ವಿಶ್ವದ ಮೊದಲ COVID-19 ಲಸಿಕೆಯನ್ನು (ಇದನ್ನು ‘ಸ್ಪುಟ್ನಿಕ್ ವಿ’ “Sputnik V” ಎಂದು ಹೆಸರಿಸಲಾಗಿದೆ) ರಷ್ಯಾ ಅಂಗೀಕರಿಸಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ ಕೂಡಲೇ, ಲಸಿಕೆಯನ್ನು ಅವರ ಮಗಳ ಪಡೆದಿದ್ದಾರೆ ಎನ್ನಲಾಗಿತ್ತು. ನಂತರದಲ್ಲಿ ಮಹಿಳೆಯೊಬ್ಬರು ಲಸಿಕೆ ಪಡೆಯುತ್ತಿರುವ ವಿಡಿಯೋವನ್ನು ಪುಟಿನ್ ಮಗಳು ಲಸಿಕೆ ಪಡೆಯುತ್ತಿರುವ ವಿಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಗಳಿಗೆ ಲಸಿಕೆ ಹಾಕುವ ವಿಡಿಯೋ.
ನಿಜಾಂಶ: ವಿಡಿಯೋದಲ್ಲಿರುವ ಮಹಿಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಗಳಲ್ಲ. ಫೋಟೋದಲ್ಲಿರುವ ಮಹಿಳೆ ನಟಾಲಿಯಾ. ರಷ್ಯಾದಲ್ಲಿ ನಡೆಸಿದ ಟ್ರಯಲ್ ನಲ್ಲಿ ಲಸಿಕೆ ಪಡೆದ ಸ್ವಯಂಸೇವಕರಲ್ಲಿ ಆಕೆ ಕೂಡ ಒಬ್ಬರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಯಾಂಡೆಕ್ಸ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ಅನೇಕ ವಿಡಿಯೋಗಳು ಕಂಡುಬಂದಿವೆ. ಜುಲೈ 2020 ರಲ್ಲಿ ಇದೇ ರೀತಿಯ ವಿಡಿಯೋವನ್ನು ರಷ್ಯಾದ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ಅದರ ವಿವರಣೆಯಲ್ಲಿ, ಲಸಿಕೆ ಪ್ರಯೋಗದ ನಂತರ ಸ್ವಯಂಸೇವಕರ ಗುಂಪನ್ನು ಬರ್ಡೆಂಕೊ ಮುಖ್ಯ ಮಿಲಿಟರಿ ಕ್ಲಿನಿಕಲ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಬರೆಯಲಾಗಿದೆ.
2020 ರ ಜೂನ್‌ನಲ್ಲಿ ‘ಜ್ವೆಜ್ಡಾ’ (ರಷ್ಯಾದ ರಕ್ಷಣಾ ಸಚಿವಾಲಯವು ನಡೆಸುತ್ತಿರುವ ರಷ್ಯಾದ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಟಿವಿ ನೆಟ್‌ವರ್ಕ್) ಪ್ರಕಟಿಸಿದ ಲೇಖನದಲ್ಲಿಯೂ ಅದೇ ಮಹಿಳೆಯ ಚಿತ್ರಣವಿದೆ (ಕಿವಿಯೋಲೆಗಳು ಒಂದೇ). 13 ಜುಲೈ 2020 ರಂದು, ರಷ್ಯಾದಲ್ಲಿ ಪ್ರಾಯೋಗಿಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ‘ಜ್ವೆಜ್ಡಾ’ ಯೂಟ್ಯೂಬ್‌ನಲ್ಲಿ ವಿಡಿಯೋವನ್ನು ಪ್ರಕಟಿಸಿತ್ತು. ಆ ವಿಡಿಯೋದಲ್ಲಿ, ಅದೇ ಮಹಿಳೆ ಚಾನೆಲ್‌ನೊಂದಿಗೆ ಮಾತನಾಡುವುದನ್ನು ಕಾಣಬಹುದು. ಚಾನೆಲ್ ಆಕೆಯನ್ನು ‘ನಟಾಲಿಯಾ’ ಎಂದು ಉಲ್ಲೇಖಿಸಿದೆ. ಆಕೆ, ‘ಎಸ್.ಎಂ. ಕಿರೋವ್ ಹೆಸರಿನ ಮಿಲಿಟರಿ ವೈದ್ಯಕೀಯ ಅಕಾಡೆಮಿಯ ತರಬೇತಿ ಪಡೆಯುತ್ತಿರುವ ಅಭ್ಯರ್ಥಿ (ಗೂಗಲ್‌ನಿಂದ ಅನುವಾದಿಸಲಾಗಿದೆ). ಸಂಬಂಧಿತ ಲೇಖನವನ್ನು ಇಲ್ಲಿ ಓದಬಹುದು. ಆದ್ದರಿಂದ, ಆಕೆ ಪುಟಿನ್ ಅವರ ಮಗಳಲ್ಲ. ಏಕೆಂದರೆ ಸುದ್ದಿ ಸಂಸ್ಥೆಗಳು ವರದಿ ಮಾಡಿದಂತೆ, ಪುಟಿನ್ ಹೆಣ್ಣುಮಕ್ಕಳ ಹೆಸರುಗಳು ಮಾರಿಯಾ ವೊರೊಂಟ್ಸೊವಾ ಮತ್ತು ಕ್ಯಾಟರೀನಾ ಟಿಖೋನೊವಾ.
‘ಜ್ವೆಜ್ಡಾ’ ಪ್ರಕಟಿಸಿದ ಮತ್ತೊಂದು ಲೇಖನದಲ್ಲಿ, ಯಾವುದೇ ಮಾಸ್ಕ್ ಇಲ್ಲದೆ ಹುಡುಗಿಯ ಮುಖವನ್ನು ಕಾಣಬಹುದು. ಆದ್ದರಿಂದ, ವೀಡಿಯೊದಲ್ಲಿರುವ ಮಹಿಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಗಳಲ್ಲ ಎಂದು ಖಚಿತಪಡಿಸಬಹುದು.
ಒಟ್ಟಾರೆಯಾಗಿ, ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ಲಸಿಕೆಯ ಪ್ರಯೋಗಕ್ಕೆ ಒಳಗಾಗಿರುವ ಮಹಿಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಗಳಲ್ಲ.