Fake News - Kannada
 

ಛತ್ತೀಸ್‌ಗಢದ ಕವರ್ಧಾ ಕೋಮು ಹಿಂಸಾಚಾರದ ವೀಡಿಯೊವನ್ನು ಉತ್ತರ ಪ್ರದೇಶದ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಉತ್ತರ ಪ್ರದೇಶದಲ್ಲಿ ಹಿಂದೂಗಳ ಗುಂಪು ಮುಸ್ಲಿಂ ವಾಹನಗಳು ಮತ್ತು ಆಸ್ತಿಗಳನ್ನು ನಾಶಪಡಿಸುವ ದೃಶ್ಯಗಳು ಎಂದು ಹೇಳುವ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರತಾಪ್‌ಗಢ್ ಜಿಲ್ಲೆಯ ಲಾಲ್‌ಗಂಜ್ ಪಟ್ಟಣದ ಸಮೀಪವಿರುವ ದುರ್ಗಾ ಮಂಟಪ ಮೇಲೆ ಮುಸ್ಲಿಂ ಗುಂಪು ಇತ್ತೀಚೆಗೆ ದಾಳಿ ಮಾಡಿದೆ ಎಂದು ವಿಡಿಯೊ ಜೊತೆಗಿನ ಪೋಸ್ಟ್ ಪ್ರತಿಪಾದಿಸುತ್ತದೆ. ಮುಸ್ಲಿಂ ಗುಂಪಿನ ದಾಳಿಗೆ ಪ್ರತೀಕಾರವಾಗಿ ಹಿಂದೂಗಳ ಗುಂಪೊಂದು ಮುಸ್ಲಿಮರ ವಾಹನಗಳನ್ನು ಧ್ವಂಸ ಮಾಡುತ್ತಿರುವುದು ಕಂಡುಬಂದಿದೆ ಎಂದು ಕೂಡಾ ಅದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಉತ್ತರ ಪ್ರದೇಶದ ದುರ್ಗಾ ಪೆಂಡಲ್ ಮೇಲೆ ಮುಸ್ಲಿಂ ಗುಂಪು ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಹಿಂದೂಗಳ ವೀಡಿಯೋ.

ವಾಸ್ತವ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಛತ್ತೀಸ್‌ಗಢದಲ್ಲಿ ಕವರ್ಧಾ ಕೋಮು ಹಿಂಸಾಚಾರದ ಇತ್ತೀಚಿನ ದೃಶ್ಯಗಳಾಗಿದೆ. ಉತ್ತರ ಪ್ರದೇಶದ ಲಾಲ್‌ಗಂಜ್ ಪಟ್ಟಣದಲ್ಲಿ ದುರ್ಗಾ ಪೆಂಡಾಲ್‌ ಮೇಲೆ ಮುಸ್ಲಿಮ್ ಗುಂಪು ದಾಳಿ ನಡೆಸಿದ ಘಟನೆ ವರದಿಯಾಗಿಲ್ಲ. ಈ ವಿಡಿಯೋಗೂ ಉತ್ತರ ಪ್ರದೇಶಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೋವನ್ನು ಕೂಲಂಕುಷವಾಗಿ ಗಮನಿಸಿದಾಗ, ಛತ್ತೀಸ್‌ಗಢ ವಾಹನದ ನೋಂದಣಿ ಸಂಖ್ಯೆಯನ್ನು ಜನಸಮೂಹವು ಧ್ವಂಸಗೊಳಿಸುತ್ತಿರುವ ವಾಹನಗಳಲ್ಲಿ ನಾವು ನೋಡಿದ್ದೇವೆ. ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೊಗಳನ್ನು ಹುಡುಕಿದಾಗ, ಛತ್ತೀಸ್‌ಗಢದ ಕವರ್ಧಾ ಪಟ್ಟಣದಲ್ಲಿ ಇತ್ತೀಚಿನ ಕೋಮು ಹಿಂಸಾಚಾರದ ದೃಶ್ಯಗಳು ಎಂದು ವಿವರಿಸುವ ಹಲವಾರು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ನಾವು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಈ ವೀಡಿಯೊಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಹುಡುಕಿದಾಗ, ‘ದೈನಿಕ್ ಭಾಸ್ಕರ್’ ಪ್ರಕಟಿಸಿದ ಲೇಖನದಲ್ಲಿ ಧ್ವಂಸಗೊಳಿಸಿದ ವಾಹನಗಳ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ . ಈ ವರದಿಯು, 05 ಅಕ್ಟೋಬರ್ 2021 ರಂದು ಛತ್ತೀಸ್‌ಗಢದ ಕಭಿರ್‌ಧಾಮ್ ಜಿಲ್ಲೆಯ ಕವರ್ಧಾ ಪಟ್ಟಣದಲ್ಲಿ ದೊಣ್ಣೆಗಳೊಂದಿಗೆ ಬಂದಿದ್ದ ದೊಡ್ಡ ಗುಂಪು ನಿಂತಿದ್ದ ವಾಹನಗಳನ್ನು ಧ್ವಂಸಗೊಳಿಸಿದೆ ಎಂದು ವರದಿ ಮಾಡಿದೆ. ಈ ಘಟನೆಯ ಸಂಪೂರ್ಣ ವಿವರಗಳನ್ನು ವರದಿ ಮಾಡಿ, ಹಲವಾರು ವರದಿಗಳು, ವಿಡಿಯೊ ವರದಿಗಳು ಪ್ರಕಟವಾಗಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ವರದಿಗಳ ಪ್ರಕಾರ, ಲೋಹರಾ ಚೌಕ್ ಪ್ರದೇಶದಿಂದ ಧಾರ್ಮಿಕ ಧ್ವಜಗಳನ್ನು ತೆಗೆದುಹಾಕುವ ಬಗ್ಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಸಂಘರ್ಷ ಏರ್ಪಟ್ಟಿದ್ದವು. ಈ ಸಂಘರ್ಷದ ನಂತರ 03 ಅಕ್ಟೋಬರ್ 2021 ರಂದು ಕವರ್ಧಾದಲ್ಲಿ ಕೋಮುಗಲಭೆ ಪ್ರಾರಂಭವಾಯಿತು. ಸುದ್ದಿ ವರದಿಗಳ ಪ್ರಕಾರ, 05 ಅಕ್ಟೋಬರ್ 2021 ರಂದು ವಿಶ್ವ ಹಿಂದೂ ಪರಿಷತ್ ಘೋಷಿಸಿದ ಬಂದ್ ನಂತರ, ಆ ಗುಂಪು ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಿಗೆ ಪ್ರವೇಶಿಸಿ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳನ್ನು ಧ್ವಂಸಗೊಳಿಸಿತು.

ಪ್ರತಾಘರ್ ಜಿಲ್ಲೆಯಲ್ಲಿ ಕೋಮುಗಲಭೆಯ ದೃಶ್ಯಗಳಾಗಿ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಉತ್ತರ ಪ್ರದೇಶ ಪೊಲೀಸ್ ಫ್ಯಾಕ್ಟ್-ಚೆಕ್ ತಂಡವು 13 ಅಕ್ಟೋಬರ್ 2021 ರಂದು ಟ್ವೀಟ್ ಮೂಲಕ ಸ್ಪಷ್ಟೀಕರಣವನ್ನು ನೀಡಿದೆ. ವಿಡಿಯೋದಲ್ಲಿರುವ ಘಟನೆ ನಡೆದಿರುವುದು ಛತ್ತೀಸ್‌ಗಢದ ಕವರ್ಧಾ ಪಟ್ಟಣದಲ್ಲಿ ಹೊರತು ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರತಾಪ್‌ಗಢದ ಲಾಲ್‌ಗಂಜ್ ಪ್ರದೇಶದ ಬಳಿ ದುರ್ಗಾಪೂಜಾ ಪೆಂಡಾಲ್‌ ಮೇಲೆ ಮುಸ್ಲಿಂ ಗುಂಪು ಯಾವುದೆ ದಾಳಿ ನಡೆಸಿಲ್ಲ ಎಂದು ಪ್ರತಾಪ್‌ಗಢ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಛತ್ತೀಸ್‌ಗಢದ ಕವರ್ಧಾ ಕೋಮು ಹಿಂಸಾಚಾರದ ವೀಡಿಯೊವನ್ನು ಉತ್ತರ ಪ್ರದೇಶದ ದುರ್ಗಾ ಪೆಂಡಾಲ್‌ ಮೇಲೆ ದಾಳಿ ಮಾಡಿದ ಮುಸ್ಲಿಂಮರ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುತ್ತಿರುವ ಹಿಂದೂಗಳ ಗುಂಪಿನ ದೃಶ್ಯ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll