Fake News - Kannada
 

2020 ಟೋಕಿಯೋ ಒಲಿಂಪಿಕ್ಸ್ ಪುರುಷರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಬಾರ್ಶಿಮ್ ಜೊತೆ ಚಿನ್ನ ಹಂಚಿಕೊಂಡ ತಂಬೇರಿ ಗಾಯಗೊಂಡಿರಲಿಲ್ಲ

0

ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಎತ್ತರ ಜಿಗಿತದ ಫೈನಲ್ ಪಂದ್ಯದಲ್ಲಿ ಇಟಲಿಯ ಜಿಯಾನ್‌ಮಾರ್ಕೊ ತಂಬೇರಿ, ಕತಾರ್‌ನ ಮುತಾಜ್ ಎಸ್ಸಾ ಬಾರ್ಶಿಮ್ ಅವರನ್ನು ಎದುರಿಸಿದ್ದರು. ಇಬ್ಬರೂ 2.37 ಮೀಟರ್ ಜಿಗಿದರು ಮತ್ತು ಸಮನಾಗಿದ್ದರು! ಆನಂತರ ಅವರಿಗೆ 2.37 ಮೀಟರ್‌ಗಿಂತ ಹೆಚ್ಚು ತಲುಪಲು ಸಾಧ್ಯವಾಗಲಿಲ್ಲ. ಆಗ ಒಲಿಂಪಿಕ್ ಅಧಿಕಾರಿಯೊಟ್ಟಿಗೆ ಮಾತನಾಡಿ ಚಿನ್ನ ಹಂಚಿಕೊಂಡಿದ್ದರು. ಈ ಘಟನೆಯನ್ನು ಜಿಯಾನ್‌ಮಾರ್ಕೊ ತಂಬೇರಿ ಗಂಭೀರ ಗಾಯದಿಂದಾಗಿ ಕೊನೆಯ ಪ್ರಯತ್ನದಿಂದ ಹಿಂದೆ ಸರಿದರು. ಹಾಗಾಗಿ ಬಾರ್ಶಿಮ್ ತನ್ನ ಎದುರಾಳಿ ಗಾಯಗೊಂಡಿದ್ದರಿಂದ ಪರಸ್ಪರ ಒಪ್ಪಿ ಚಿನ್ನ ಹಂಚಿಕೊಂಡರು ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಪರಿಶೀಲಿಸೋಣ.

ಪ್ರತಿಪಾದನೆ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಎತ್ತರ ಜಿಗಿತದ ಅಂತಿಮ ಸ್ಪರ್ಧೆಯಲ್ಲಿ ಇಟಲಿಯ ತಂಬೇರಿ ಕಾಲಿನ ಗಂಭೀರ ಗಾಯದಿಂದಾಗಿ ಕೊನೆಯ ಪ್ರಯತ್ನದಿಂದ ಹಿಂದೆ ಸರಿದ ನಂತರ ಚಿನ್ನದ ಪದಕವನ್ನು ತಂಬೇರಿಯೊಂದಿಗೆ ಹಂಚಿಕೊಳ್ಳಲು ಕತಾರ್‌ನ ಬಾರ್ಶಿಮ್ ನಿರ್ಧರಿಸಿದ್ದಾರೆ.

ನಿಜಾಂಶ: ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ಎತ್ತರ ಜಿಗಿತದ ಫೈನಲ್ ಪಂದ್ಯದಲ್ಲಿ ಇಟಲಿಯ ಜಿಯಾನ್‌ಮಾರ್ಕೊ ತಂಬೇರಿ ಮತ್ತು ಕತಾರ್‌ನ ಮುತಾಜ್ ಎಸ್ಸಾ ಬಾರ್ಶಿಮ್ ಚಿನ್ನದ ಪದಕವನ್ನು ಹಂಚಿಕೊಂಡಿದ್ದು ನಿಜ. ಆದರೆ ತಂಬೇರಿ ತನ್ನ ಕಾಲಿನ ಗಂಭೀರ ಗಾಯದಿಂದಾಗಿ ತನ್ನ ಕೊನೆಯ ಪ್ರಯತ್ನದಿಂದ ಹಿಂದೆ ಸರಿದಿದ್ದು ನಿಜವಲ್ಲ. ಇಬ್ಬರೂ 2.39 ಮೀಟರ್ ಎತ್ತರವನ್ನು ಜಿಗಿಯಲು ತಮ್ಮ ಮೂರು ಪ್ರಯತ್ನಗಳಲ್ಲಿ ವಿಫಲವಾದರು. ಆಗ ಮತ್ತೊಮ್ಮೆ ಜಿಗಿಯಲು ಪ್ರಯತ್ನ ಮಾಡಲು ಬದಲು ಚಿನ್ನವನ್ನು ಸಮನಾಗಿ ಹಂಚಿಕೊಳ್ಳಲು ನಿರ್ಧರಿಸಿದರು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ದಿಕ್ಕುತಪ್ಪಿಸುವಂತಿದೆ.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ ಈ ಇಬ್ಬರು ಎತ್ತರ ಜಿಗಿತ ಆಟಗಾರರು ಒಲಿಂಪಿಕ್ ಚಿನ್ನದ ಪದಕವನ್ನು ಹಂಚಿಕೊಂಡ ಅಪರೂಪದ ಸಂಗತಿಯನ್ನು ವರದಿ ಮಾಡಿದ ಹಲವು ಸುದ್ದಿ ಲೇಖನಗಳು ದೊರಕಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ಈ ಲೇಖನಗಳ ಪ್ರಕಾರ ಬಾರ್ಶಿಮ್ ಮತ್ತು ತಂಬೇರಿ ಇಬ್ಬರೂ ಟೋಕಿಯೊ 2020 ಪುರುಷರ ಹೈಜಂಪ್ ಒಲಿಂಪಿಕ್ ಚಿನ್ನದ ಪದಕವನ್ನು ಹಂಚಿಕೊಳ್ಳಲು ಸೌಹಾರ್ದಯುತವಾಗಿ ನಿರ್ಧರಿಸಿದ್ದಾರೆ. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕತಾತ್‌ನ ಬಾರ್ಶಿಮ್ ಇಟಲಿಯ ತಂಬೇರಿಯೊಂದಿಗೆ ಚಿನ್ನದ ಪದಕ ಹಂಚಿಕೊಳ್ಳುವ ನಿರ್ಧಾರದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದ್ದರು. ನನ್ನ ಪ್ರದರ್ಶನದಿಂದಾಗಿ ನಾನು ಆ ಚಿನ್ನಕ್ಕೆ ಅರ್ಹನೆಂದು ನನಗನಿಸಿತು. ಅವರು ಅದೇ ಪ್ರದರ್ಶನವನ್ನು ನೀಡಿದರು. ಆದ್ದರಿಂದ, ಅವರು ಆ ಚಿನ್ನಕ್ಕೆ ಅರ್ಹರೆಂದು  ನನಗನಿಸಿತು” ಎಂದು ಬಾರ್ಶಿಮ್ ಹೇಳಿದ್ದರು.

ಆಗಸ್ಟ್ 1 ರಂದು ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಸ್ಥಾನಕ್ಕಾಗಿ ಎರಡು ಗಂಟೆಗೂ ಹೆಚ್ಚು ಕಾಲ ಇಬ್ಬರು ಸ್ಪರ್ಧಿಗಳು ಬೆವರು ಹರಿಸಿದರು. ಇಬ್ಬರೂ ಆಟಗಾರರು 2.37 ಮೀಟರ್ ಎತ್ತರವನ್ನು ಜಿಗಿದರು. ಆದರೆ ಒಲಿಂಪಿಕ್ ದಾಖಲೆಯ 2.39 ಮೀಟರ್ ಎತ್ತರವನ್ನು ಜಿಗಿಯಲು ಇಬ್ಬರು ವಿಫಲವಾದರು. ಆದರೆ ತಂಬೇರಿ ಮತ್ತು ಬಾರ್ಶಿಮ್ ಮತ್ತೆ ಜಿಗಿಯುವ ಬದಲು ಚಿನ್ನದ ಪದಕವನ್ನು ಹಂಚಿಕೊಳ್ಳಲು ಒಪ್ಪಿಕೊಂಡರು. ಈ ಪಂದ್ಯದ ವಿಜೇತರ ಕುರಿತ ಸಂಪೂರ್ಣ ಮಾಹಿತಿಯನ್ನು ವಿಶ್ವ ಅಥ್ಲೆಟಿಕ್ ವೆಬ್‌ಸೈನ್‌ನಲ್ಲಿ ನೋಡಬಹುದು.

2016 ರಲ್ಲಿ, ಇಟಲಿಯ ತಂಬೇರಿ ತನ್ನ ಎಡ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಈ ಗಾಯದಿಂದಾಗಿ, ತಂಬೇರಿ ರಿಯೋ ಒಲಿಂಪಿಕ್ ಆಟಗಳಲ್ಲಿ ಭಾಗವಹಿಸಲಿಲ್ಲ ಮತ್ತು 11 ತಿಂಗಳು ಹೈ ಜಂಪ್ ಸ್ಪರ್ಧೆಯಿಂದ ಹೊರಗುಳಿದಿದ್ದರು. ಜುಲೈ 2018 ರಲ್ಲಿ, ಬಾರ್ಶಿಮ್ ಕೂಡ 2.46 ಮೀಟರ್ ವಿಶ್ವ ದಾಖಲೆಯನ್ನು ಮುರಿಯಲು ಪ್ರಯತ್ನಿಸುವಾಗ ಪಾದದ ಗಾಯಕ್ಕೆ ಒಳಗಾಗಿದ್ದರು. ‘ಟೋಕಿಯೊ 2020’ ಪಂದ್ಯಗಳ ಮೊದಲು ಇಬ್ಬರೂ ಆಟಗಾರರು ಗಂಭೀರ ಗಾಯಗಳನ್ನು ಎದುರಿಸಿದ್ದಾರೆ. ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಇಟಲಿಯ ಎತ್ತರ ಜಿಗಿತಗಾರ ತಂಬೇರಿ ಗಾಯಗೊಂಡ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ.

ಒಟ್ಟಿನಲ್ಲಿ 2020 ಟೋಕಿಯೋ ಒಲಿಂಪಿಕ್ಸ್ ಪುರುಷರ ಎತ್ತರ ಜಿಗಿತದಲ್ಲಿ ಬಾರ್ಶಿಮ್ ಜೊತೆ ಚಿನ್ನ ಹಂಚಿಕೊಂಡ ತಂಬೇರಿ ಗಾಯಗೊಂಡಿರಲಿಲ್ಲ.

Share.

About Author

Comments are closed.

scroll