ಜನರು ‘ಖಲಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗುವ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಶ್ಲಾಘಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ಭಾರತೀಯ ರೈತರು ಹೊಸ ಕೃಷಿ ಮಸೂದೆಗಳ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಯದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಭಾರತೀಯ ರೈತರು ‘ಖಲಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗುತ್ತಿದ್ದಾರೆ ಮತ್ತು ಹೊಸ ಕೃಷಿ ಮಸೂದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊಗಳಿದ್ದಾರೆ.
ನಿಜಾಂಶ: ಈ ವೀಡಿಯೊ 2019 ರಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಅಲ್ಲದೆ, ಈ ವಿಡಿಯೋ ಯುನೈಟೆಡ್ ಸ್ಟೇಟ್ಸ್‌ನ ಸಿಖ್ ಸಮುದಾಯದ ಜನರನ್ನು ತೋರಿಸುತ್ತದೆ. ಅಮೆರಿಕಾದ ಸಿಖ್ ಜನರು ‘ಖಲಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗುತ್ತಿದ್ದು, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊಗಳಿದ್ದಾರೆ. ಭಾರತದಲ್ಲಿ ಜಾರಿಗೆ ತರಲಾಗಿರುವ ಹೊಸ ಕೃಷಿ ಮಸೂದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೂ ಈ ವೀಡಿಯೊಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ಯೂಟ್ಯೂಬ್ ಬಳಕೆದಾರರು ‘08 ಡಿಸೆಂಬರ್ 2020’ರಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಈ ವೀಡಿಯೊವನ್ನು ‘ಅಮೆರಿಕದಲ್ಲಿ ಸಿಖ್ಖರು ಲಾಂಗ್ ಲೈವ್ ಇಮ್ರಾನ್ ಖಾನ್ ಎಂದು ಘೋಷಣೆ ಕೂಗಿದ್ದಾರೆ’ ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚು ವಿಶ್ವಾಸಾರ್ಹ ಮೂಲಗಳಿಗಾಗಿ ಹುಡುಕಿದಾಗ, ಪಾಕಿಸ್ತಾನದ ಸುದ್ದಿ ವೆಬ್‌ಸೈಟ್ ‘ಸಿಯಾಸಾಟ್.ಪಿಕೆ’(Siasat.pk) ಯ ಟ್ವೀಟ್ ದೊರೆತಿದೆ. ಆ ಟ್ವೀಟ್‌ನಲ್ಲಿಯೂ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿ ಅಮೆರಿಕದ ಸಿಖ್ಖರು ‘ಲಾಂಗ್ ಲೈವ್ ಇಮ್ರಾನ್ ಖಾನ್, ಪಂಜಾಬ್ ಖಲಿಸ್ತಾನ್ ಮತ್ತು ಕಾಶ್ಮೀರ ಪಾಕಿಸ್ತಾನವಾಗಬೇಕು’ ಎಂಬ ಘೋಷಣೆಗಳನ್ನು ಕೂಗಿದ್ದಾರೆ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಪಾಕಿಸ್ತಾನದ ಹಿರಿಯ ರಾಜಕಾರಣಿ ಮತ್ತು ಪಂಜಾಬ್ ಆಹಾರ ಸಚಿವ ಅಬ್ದುಲ್ ಅಲೀಮ್ ಖಾನ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಇದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಮೆರಿಕದ ಸಿಖ್ಖರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಅವರ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ವೀಡಿಯೊ 2019 ರಿಂದ ಅಂತಹುದೇ ಹಕ್ಕುಗಳೊಂದಿಗೆ ಅಂತರ್ಜಾಲದಲ್ಲಿ ಲಭ್ಯವಿದೆ. ಈ ಎಲ್ಲ ಸಾಕ್ಷ್ಯಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವು ಭಾರತದಲ್ಲಿ ಹೊಸ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಸಂಬಂಧಿಸಿದ್ದಲ್ಲ ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಯುಎಸ್‌ನಲ್ಲಿ ಖಲಿಸ್ತಾನ್ ಪರ ಬೆಂಬಲಿಗರು ಪಾಕಿಸ್ತಾನವನ್ನು ಹೊಗಳಿದ್ದಾರೆ ಎಂಬ ವಿಡಿಯೋವನ್ನು ಭಾರತೀಯ ರೈತರು ಹೊಸ ಕೃಷಿ ಮಸೂದೆಗಳ ವಿರುದ್ದ ನಡೆಯುತ್ತಿರುವ ಪ್ರತಿಭಟನೆಗೆ ತಳುಕು ಹಾಕಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.