ದೆಹಲಿಯಲ್ಲಿ ಮುಸ್ಲಿಂ ಜಿಮ್ ಟ್ರೈನರ್ ಹಿಂದೂ ಯುವತಿಯರನ್ನು ಸ್ಪರ್ಶಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದ್ದು, ಆತ ಹಿಂದೂ ಮಹಿಳೆಯರನ್ನು ಟ್ರ್ಯಾಪ್ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ. ಜಿಮ್ ಟ್ರೈನರ್ ಬಿಲಾಲ್ ಖಾನ್, ಹಿಂದೂ ಹಿಂದೂ ಕುಟುಂಬಗಳ ಯುವತಿಯರನ್ನು ಬಲೆಗೆ ಬೀಳಿಸಲು ಸಾಕಷ್ಟು ಜಿಮ್‌ಗಳನ್ನು ನಡೆಸುತ್ತಿದ್ದಾನೆ ಎಂದು ಈ ಪೋಸ್ಟ್ನಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ದೆಹಲಿಯಲ್ಲಿ ಮಹಿಳಾ ಟ್ರೈನಿಯೊಂದಿಗೆ ಮುಸ್ಲಿಂ ಜಿಮ್ ಟ್ರೈನರ್ ಅನುಚಿತ ವರ್ತನೆಯ ವೀಡಿಯೊ.
ಫ್ಯಾಕ್ಟ್: ಈ ವೀಡಿಯೊದಲ್ಲಿ ಜಿಮ್ ಟ್ರೈನರ್ ತನ್ನ ಹೆಂಡತಿಗೆ ತರಬೇತಿ ನೀಡುತ್ತಿರುವುದು ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಹೊರತು ಭಾರತದಲ್ಲಿ ಅಲ್ಲ. ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಫಿಟ್ನೆಸ್ ಟ್ರೈನರ್ ಇಮ್ರಾನ್ ರಜಾಕ್ ಅವರು ತಮ್ಮ ಪತ್ನಿ ರೇಷ್ಮಾ ರಜಾಕ್ ಅವರಿಗೆ ಈ ವೀಡಿಯೊದಲ್ಲಿ ತರಬೇತಿ ನೀಡುತ್ತಿದ್ದಾರೆ. ಇವರಿಬ್ಬರು ಒಂದೇ ಸಮುದಾಯದವರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ನಾವು ಇಂಟರ್ನೆಟ್ ನಲ್ಲಿ ಈ ವೀಡಿಯೊದ ವಿವರಗಳನ್ನು ಹುಡುಕಿದಾಗ, ಇದು ಟ್ರಿನಿಡಾಡ್ ಮತ್ತು ಟೊಬಾಗೊ ಫಿಟ್‌ನೆಸ್ ಟ್ರೈನರ್ ಇಮ್ರಾನ್ ರಜಾಕ್‌ಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಈ ವೀಡಿಯೊವನ್ನು 2017 ರಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ‘ಬಾಡಿ ಬೈ ಇಮ್ರಾನ್’ ಹ್ಯಾಂಡಲ್‌ಗಳಲ್ಲಿ ಪ್ರಕಟಿಸಲಾಗಿದೆ ಎಂದು ಕಂಡುಬಂದಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಒಂದರಲ್ಲಿ ಇಬ್ಬರಿಗೂ ಒಂದೇ ರೀತಿಯ ತಾಲೀಮು ವೀಡಿಯೊ ಕಂಡುಬಂದಿದೆ. ಇಮ್ರಾನ್ ರಜಾಕ್, ಜಿಮ್‌ನಲ್ಲಿ ತನ್ನ ಪತ್ನಿ ರೇಷ್ಮಾ ರಜಾಕ್ ಅವರಿಗೆ ತರಬೇತಿ ನೀಡುವ ದೃಶ್ಯಗಳು ಎಂದು ಈ ವೀಡಿಯೊದ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ.

ಇಮ್ರಾನ್ ಮತ್ತು ರೇಷ್ಮಾ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳನ್ನು ಗಮನಿಸಿದಾಗ, ಅವರು ವಿವಾಹಿತ ದಂಪತಿಗಳು ಎಂಬುದು ದೃಢಪಟ್ಟಿದೆ. 2020 ರಲ್ಲಿ, ಇಮ್ರಾನ್ ರಜಾಕ್ ‘ಆಲ್ಟ್ ನ್ಯೂಸ್’ಗೆ ವೀಡಿಯೊದಲ್ಲಿ ತನ್ನೊಂದಿಗೆ ಕಾಣಿಸಿಕೊಂಡ ಮಹಿಳೆ ತನ್ನ ಹೆಂಡತಿ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಅವರಿಬ್ಬರು ಒಂದೇ ಸಮುದಾಯಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸಿದ್ದಾರೆ.

ವೀಡಿಯೊದಲ್ಲಿರುವ ಜಿಮ್ ಟ್ರಿನಿಡಾಡ್ ಮತ್ತು ಟೊಬಾಗೋದಾಗಿದ್ದು ಇದು ಭಾರತದಲ್ಲ. ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಈ ಜಿಮ್ ಅನ್ನು ‘ಲಾಸ್ಟ್ ಸರ್ಕ್ಯುಲರ್ ಜಿಮ್‘ ಎಂದು ಉಲ್ಲೇಖಿಸುವ ‘ಬಾಡಿ ಬೈ ಇಮ್ರಾನ್’ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ವಿವಾಹಿತ ದಂಪತಿಗಳ ಹಳೆಯ ಜಿಮ್ ವರ್ಕ್‌ಔಟ್ ವೀಡಿಯೊವನ್ನು ದೆಹಲಿಯ ಮಹಿಳಾ ತರಬೇತಿದಾರರೊಂದಿಗಿನ ಮುಸ್ಲಿಂ ಜಿಮ್ ಟ್ರೈನರ್ ನ ದುರ್ನಡತೆಯ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.