Fake News - Kannada
 

2019 ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ವೀಡಿಯೋ ಎಂದು ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ

0

2019 ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯದ್ದು ಎಂದು ಹೇಳುತ್ತಾ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. 14 ಫೆಬ್ರವರಿ 2019 ರಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ 40 ಸಿಆರ್‌ಪಿಎಫ್‌ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: 2019 ರ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ನಡೆದ ದಾಳಿಯ ವಿಡಿಯೋ ಇದು.

ಸತ್ಯಾಂಶ: ಇದೇ ವೀಡಿಯೊ 2008 ರಿಂದಲೂ ಅಂತರ್ಜಾಲದಲ್ಲಿ ಹರಿದಾಡುತ್ತಿದೆ ಎಂಬುದು ತಿಳಿದುಬಂದಿದೆ. ಎಡಿಟ್ ಮಾಡದ ಮೂಲ ವೀಡಿಯೊ 2007 ರದ್ದು ಎಂದು ಟೈಮ್‌ಸ್ಟ್ಯಾಂಪ್ ಇದೆ. ಆದರೆ ಸಿಆರ್‌ಪಿಎಫ್ ಸೈನಿಕರ ಮೇಲೆ ಪುಲ್ವಾಮಾ ದಾಳಿ ನಡೆದದ್ದು 2019 ರ ಫೆಬ್ರವರಿಯಲ್ಲಿ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪ್ರಸ್ತುತ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಅದರ ಫಲಿತಾಂಶಗಳಲ್ಲಿ ಅದೇ ದೃಶ್ಯಗಳನ್ನು ಹೊಂದಿರುವ ವೀಡಿಯೊ ಪತ್ತೆಯಾಯಿತು. ಈ ವೀಡಿಯೊವನ್ನು 8 ಡಿಸೆಂಬರ್ 2008 ರಂದು “ವಿಬಿಐಡಿ ಐಇಡಿ ಎಸ್ಇಪಿ 02, 2007 ಕ್ಯಾಂಪ್ ತಾಜಿ ಇರಾಕ್ ಬೃಹತ್ ಸ್ಫೋಟ” ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದರೊಂದಿಗೆ ಮತ್ತೊಂದು ಯೂಟ್ಯೂಬ್ ವಿಡಿಯೋ ಪತ್ತೆಯಾಗಿದೆ. ಅದನ್ನು ಇರಾಕ್‌ನಲ್ಲಿ ಟ್ರಕ್ ಬಾಂಬ್ ದಾಳಿ ಎಂದು ಉಲ್ಲೇಖಿಸಲಾಗಿದೆ. ಇದಲ್ಲದೆ, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊವನ್ನು ಕಟ್ ಮಾಡಲಾಗಿದೆ. ಯೂಟ್ಯೂಬ್‌ನಲ್ಲಿ ಪ್ರಕಟವಾದ ಪೂರ್ಣ ವೀಡಿಯೊದಲ್ಲಿ, ‘2007’ ರ ಟೈಮ್‌ಸ್ಟ್ಯಾಂಪ್ ಅನ್ನು ಕಾಣಬಹುದು. ಈ ದಾಳಿ ಎಲ್ಲಿ ನಡೆಯಿತು ಎಂಬ ಬಗ್ಗೆ ನಿಖರವಾದ ವಿವರಗಳನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೂ, ಈ ವೀಡಿಯೊ 2019 ರ ಪುಲ್ವಾಮಾ ದಾಳಿಗೆ ಸಂಬಂಧಿಸಿಲ್ಲ ಎಂದು ತೀರ್ಮಾನಿಸಬಹುದು.

2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ, ಈ ದಾಳಿಗೆ ಸಂಬಂಧಿಸಿದ ದೃಶ್ಯಗಳು ಎಂದು ಹೇಳಿಕೊಳ್ಳುವ ಅನೇಕ ತಪ್ಪಾದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. 2020 ರಲ್ಲಿಯೂ ಈ ವೀಡಿಯೊ  ಇದೇ ಪ್ರತಿಪಾದನೆಯೊಂದಿಗೆ ವೈರಲ್ ಆದಾಗ, ಅದರ ಬಗ್ಗೆ ಫ್ಯಾಕ್ಟ್-ಚೆಕ್ ಅನ್ನು ಫ್ಯಾಕ್ಟ್ಲಿ ಪ್ರಕಟಿಸಿತ್ತು. ಇದನ್ನು ಇಲ್ಲಿ ನೋಡಬಹುದು.

ಒಟ್ಟಾರೆ ಹೇಳುವುದಾದರೆ, 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ದೃಶ್ಯಗಳೆಂದು ಹಳೆಯ ಮತ್ತು ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋಗಳ ಪ್ರತಿಪಾದನೆಯು ತಪ್ಪಾಗಿದೆ.

Share.

About Author

Comments are closed.

scroll