Fake News - Kannada
 

ಫ್ರಾನ್ಸ್‌ನಲ್ಲಿ ಮುಸ್ಲೀಂ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅಶ್ರುವಾಯು ದಾಳಿ ನಡೆಸಿದ್ದಾರೆ ಎಂದು ಟರ್ಕಿಯ 2012ರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ

0

ಫ್ರಾನ್ಸ್‌ನಲ್ಲಿ ನಡೆದ ಮುಸ್ಲಿಮರ ಪ್ರತಿಭಟನೆಯಲ್ಲಿ, ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಬಳಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಲಾಗಿರುವ ಸತ್ಯಾಸತ್ಯತೆಯನ್ನು ಈ ಲೇಖನದಲ್ಲಿ ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಫ್ರಾನ್ಸ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮುಸ್ಲಿಂ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಬಳಸುವ ವಿಡಿಯೋ.

ಸತ್ಯ:  2012ರಲ್ಲಿ ಟರ್ಕಿಯಲ್ಲಿ ಖೈದಿಗಳು ನಡೆಸಿದ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ವಿದ್ಯಾರ್ಥಿಗಳು ಒಗ್ಗಟ್ಟಾಗಿ ನಡೆಸಿದ ಪ್ರತಿಭಟನೆಯ ವಿಡಿಯೋ ಇದು. ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಬೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರಯತ್ನಿಸಿದ್ದರು. ಆಗ ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಬಳಸಿ ಅವರನ್ನು ಚದುರಿಸಿದ್ದರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿನ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ಯೂಟ್ಯೂಬ್‌ನಲ್ಲಿ ಇದೇ ರೀತಿಯ ವೀಡಿಯೊ ದೊರೆತಿದೆ. ವೀಡಿಯೊವನ್ನು 09 ನವೆಂಬರ್ 2012 ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವೀಡಿಯೊದ ವಿವರಣೆಯಲ್ಲಿ ‘ಸಿವಿಲ್ ಫ್ರೈಡೇ ಪ್ರೇಯರ್‌ ವಿತ್‌ ಗ್ಯಾಸ್‌ ಬಾಂಬ್‌ – ಯಕ್ಸೆಕೋವಾ – ಗಿವರ್’ ಎಂದು ಬರೆಯಲಾಗಿದೆ. ಹಾಗಾಗಿ ಈಗ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿರುವ ವೀಡಿಯೊ ಕನಿಷ್ಠ 2012 ರಿಂದ ಅಂತರ್ಜಾಲದಲ್ಲಿದೆ ಎಂದು ಇದು ಸಾಬೀತುಪಡಿಸುತ್ತದೆ.

ಯೂಟ್ಯೂಬ್ ವೀಡಿಯೊದಲ್ಲಿ ಸಿಕ್ಕ ಕ್ಲ್ಯೂಗಳಿಂದ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಿದಾಗ, 2012 ರ ಕೆಲವು ಸುದ್ದಿ ಲೇಖನಗಳು ದೊರೆತಿವೆ. ಆ ಸುದ್ದಿಗಳು ವೀಡಿಯೊದಲ್ಲಿನ ದೃಶ್ಯಗಳನ್ನು ಹೋಲುವ ಚಿತ್ರಗಳನ್ನು ಒಳಗೊಂಡಿವೆ. ಅಂತಹ ಒಂದು ಸುದ್ದಿ ಲೇಖನದ ಪ್ರಕಾರ, 2012 ರಲ್ಲಿ ಖೈದಿಗಳು ನಡೆಸಿದ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ವಿದ್ಯಾರ್ಥಿಗಳ ಗುಂಪೊಂದು ಟರ್ಕಿಯ ಹಕ್ಕರಿಯಲ್ಲಿನ ಬೀದಿಗಳಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಘಟನೆಯ ಇನ್ನೂ ಕೆಲವು ಚಿತ್ರಗಳನ್ನು ಇಲ್ಲಿ ಕಾಣಬಹುದು. ಘಟನೆಯನ್ನು ವರದಿ ಮಾಡಿದ ಮತ್ತು ವೀಡಿಯೊದ ದೃಶ್ಯಗಳಿಗೆ ಹೋಲುವ ಚಿತ್ರಗಳನ್ನು ಹೊಂದಿರುವ ಇತರ ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಅಲ್ಲದೆ, ವೀಡಿಯೊದಲ್ಲಿ ಕಾಣುವ ವಾಹನಗಳ ಮೇಲೆ ಬರೆದ ‘POLIS’ ಪದಗಳು ಟರ್ಕಿ ಪೋಲಿಸ್ ವ್ಯಾನ್‌ಗಳಂತೆಯೇ ಇರುವುದನ್ನು ಸ್ಪಷ್ಟವಾಗಿ ಕಾಣಬಹುದು. ಫ್ರಾನ್ಸ್‌ನಲ್ಲಿ ಇದನ್ನು ‘POLICE’ಎಂದು ಬರೆಯಲಾಗುತ್ತದೆ. ಈ ಎಲ್ಲಾ ಪುರಾವೆಗಳೊಂದಿಗೆ, ಪೋಸ್ಟ್‌ನಲ್ಲಿನ ವೀಡಿಯೊ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸಂಬಂಧಿಸಿಲ್ಲ ಎಂದು ನಾವು ತೀರ್ಮಾನಿಸಬಹುದು.

ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ನೀಡಿದ ಹೇಳಿಕೆಗಳ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ, ಪೋಸ್ಟ್‌ನಲ್ಲಿರುವ ವಿಡಿಯೋವನ್ನು ಎಲ್ಲಡೆ ಸಾಮಾಜಿಕ ಜಾಲತಾನದಲ್ಲಿ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋವು 2012 ರಲ್ಲಿ ಟರ್ಕಿಯಲ್ಲಿ ನಡೆದ ಪ್ರತಿಭಟನೆಯಾಗಿದೆ.

Share.

About Author

Comments are closed.

scroll