀಸ್ ಸಮವಸ್ತ್ರಧಾರಿ ವ್ಯಕ್ತಿಗಳು ಒಟ್ಟಿಗೆ ಕುಳಿತಿರುವ ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಅದರಲ್ಲಿರುವ ಮೂವರೂ ಒಡಹುಟ್ಟಿದವರೆಂದು ಹಾಗೂ ಮೂವರೂ ಐಪಿಎಸ್‌ಗೆ ಆಯ್ಕೆ ಆಗಿದ್ದಾರೆ ಎಂಬ ಪ್ರತಿಪಾದಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪೋಸ್ಟ್‌ ನಿಜವೇ ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಐಪಿಎಸ್ ಅಧಿಕಾರಿಗಳಾದ ಒಂದೇ ಕುಟುಂಬದ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿಯ ಚಿತ್ರ.

ನಿಜಾಂಶ: ಚಿತ್ರದಲ್ಲಿರುವ ಮೂವರನ್ನು ಪೂಜಾ ವಸಿಷ್ಠ್, ತುಷಾರ್ ಗುಪ್ತಾ, ಮತ್ತು ಶ್ರುತ ಕೀರ್ತಿ ಸೋಮವಂಶಿ ಎಂದು ಗುರುತಿಸಲಾಗಿದೆ. ಈ ಮೂವರೂ ಐಪಿಎಸ್ ಅಧಿಕಾರಿಗಳು ಎಂಬುವುದು ನಿಜ. ಆದರೆ ಇವರು ಒಡಹುಟ್ಟಿದವರಲ್ಲ. ಅವರು ಸಹಪಾಠಿಗಳು ಎಂದು ಚಿತ್ರದಲ್ಲಿರುವ ತುಷಾರ್ ದೃಢಪಡಿಸಿದ್ದಾರೆ. ಅಲ್ಲದೆ, ‘ಯು ಪಿ ಎಸ್ ಸಿ ಮೀಮ್’ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ನಿರ್ವಹಿಸುತ್ತಿರುವ ಸೋಮವಂಶಿ ಇದನ್ನು ಪುನರುಚ್ಚರಿಸಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಚಿತ್ರವನ್ನು ರಿವರ್ಸ್ ಇಮೇಜ್‌ ಮೂಲಕ ಹುಡುಕಾಡಿದಾಗ ಅದೇ ಚಿತ್ರವನ್ನು ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಖಾತೆಯನ್ನು ನಾವು ಕಂಡುಕೊಂಡಿದ್ದು, ಅದರಲ್ಲಿರುವ ಪರಿಚಯದ ಪ್ರಕಾರ, ಖಾತೆಯು ಐಪಿಎಸ್ ಪ್ರೊಬೇಷನರ್ (ಚಿತ್ರದಲ್ಲಿರುವ ಮಹಿಳೆ) ಪೂಜಾ ವಶಿಸ್ಠ್ ಅವರದ್ದು. ಚಿತ್ರದಲ್ಲಿನ ಟ್ಯಾಗ್‌ಗಳ ಪ್ರಕಾರ, ಪೂಜ ಅವರ ಎಡಭಾಗದಲ್ಲಿರುವ ವ್ಯಕ್ತಿ ತುಷಾರ್ ಗುಪ್ತಾ ಮತ್ತು ಬಲಭಾಗದಲ್ಲಿ ಕುಳಿತಿರುವ ವ್ಯಕ್ತಿ ಶ್ರುತ ಕೀರ್ತಿ ಸೋಮವಂಶಿ. ಈ ಇಬ್ಬರೂ ಕೂಡ ಐಪಿಎಸ್ ಪ್ರೊಬೇಷನರ್‌ಗಳು. ತುಷಾರ್ ಗುಪ್ತಾ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದನ್ನು ಇಲ್ಲಿ ನೋಡಬಹುದು.

ಇಲ್ಲಿಂದ ಮಾಹಿತಿ ಪಡೆದ ನಾವು ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ತುಷಾರ್ ಗುಪ್ತಾ ಅವರನ್ನು ಸಂಪರ್ಕಿಸಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಒಡಹುಟ್ಟಿದವರು ಎಂಬ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ ಮತ್ತು ತಾವುಗಳು ಸಹಪಾಠಿಗಳೆಂದು ಸ್ಪಷ್ಟಪಡಿಸಿದ್ದಾರೆ.

ಶ್ರುತ ಕೀರ್ತಿ ಸೋಮವಂಶಿಯವರ ಇನ್ಸ್ಟಾಗ್ರಾಮ್ ಬಯೋ ಪ್ರಕಾರ, ಅವರು ಜನಪ್ರಿಯ ಇನ್ಸ್ಟಾಗ್ರಾಮ್ ಖಾತೆಯ upscmeme ನಿರ್ವಾಹಕರಾಗಿದ್ದಾರೆ. upscmeme ಖಾತೆಯ ಮೂಲಕ ಸೋಮವಂಶಿ ಕೂಡಾ ನಾವು ಒಡಹುಟ್ಟಿದವರಲ್ಲ ಸಹಪಾಠಿಗಳು ಎಂದು ಸ್ಪಷ್ಟಪಡಿಸಿದ್ದಾರೆ.

ಐಪಿಎಸ್ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶ ಮೂಲದ ಸೋಮವಂಶಿಯವರನ್ನು ಮಧ್ಯಪ್ರದೇಶದ ಕೇಡರ್‌ಗೆ ನೇಮಿಸಲಾಗಿದೆ. ಪೂಜಾ ವಶಿಸ್ಠ್ ಅವರನ್ನು ಹರಿಯಾಣ ಕೇಡರ್‌ಗೆ ನೇಮಿಸಲಾಗಿದ್ದು, ಅದು ಅವರ ತವರು ರಾಜ್ಯವೂ ಆಗಿದೆ. ಮತ್ತೊಂದೆಡೆ, ತುಷಾರ್ ಗುಪ್ತಾ ಅವರನ್ನು ಪಂಜಾಬ್‌ಗೆ ನೇಮಕ ಮಾಡಲಾಗಿದೆ, ಅದು ಅವರ ತವರು ರಾಜ್ಯವಾಗಿದೆ. ಅವರ ಕೊನೆಯ ಹೆಸರುಗಳು ಮತ್ತು ತವರು ರಾಜ್ಯಗಳು ವಿಭಿನ್ನವಾಗಿರುವುದರಿಂದ ಅವರು ಒಡಹುಟ್ಟಿದವರಾಗುವ ಸಾಧ್ಯತೆ ಇಲ್ಲ ಎಂದು ಈ ವಿವರಗಳು ಸ್ಪಷ್ಟವಾಗಿ ಸೂಚಿಸುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ, ಚಿತ್ರದಲ್ಲಿರುವ ಮೂರು ಐಪಿಎಸ್ ಪ್ರೊಬೇಷನರ್‌ಗಳು ಸಹಪಾಠಿ‌ಗಳಾಗಿದ್ದು ಒಡಹುಟ್ಟಿದವರಲ್ಲ.

Share.

About Author

Comments are closed.

scroll