Fake News - Kannada
 

ಅಮೃತಸರದ ಅಪಘಾತದ ವಿಡಿಯೋವನ್ನು ಯುಪಿ ಸರ್ಕಾರ ರೈತರ ಪ್ರತಿಭಟನಾಕಾರ ಮೇಲೆ ಹಲ್ಲೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಗಾಜಿಪುರ ಗಡಿಯಲ್ಲಿ ಟ್ರಾಕ್ಟರ್ ಮೂಲಕ ಪ್ರತಿಭಟನಾ ನಿರತ ಮಹಿಳಾ ರೈತರ ಮೇಲೆ ಉತ್ತರ ಪ್ರದೇಶ ಸರ್ಕಾರ ದಾಳಿ ನಡೆಸುತ್ತಿರುವ ದೃಶ್ಯಗಳು ಎಂದು ಮಹಿಳೆಯರ ಮೇಲೆ ಟ್ರ್ಯಾಕ್ಟರ್ ಓಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಗಾಜಿಪುರ ಗಡಿಯಲ್ಲಿರುವ ಪ್ರತಿಭಟನಾ ಸ್ಥಳದಿಂದ ರೈತರನ್ನು ಖಾಲಿ ಮಾಡಲು ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಮಾಡಿದ ಪ್ರಯತ್ನಗಳ ಹಿನ್ನೆಲೆಯಲ್ಲಿ, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ನಿಜವೇ ಪರಿಶೀಲಿಸೋಣ ಬನ್ನಿ.

ಪ್ರತಿಪಾದನೆ: ಪ್ರತಿಭಟನೆ ನಡೆಸುತ್ತಿರುವ ಮಹಿಳಾ ರೈತರ ಮೇಲೆ ನೀರಿನ ಟ್ಯಾಂಕರ್ ಹತ್ತಿಸುವ ಮೂಲಕ ಉತ್ತರ ಪ್ರದೇಶ ಸರ್ಕಾರ ದಾಳಿ ನಡೆಸಿದ ವಿಡಿಯೋ.

ನಿಜಾಂಶ: ಈ ಘಟನೆ ನಡೆದಿರುವುದು ಪಂಜಾಬ್‌ನ ಅಮೃತಸರ ನಗರದಲ್ಲಿ, ಉತ್ತರ ಪ್ರದೇಶದ ಘಾಜಿಪುರ ಗಡಿಯಲ್ಲಿ ಅಲ್ಲ. ಅಮೃತಸರದ ವಲ್ಲಾ ಪ್ರದೇಶದಲ್ಲಿ ರೈತರನ್ನು ಬೆಂಬಲಿಸಿ ನಡೆದ ಧರಣಿ ಸಭೆಯಲ್ಲಿ ಸೇರಲು ಹೋಗುತ್ತಿರುವ ಮಹಿಳೆಯರ ಗುಂಪಿನ ಮೇಲೆ ವಾಟರ್ ಟ್ಯಾಂಕರ್ ಹೊಡೆಯುವುದನ್ನು ಈ ವೀಡಿಯೊ ತೋರಿಸುತ್ತದೆ. ಘಾಜಿಪುರ ಗಡಿಯಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವೆ ನಡೆಯುತ್ತಿರುವ ಜಗಳಕ್ಕೂ ಈ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, 20 ಜನವರಿ 2021 ರಂದು ‘ಅಮರ್ ಉಜಲಾ’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ವಾಟರ್ ಟ್ಯಾಂಕರ್ ಫೋಟೋ ಕಂಡುಬರುತ್ತದೆ. ಲೇಖನದಲ್ಲಿ, ಟ್ರಾಕ್ಟರ್ ರ್ಯಾಲಿಯಲ್ಲಿ ದೊಡ್ಡ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಪಂಜಾಬ್‌ನ ಅಮೃತಸರ ನಗರದಲ್ಲಿ ರೈತರ ಬೆಂಬಲಕ್ಕಾಗಿ ಧರಣಿ ನಡೆಯಿತು. ಅಮೃತಸರದ ವಲ್ಲಾ ಪ್ರದೇಶದಲ್ಲಿ ನಡೆದ ಧರಣಿ ಸಭೆಯತ್ತ ಮೆರವಣಿಗೆ ನಡೆಸುತ್ತಿದ್ದ ಮಹಿಳೆಯರ ಗುಂಪಿನ ಮೇಲೆ ವಾಟರ್ ಟ್ಯಾಂಕರ್ ನುಗ್ಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೀವರ್ಡ್‌ಗಳನ್ನು ಬಳಸಿಕೊಂಡು ಇತರ ಮೂಲಗಳಿಗಾಗಿ ಹುಡುಕಿದಾಗ, ಈ ಘಟನೆಯ ಕುರಿತು ‘ಎಎನ್‌ಐ’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನವನ್ನು ನಾವು ಕಂಡುಕೊಂಡಿದ್ದೇವೆ. ರೈತರನ್ನು ಬೆಂಬಲಿಸಿ ನಡೆದ ಧರಣಿ ಸಭೆಯತ್ತ ಹೊರಟಿದ್ದ ಐವರು ಮಹಿಳೆಯರಿಗೆ ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಎಂದು ಲೇಖನದಲ್ಲಿ ವರದಿಯಾಗಿದೆ. ಈ ಘಟನೆ ಪಂಜಾಬ್‌ನ ಅಮೃತಸರದ ವಲ್ಲಾ ಪ್ರತಿಭಟನಾ ಸ್ಥಳದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಸಮೀಪದ ಜನರು ಚಾಲಕನಿಗೆ ಸ್ಥಳದಲ್ಲೇ ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಚಾಲಕನ ಮೇಲೆ ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ತೆಗೆದುಕೊಂಡರು.

‘ಎನ್‌ಡಿಟಿವಿ’ ಸಹ ಈ ಘಟನೆಯ ಬಗ್ಗೆ 26 ಜನವರಿ 2021 ರಂದು ಒಂದು ಲೇಖನವನ್ನು ಪ್ರಕಟಿಸಿತು. ಈ ಎಲ್ಲ ಸಾಕ್ಷ್ಯಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡ ಅಪಘಾತದ ವಿಡಿಯೋವು ಉತ್ತರಪ್ರದೇಶದ ಗಾಜಿಪುರ ಗಡಿ ಪ್ರದೇಶದಲ್ಲಿ ಅಲ್ಲ, ಪಂಜಾಬ್‌ನ ಅಮೃತಸರ ನಗರದಲ್ಲಿ ನಡೆದಿದೆ ಎಂದು ಖಚಿತವಾಗಿ ಹೇಳಬಹುದು.

ಒಟ್ಟಿನಲ್ಲಿ ಅಮೃತಸರದ ಅಪಘಾತದ ವಿಡಿಯೋವನ್ನು ಯುಪಿ ಸರ್ಕಾರ ರೈತರ ಪ್ರತಿಭಟನಾಕಾರ ಮೇಲೆ ಹಲ್ಲೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll