Fake News - Kannada
 

ತಿರುಚಿದ 2010 ರ ಛಾಯಾಚಿತ್ರವನ್ನು 74ನೇ ಸ್ವಾತಂತ್ರ್ಯ ದಿನದ ಕಾಶ್ಮೀರದ ಲಾಲ್ ಚೌಕದ ಚಿತ್ರವೆಂದು ಹೇಳಿ ಹಂಚಿಕೊಳ್ಳಲಾಗಿದೆ

0

ಭಾರತದ ತ್ರಿವರ್ಣ ಧ್ವಜವು ಕಾಶ್ಮೀರದ ಲಾಲ್ ಚೌಕ್ ನಲ್ಲಿ ಹಾರಾಡುತ್ತಿರುವ ಚಿತ್ರದೊಂದಿಗೆ ಹಸಿರು ಧ್ವಜವನ್ನು ಬಿಚ್ಚಿರುವ ಲಾಲ್ ಚೌಕ್ ನ ಇನ್ನೊಂದು ಚಿತ್ರವನ್ನು ಹೋಲಿಸುವ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತು ಹೊಡೆಯುತ್ತಿದೆ. ಭಾರತದ ತ್ರಿವರ್ಣ ಧ್ವಜದೊಂದಿಗಿನ ಚಿತ್ರವು 74ನೇ ಸ್ವಾತಂತ್ರ್ಯ ದಿನಾಚರಣೆಯದು ಎಂದು ಹೇಳಲಾಗಿದೆ. ಈ ಲೇಖನದ ಮೂಲಕ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶ್ರೀನಗರದ ಲಾಲ್ ಚೌಕ್ ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ.

ನಿಜಾಂಶ: ಇದು ಕಂಪ್ಯೂಟರ್ ತಂತ್ರಾಂಶದ ಮೂಲಕ ತಿರುಚಿರುವ (ಮಾರ್ಫ್) ಚಿತ್ರ. ಲಾಲ್ ಚೌಕ್, ಶ್ರೀನಗರ ಮತ್ತು ಭಾರತೀಯ ಧ್ವಜದ ಎರಡು ಪ್ರತ್ಯೇಕ ಚಿತ್ರಗಳನ್ನು ಡಿಜಿಟಲ್ ರೀತಿಯಲ್ಲಿ ಮಾರ್ಪಡಿಸಲಾಗಿದ್ದು, ಲಾಲ್ ಚೌಕ್ ನಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಾಡುತ್ತಿರುವಂತೆ ತೋರಿಸಲಾಗಿದೆ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪ್ರತಿಪಾದನೆಯ ಜೊತೆಗಿದ್ದ ಫೋಟೋದ ರಿವರ್ಸ್ ಇಮೇಜ್ ಹುಡುಕಾಟವನ್ನು ನಾವು ನಡೆಸಿದಾಗ, ಹಿಂದೆ 2010ರಲ್ಲಿ ಪ್ರಕಟವಾದ ಬ್ಲಾಗ್‌ ನಲ್ಲಿ ಅದೇ ಫೋಟೋವನ್ನು ನಾವು ಕಂಡುಕೊಂಡಿದ್ದೇವೆ, ಆದರೆ ಬ್ಲಾಗ್‌ ನಲ್ಲಿ, ಭಾರತೀಯ ಧ್ವಜವಿಲ್ಲದೆ ಲಾಲ್ ಚೌಕದ ಗಡಿಯಾರ ಗೋಪುರದ ಚಿತ್ರ ಮಾತ್ರ ಕಂಡುಬರುತ್ತದೆ. 2010ರ ನಂತರವೂ, ಭಾರತೀಯ ಧ್ವಜವಿಲ್ಲದ ಗಡಿಯಾರ ಗೋಪುರದ ಅದೇ ಚಿತ್ರಗಳನ್ನು ಕೆಲವು ಸುದ್ದಿ ಸಂಸ್ಥೆಗಳು ಪ್ರಕಟಿಸಿವೆ. ಅಲ್ಲದೆ, 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಲಾಲ್ ಚೌಕ್‌ ನ ಗಡಿಯಾರ ಗೋಪುರದಲ್ಲಿ ಭಾರತೀಯ ಧ್ವಜವನ್ನು ಹಾರಿಸಿದ ಬಗ್ಗೆ ನಮಗೆ ಯಾವುದೇ ಸುದ್ದಿ ವರದಿಗಳು ಕಂಡುಬಂದಿಲ್ಲ.

ಅಲ್ಲದೆ, ಚಿತ್ರವನ್ನು ಕ್ರಾಪ್ ಮಾಡಿ ಭಾರತೀಯ ಧ್ವಜದ ಚಿತ್ರವನ್ನು ಮಾತ್ರ ರಿವರ್ಸ್ ಇಮೇಜ್ ಹುಡುಕಾಟಕ್ಕೆ ಒಳಪಡಿಸಿದಾಗ ನಾವು ಅದೇ ಚಿತ್ರವನ್ನು ಪಿಕ್ಸಬೇ ಎಂಬ ಜಾಲತಾಣದಲ್ಲಿ ಕಂಡುಕೊಂಡಿದ್ದೇವೆ. ಕೆಳಗಿನ ಜಿಐಎಫ್ ಧ್ವಜದ ಚಿತ್ರವನ್ನು ಪಿಕ್ಸಬೇಯಿಂದ ಡಿಜಿಟಲ್ ರೂಪದಲ್ಲಿ ತೆಗೆದು ಗಡಿಯಾರ ಗೋಪುರದ ಹಳೆಯ ಚಿತ್ರದ ಮೇಲೆ ಇರಿಸುವ ಪ್ರಕ್ರಿಯೆಯನ್ನು ವಿವರಿಸುತ್ತದೆ.

ಲಾಲ್ ಚೌಕದ ಗಡಿಯಾರ ಗೋಪುರದಲ್ಲಿ ನಾವು ಹಸಿರು ಧ್ವಜವನ್ನು ನೋಡಿದ ಪೋಸ್ಟ್ ನ ಚಿತ್ರದ ಇನ್ನೊಂದು ಭಾಗವು 2010ರಲ್ಲಿ ನಡೆದ ಒಂದು ನಿಜ ಘಟನೆಯಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಬಹುದು. ಮತ್ತು ಘಟನೆಯ ಇನ್ನೂ ಕೆಲವು ಚಿತ್ರಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, 74ನೇ ಸ್ವಾತಂತ್ರ್ಯ ದಿನಾಚರಣೆಯಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ಹಾರಿಸಲಾಗಿರುವ ಭಾರತೀಯ ಧ್ವಜ ಎಂದು ಹೇಳಿಕೊಳ್ಳುವ ಚಿತ್ರವು ವಾಸ್ತವವಾಗಿ ಕಂಪ್ಯೂಟರ್ ತಂತ್ರಾಂಶದ ಮೂಲಕ ತಿರುಚಿರುವ ಚಿತ್ರವಾಗಿದೆ.

Share.

About Author

Comments are closed.

scroll