ರಾಜ್ಯದಲ್ಲಿರಸ್ತೆ ವಿಸ್ತರಣೆ ಕಾಮಗಾರಿಯ ಭಾಗವಾಗಿ ಮಸೀದಿಯನ್ನು ಕೆಡವಲಾಗಿದ್ದು, ಅದರ ಕೆಳಗಡೆ ಶಿವನ ಮಂದಿರವೊಂದು ಕಾಣಿಸುತ್ತಿರುವ ಫೋಟೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಶಿವ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಯಿತು. ಮುಸ್ಲಿಮರು ನಮಾಜ್ ಮಾಡುವ ಮಸೀದಿಯ ಕೆಳಗೆ ದೇವಸ್ಥಾನ ಇರುತ್ತದೆ ಎಂದು ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ನೋಡೋಣ.
ಪ್ರತಿಪಾದನೆ: ಕರ್ನಾಟಕದಲ್ಲಿ ರಸ್ತೆ ವಿಸ್ತರಣೆಯ ಕಾಮಗಾರಿ ಭಾಗವಾಗಿ ಮಸೀದಿಯನ್ನು ಕೆಡವಲಾಗಿದ್ದು ಅದರ ಶಿವ ದೇವಾಲಯ ಕಂಡು ಬಂದಿದೆ.
ನಿಜಾಂಶ: 2016ರಲ್ಲಿ ರಾಯಚೂರು ಜಿಲ್ಲೆಯ ಅಧಿಕಾರಿಗಳು ರಸ್ತೆ ವಿಸ್ತರಣೆಯ ಭಾಗವಾಗಿ ರಾಯಚೂರಿನ ಏಕ್ ಮಿನಾರ್ ಮಸೀದಿಯ ಭಾಗವನ್ನು ಕೆಡವಿದ್ದರು. ಏಕ್ ಮಿನಾರ್ ಮಸೀದಿ ಧ್ವಂಸದ ನಂತರ ಹೊರಹೊಮ್ಮಿದ ಕಂಬಗಳು ಹಿಂದೂ ದೇವಾಲಯಗಳಲ್ಲಿ ನಿರ್ಮಿಸಲಾದ ಕಂಬಗಳನ್ನು ಹೋಲುತ್ತವೆ ಎಂದು ಅಲ್ಲಿನ ಹಿಂದೂ ಸಮುದಾಯವು ಆರೋಪಿಸಿದೆ. ಆದರೆ, ಏಕ್ ಮಿನಾರ್ ಮಸೀದಿ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ನಿರಾಧಾರ ಎಂದು ಅಂದಿನ ರಾಯಚೂರು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಪೋಸ್ಟ್ ಮೂಲಕ ಹೇಳಿರುವುದು ತಪ್ಪುದಾರಿಗೆಳೆಯುವಂತಿದೆ.
ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ವಿವರಗಳಿಗಾಗಿ Googleನಲ್ಲಿ ಹುಡುಕಾಡಿದಾಗ ಈ ಫೋಟೋವನ್ನು ಕನಿಷ್ಠ 2016 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆ ಹಳೆಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಒಬ್ಬ ಬಳಕೆದಾರರು ಫೋಟೋ ಜೊತೆಗೆ “ರಾಯಚೂರ್ ಏಕ್ ಮಿನಾರ್ ಮಸೀದಿಯನ್ನು ಕೆಡವಲಾಗುತ್ತಿದೆ, 500 ವರ್ಷ ಪುರಾತನವಾದದ್ದು, ಹಿಂದೂ ಬ್ರಾಹ್ಮಣರು ಭವ್ಯವಾದ ಶಿಲ್ಪಗಳನ್ನು ಕೆತ್ತಿದ್ದಾರೆ ನೋಡಿ” ಎಂದಿದ್ದಾರೆ. ಈ ಟ್ವೀಟ್‌ಗಳಲ್ಲಿ ಹಂಚಿಕೊಂಡಿರುವ ಮಸೀದಿಯ ಫೋಟೋವನ್ನು ‘ಟ್ರಿಪ್ ಅಡ್ವೈಸರ್’ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಟ್ರಿಪ್ ಅಡ್ವೈಸರ್ ವೆಬ್‌ಸೈಟ್ ಪ್ರಕಾರ ಈ ಫೋಟೋ ರಾಯಚೂರಿನ ಏಕ್ ಮಿನಾರ್ ಮಸೀದಿಯಾಗಿದೆ.
ಈ ವಿವರಗಳನ್ನು ಆಧರಿಸಿ, ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋದ ಕುರಿತು ಹೆಚ್ಚಿನ ಮಾಹಿತಿಯ ಹುಡುಕಾಡಿದಾಗ, ಈ ಘಟನೆಗೆ ಸಂಬಂಧಿಸಿದಂತೆ ‘ಡೆಕ್ಕನ್ ಕ್ರಾನಿಕಲ್’ ಸುದ್ದಿ ಸಂಸ್ಥೆ 15 ಏಪ್ರಿಲ್ 2016 ರಂದು ಲೇಖನವನ್ನು ಪ್ರಕಟಿಸಿರುವುದು ಕಂಡುಬಂದಿದೆ. ರಾಯಚೂರಿನ ಏಕ್ ಮಿನಾರ್ ಮಸೀದಿಯ ಭಾಗವನ್ನು 2016 ರಲ್ಲಿ ರಸ್ತೆ ವಿಸ್ತರಣೆಯ ಭಾಗವಾಗಿ ಕೆಡವಲಾಯಿತು ಎಂದು ಈ ಲೇಖನ ವರದಿ ಮಾಡಿದೆ. ಏಕ್ ಮಿನಾರ್ ಮಸೀದಿ ಧ್ವಂಸದ ನಂತರ ಹೊರಹೊಮ್ಮಿದ ಕಂಬಗಳು ಅಲ್ಲಿನ ಹಿಂದೂ ಸಮುದಾಯಗಳ ಪ್ರಕಾರ ಹಿಂದೂ ದೇವಾಲಯಗಳಲ್ಲಿ ನಿರ್ಮಿಸಲಾದ ಭವ್ಯವಾದ ಶಿಲ್ಪಕಲಾ ಸ್ತಂಭಗಳನ್ನು ಹೋಲುತ್ತವೆ ಎಂದು ಹೇಳಲಾಗುತ್ತದೆ. ಏಕ್ ಮಿನಾರ್ ಮಸೀದಿಯ ಇತಿಹಾಸವನ್ನು ತಕ್ಷಣವೇ ತನಿಖೆ ಮಾಡಿ ಮತ್ತು ಈ ಹಿಂದೆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆಯೇ ಎಂದು ಸ್ಪಷ್ಟಪಡಿಸಬೇಕೆಂದು ರಾಯಚೂರು ಹಿಂದೂ ಸಮುದಾಯವು ಸರ್ಕಾರವನ್ನು ಒತ್ತಾಯಿಸಿದೆ ಎಂದು ಲೇಖನ ವರದಿ ಮಾಡಿದೆ. ಆದರೆ, ಈ ಲೇಖನದಲ್ಲಿ ಎಲ್ಲಿಯೂ ಏಕ್ ಮಿನಾರ್ ಮಸೀದಿಯ ಕಂಬಗಳು ಹಿಂದೂ ದೇವಾಲಯಕ್ಕೆ ಸೇರಿವೆ ಎಂದು ದೃಢಪಡಿಸಲಾಗಿಲ್ಲ. ‘ದಿ ಹಿಂದೂ’ ಸುದ್ದಿ ಸಂಸ್ಥೆ ರಾಯಚೂರು ರಸ್ತೆ ಅಗಲೀಕರಣ ಕೆಡವುವ ಕುರಿತು 2016ರ ಏಪ್ರಿಲ್ 10ರಂದು ಲೇಖನ ಪ್ರಕಟಿಸಿತ್ತು.
ಏಕ್ ಮಿನಾರ್ ಮಸೀದಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಸ್ಪಷ್ಟನೆಗಾಗಿ ‘ಆಲ್ಟ್ ನ್ಯೂಸ್’ ಸತ್ಯ ಪರಿಶೀಲನ ಸಂಸ್ಥೆ ಅಂದಿನ ರಾಯಚೂರು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿತ್ತು. ಆಲ್ಟ್ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದ ರಾಯಚೂರು ಜಿಲ್ಲಾಧಿಕಾರಿಗಳು, ”ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳು. ರಾಯಚೂರು ರಸ್ತೆ ವಿಸ್ತರಣೆಯ ಭಾಗವಾಗಿ ಪ್ರಾಚೀನ ಏಕ್ ಮಿನಾರ್ ಮಸೀದಿ ಹಾಗೂ ಕೆಲವು ಧಾರ್ಮಿಕ ಕಟ್ಟಡಗಳನ್ನು ಕೆಡವಲಾಯಿತು. ಪ್ರಾಚೀನ ಸ್ಮಾರಕಗಳಲ್ಲಿ ಹಲವು ವಿಧಗಳಿವೆ. ಸರಳವಾಗಿ ಹೇಳುವುದಾದರೆ, ಕಂಬವನ್ನು ಹಿಂದೂ ದೇವಾಲಯ ಎಂದು ಹೇಳಲಾಗುವುದಿಲ್ಲ. ಕೆಲವು ಗುಂಪುಗಳು ಈ ಆರೋಪ ಮಾಡಲು ಯತ್ನಿಸಿದ್ದವು. ಆದರೆ ಅವರ ಆರೋಪಗಳ ಬಗ್ಗೆ ಮತ್ತೆ ಅವರನ್ನೇ ಕೇಳಿದಾಗ ಅವರು ಆರೋಪಗಳನ್ನು ಮುಂದುವರಿಸಲಿಲ್ಲ,” ಎಂದು ಹೇಳಿದ್ದಾರೆ.
ಈ ವಿವರಗಳನ್ನು ಆಧರಿಸಿ, 2016 ರಲ್ಲಿ ರಾಯಚೂರಿನ ಏಕ್ ಮಿನಾರ್ ಮಸೀದಿಯನ್ನು ಕೆಡವಿದಾಗ ಹಿಂದೂ ದೇವಾಲಯವನ್ನು ಕಂಡುಬಂದಿದೆ ಎಂಬ ಹೇಳಿಕೆಯು ಸಂಪೂರ್ಣವಾಗಿ ಆಧಾರರಹಿತವಾಗಿದೆ. ಒಟ್ಟಾರೆ ರಾಜ್ಯದ ರಾಯಚೂರಿನಲ್ಲಿ ರಸ್ತೆ ಅಗಲೀಕರಣದ ಭಾಗವಾಗಿ ಕೆಡವಲ್ಪಟ್ಟ ಮಸೀದಿಯ ಕೆಳಗೆ ಹಿಂದೂ ದೇಗುಲ ಸಿಕ್ಕಿಲ್ಲ.