Fake News - Kannada
 

ಪಟಾಕಿಯಿಂದಾಗಿ ದ್ವಿಚಕ್ರ ವಾಹನ ಸ್ಫೋಟಗೊಂಡ ವಿಡಿಯೋವನ್ನು ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟದ ವೀಡಿಯೊ ಎಂದು ಪ್ರತಿಪಾದಿಸಿ ಶೇರ್‌ ಮಾಡಲಾಗುತ್ತಿದೆ

0

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಸ್ಪೋಟಗೊಳ್ಳುತ್ತಿರುವ ದೃಶ್ಯಗಳು ಎಂದು ಪ್ರತಿಪಾದಿಸಿ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪೋಸ್ಟ್‌ನ ವಾಸ್ತವಾಂಶವನ್ನು ಪರಿಶೀಲಿಸೋಣ.

ಪ್ರತಿಪಾದನೆ: ಎಲೆಕ್ಟ್ರಿಕ್‌ ದ್ವಿಚಕ್ರ ವಾಹನದ ಸ್ಫೋಟದ ದೃಶ್ಯಗಳನ್ನು ತೋರಿಸುವ ವೀಡಿಯೊ.

ವಾಸ್ತವ: ತಮಿಳುನಾಡಿನಲ್ಲಿ ಇತ್ತೀಚೆಗೆ ಸ್ಪೋಟಗೊಂಡಿರುವ ದ್ವಿಚಕ್ರವಾಹನದ ವಿಡಿಯೊವನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಬಳಿ ವ್ಯಕ್ತಿಯೊಬ್ಬರು ಅವರ 7 ವರ್ಷದ ಮಗನೊಂದಿಗೆ ನಾಡ ಪಟಾಕಿಯ ಕಟ್ಟಿನೊಂದಿಗೆ ಸಾಗಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಘರ್ಷಣೆಯಿಂದ ಉಂಟಾದ ಶಾಖದಿಂದಾಗಿ ಸ್ಫೋಟ ಸಂಭವಿಸಿದೆ ಎಂದು ವಿಲ್ಲುಪುರಂ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ವಿಲ್ಲುಪುರಂ ಎಸ್ಪಿ ಶ್ರೀನಾಥ ಅವರು ಎಲೆಕ್ಟ್ರಿಕ್ ವಾಹನವಾದ ಕಾರಣ ಅಪಘಾತ ಸಂಭವಿಸಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ ಅನ್ನು ಎಚ್ಚರಿಕೆಯಿಂದ ಗಮನಿಸಿದಾಗ, ವೀಡಿಯೊ ಮೇಲಿನ ಬಲಭಾಗದಲ್ಲಿ ‘PTC NEWS’ ಚಾನಲ್ ಲೋಗೋವನ್ನು ನೋಡಬಹುದು. ನಾವು ನೀಡಿರುವ ಉದಾಹರಣೆ ವಿಡಿಯೊದಲ್ಲಿ ‘ಮಾಸ್ಟರ್‌ ನ್ಯೂಸ್‌ ಕನ್ನಡ’ ಎಂದು ಅದರ ಮೇಲೆ ಬೇರೆಯೆ ಲೋಗೊ ಅಂಟಿಸಲಾಗಿದೆ.

ನಾವು ಈ ವೀಡಿಯೊಗಾಗಿ ‘PTC NEWS’ ಚಾನೆಲ್‌ನ ಅಧಿಕೃತ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಹುಡುಕಾಡಿದ್ದೇವೆ. ಆಗ ನಮಗೆ 2021 ನವೆಂಬರ್‌ 06 ರಂದು ‘PTC NEWS’ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು ಅದರಲ್ಲಿ ವಿವರಣೆಯೊಂದಿಗೆ ಪ್ರಕಟಿಸಲಾಗಿದೆ. “ಪಟಾಕಿಯಿಂದಾಗಿ ಉಂಟಾದ ಭಾರೀ ಸ್ಪೋಟದಿಂದ ತಂದೆ ಮತ್ತು ಮಗ ಭಯಾನಕ ಸಾವು” ಎಂದು ಅದರಲ್ಲಿ ಬರೆಯಲಾಗಿದೆ. ಈ ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ಇಟ್ಟು ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ, 2021 ರ ನವೆಂಬರ್ 05 ರಂದು ‘NDTV’ ಪ್ರಕಟಿಸಿದ ಸುದ್ದಿಯಲ್ಲಿ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊ ಕಂಡುಬಂದಿದೆ. ‘NDTV’ 2021 ರ ನವೆಂಬರ್‌ 4 ರಂದು, ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸ್ಫೋಟದ ದೃಶ್ಯಗಳು ಎಂದು ವರದಿ ಮಾಡಿದೆ.

ಈ ಅಪಘಾತದ ಸಂಪೂರ್ಣ ವಿವರಗಳನ್ನು ವರದಿ ಮಾಡುತ್ತಾ, ಹಲವಾರು ತಮಿಳು ಸುದ್ದಿ ವೆಬ್‌ಸೈಟ್‌ಗಳು 2021 ರ ನವೆಂಬರ್ 04 ರಂದು ಸುದ್ದಿಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಲೇಖನಗಳಲ್ಲಿ ವರದಿಯಾಗಿರುವ ವಿವರಗಳ ಪ್ರಕಾರ, ಕಲೈನೇಸನ್ (37) ಎಂಬ ವ್ಯಕ್ತಿ ತನ್ನ ಮಗ ಪ್ರದೀಶ್‌ನೊಂದಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರ ವಾಹನಲ್ಲಿ ಅರಿಯಾನಕುಪ್ಪಂನಲ್ಲಿ ತನ್ನ ಮಾವನ ಸಹಾಯದಿಂದ ತಯಾರಿಸಿದ್ದಾರೆ ಎಂದು ಹೇಳಲಾದ ನಾಡ ಪಟಾಕಿಗಳ ಚೀಲವನ್ನು ತೆಗೆದುಕೊಂಡು ಹೋಗುತ್ತಿದ್ದರು. ವಾಹನವು ಪುದುಚೇರಿ ಮತ್ತು ಕೊಟ್ಟಕುಪ್ಪಂ ನಡುವಿನ ಗಡಿಯನ್ನು ತಲುಪಿದಾಗ, ಪಟಾಕಿಗಳು ಸ್ಫೋಟಗೊಂಡವು ಮತ್ತು ತಂದೆ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದರು.

ಇಂಡಿಯನ್ ಎಕ್ಸ್‌ಪ್ರೆಸ್’ಜೊತೆ ಮಾತನಾಡಿದ ವಿಲ್ಲುಪುರಂ ಎಸ್‌ಪಿ ಶ್ರೀನಾಥ, “ಕಲೈನೇಸನ್ ಅವರು ನವೆಂಬರ್ 3 ರಂದು ಪುದುಚೇರಿಯಿಂದ ಎರಡು ಚೀಲ ‘ನಾಟ್ಟ್‌ ಪಟ್ಟಾಸ್’ (ನಾಡ ಪಟಾಕಿ) ಖರೀದಿಸಿದ್ದರು. ಅದನ್ನು ತಮ್ಮ ಅತ್ತೆಯ ಮನೆಯಲ್ಲಿ ಇರಿಸಿದ್ದರು. ನವೆಂಬರ್ 4 ರಂದು ಅವರು ಕೂನಿಮೇಡುವಿನಿಂದ ಒಂದು ಚೀಲವನ್ನು ತೆಗೆದುಕೊಂಡು ಪುದುಚೇರಿ ಕಡೆಗೆ ಸವಾರಿ ಮಾಡುವಾಗ ಅಪಘಾತ ಸಂಭವಿಸಿದೆ. ಘರ್ಷಣೆಯಿಂದ ಉಂಟಾದ ಶಾಖದಿಂದಾಗಿ ಪಟಾಕಿಗಳು ಸ್ಫೋಟಗೊಂಡಿರಬಹುದು. ಪೊಲೀಸರು ಕೂನಿಮೇಡುವಿನಿಂದ ಒಂದು ಗೋಣಿ ಚೀಲ ದೇಶಿ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ. ಅವರ ಭಾರತೀಯ ದಂಡ ಸಂಹಿತೆ ಮತ್ತು ಸ್ಫೋಟಕ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ”

ದ್ವಿಚಕ್ರ ವಾಹನವು ಎಲೆಕ್ಟ್ರಿಕ್ ವಾಹನ ಆಗಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಹೇಳುವ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗೆ ಸಂಬಂಧಿಸಿದಂತೆ ಸ್ಪಷ್ಟನೆ ಪಡೆಯಲು ‘ದಿ ಕ್ವಿಂಟ್‘, ವಿಲ್ಲುಪುರಂ ಎಸ್ಪಿ ಶ್ರೀನಾಥ ಅವರನ್ನು ಸಂಪರ್ಕಿಸಿದೆ. ಎಲೆಕ್ಟ್ರಿಕ್ ವಾಹನದಿಂದ ಅಪಘಾತ ಸಂಭವಿಸಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಎಸ್‌ಪಿ ಶ್ರೀನಾಥ, ಪಟಾಕಿ ಸಿಡಿತವೇ ಸ್ಫೋಟಕ್ಕೆ ಕಾರಣ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಟಾಕಿಗಳಿಂದ ಉಂಟಾದ ದ್ವಿಚಕ್ರ ವಾಹನದ ಸ್ಫೋಟದ ವೀಡಿಯೊವನ್ನು ವಿದ್ಯುತ್ ಮೋಟಾರು ವಾಹನದ ಸ್ಫೋಟ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll