Fake News - Kannada
 

ಸಂಬಂಧವಿಲ್ಲದ ಹಳೆಯ ಪೋಟೋಗಳನ್ನು ಭಾರತದ ಕೊರೊನಾ ರೋಗಿಗಳ ಚಿತ್ರಣ ಎಂದು ಹಂಚಿಕೊಳ್ಳಲಾಗುತ್ತಿದೆ

0

ಭಾರತದ  ಕೊರೊನಾ ರೋಗಿಗಳ ಪರಿಸ್ಥಿತಿಯನ್ನು ತೋರಿಸುವ ಒಂದೆರಡು ಚಿತ್ರಗಳನ್ನು ಹೊಂದಿರುವ ಕೊಲಾಜ್  ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋಗಳಲ್ಲಿ ರೋಗಿಗಳು ಆಮ್ಲಜನಕ ಸಿಲಿಂಡರ್‌ಗಳನ್ನು ರಸ್ತೆಗಳಲ್ಲಿ ತಾವೇ ಹಿಡಿದುಕೊಂಡು ಸಾಗಿಸುವುದನ್ನು ತೋರಿಸುತ್ತವೆ. ಹಾಗಾಗದರೇ ಈ ಕೊಲಾಜ್‌ಗಳಲ್ಲಿ ಇರುವ ಪೋಟೋಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ  ಪೋಸ್ಟ್‌ಗಳ ಸತ್ಯಾಸತ್ಯತೆಯನ್ನು ಪರೊಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾಗಿರುವ ಆವೃತ್ತಿ ಇಲ್ಲಿದೆ.

ಪ್ರತಿಪಾದನೆ: ಭಾರತದ ಕೊರೊನಾ ರೋಗಿಗಳಿಗೆ ಆಮ್ಲಜನಕ ಸಿಲಿಂಡರ್‌ಗಳ ಪ್ರಸ್ತುತ ಅಗತ್ಯತೆಯನ್ನು ತೋರಿಸುವ ಫೋಟೋಗಳು.

ಸತ್ಯಾಂಶ: ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿರುವ ಪೋಸ್ಟ್‌ನ ಮೊದಲ ಫೋಟೋ ಉತ್ತರಪ್ರದೇಶದಲ್ಲಿ ನಡೆದ ಹಳೆಯ ಘಟನೆಯದ್ದು.  ಏಪ್ರಿಲ್ 2018 ರಲ್ಲಿ ಈ ವೃದ್ಧೆ ಉತ್ತರ ಪ್ರದೇಶದ ಆಗ್ರಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹೊರಗೆ ಆಮ್ಲಜನಕ ಸಿಲಿಂಡರ್ ಹೊತ್ತುಕೊಂಡು ಹೋಗಿರುವುದು ಕಂಡುಬಂದಿದೆ.  ಶೇರ್‌ ಮಾಡಲಾಗಿರುವ ಇನ್ನೊಂದು ಫೋಟೋ ಬಾಂಗ್ಲಾದೇಶದ ಬರಿಶಾಲ್ ನಗರಕ್ಕೆ ಸಂಬಂಧಿಸಿದೆ. ಈ ಫೋಟೋದಲ್ಲಿ ಬಾಂಗ್ಲಾದೇಶದ ನಾಗರಿಕ ತನ್ನ ತಾಯಿಯನ್ನು ಬೈಕ್‌ನಲ್ಲಿ ಕುರಿಸಿಕೊಂಡು, ಬೆನ್ನಿಗೆ ಆಮ್ಲಜನಕ ಸಿಲಿಂಡರ್ ಕಟ್ಟಿಕೊಂಡು ಬಾರಿಶಾಲ್‌ನ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗಳು ತಪ್ಪಾಗಿವೆ.

ಫೋಟೋ 1:

ವೈರಲ್ ಆಗಿರುವ ಅಜ್ಜಿಯ ಪೋಟೋವನ್ನು ಗೋಗಲ್‌ನ ರಿವರ್ಸ್ ಇಮೇಜ್  ಹುಡುಕಾಟದಲ್ಲಿ ಹುಡುಕಿದಾಗ,  07 ಏಪ್ರಿಲ್  2018 ರಂದು  ‘ಎಎನ್‌ಐ’ಸುದ್ದಿ ಸಂಸ್ಥೆಯ ವೆಬ್‌ಸೈಟ್ ಪ್ರಕಟಿಸಿದ ವೀಡಿಯೊದಲ್ಲಿ ಇದೇ ರೀತಿಯ ದೃಶ್ಯ ಕಂಡುಬಂದಿದೆ.  ಈ ಘಟನೆ 2018 ರಲ್ಲಿ ಉತ್ತರ ಪ್ರದೇಶದ ಆಗ್ರಾ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ‘ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೊರಗೆ ಆಂಬ್ಯುಲೆನ್ಸ್ ಸೇವೆಗಾಗಿ ಕಾಯುತ್ತಿರುವ ವೃದ್ಧೆಯೊಬ್ಬಳ ದೃಶ್ಯಗಳು ’ ಎಂದು ಎಎನ್‌ಐ ವರದಿ ಮಾಡಿದೆ.

ಇದೇ ಪೋಟೋವನ್ನು ಹಲವು ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ವಿವರಗಳಿಗಾಗಿ ಹುಡುಕಿದಾಗ, ಏಪ್ರಿಲ್ 2018 ರಲ್ಲಿ ಈ ಘಟನೆಯನ್ನು ವರದಿ ಮಾಡಿರುವ ಹಲವಾರು ಸುದ್ದಿ ಲೇಖನಗಳನ್ನು  ಕಂಡು ಬಂದಿವೆ. ಅವುಗಳನ್ನು ಇಲ್ಲಿ ಕಾಣಬಹುದು. ಈ ಲೇಖನಗಳಲ್ಲಿ ಆಂಬ್ಯುಲೆನ್ಸ್  ಸೇವೆಗಾಗಿ ಆಗ್ರಾ ಮೀಡಿಯಾ ಕಾಲೇಜಿನ ತುರ್ತು ವಾರ್ಡ್‌ನ ಹೊರಗೆ ಕಾಯುತ್ತಿರುವ ಅಸಹಾಯಕ ವೃದ್ಧೆ ಮತ್ತು ಆಕೆಯ ಮಗನ ದೃಶ್ಯಗಳೆಂದು ವರದಿಯಾಗಿವೆ. ಆದ್ದರಿಂದ, ಈ ಚಿತ್ರವು ಹಳೆಯ ಘಟನೆಯಾದ್ದಾಗಿದೆ. ಜೊತೆಗೆ  ಇದು ಭಾರತದ ಪ್ರಸ್ತುತ ಕೊರೊನಾ ರೋಗಿಗಳಿಗೆ ಸಂಬಂಧಿಸಿಲ್ಲ.

ಫೋಟೋ -2:

ಪೋಸ್ಟ್‌ನಲ್ಲಿ ಹಂಚಲಾದ ಎರಡನೇ ವೈರಲ್ ಫೋಟೋದ ರಿವರ್ಸ್ ಇಮೇಜ್ ಹುಡುಕಾಟದಲ್ಲಿ, 2021 ರ ಏಪ್ರಿಲ್ 18 ರಂದು ‘ದಿ ಡೈಲಿ ಸ್ಟಾರ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಈ ಲೇಖನದಲ್ಲಿ ಬಾಂಗ್ಲಾದೇಶದಲ್ಲಿ ಬರಿಶಾಲ್ ನಗರದ ನಿವಾಸಿ ಜಿಯಾಲ್ ಹಸನ್, ತನ್ನ ತಾಯಿಯನ್ನು ಬೈಕ್‌ನಲ್ಲಿ ಕರೆದುಕೊಂಡು, ತನ್ನ ಬೆನ್ನಿಗೆ ಆಮ್ಲಜನಕ ಸಿಲಿಂಡರ್ ಕಟ್ಟಿಕೊಂಡು ಆಸ್ಪತ್ರೆಗೆ ಹೋಗುತ್ತಿದ್ದಾರೆ ಎನ್ನಲಾಗಿದೆ. ಜಿಯಾಲ್ ಹಸನ್ ತನ್ನ ತಾಯಿ ರೆಹಾನಾ ಬೇಗಂನನ್ನು ಬರಿಶಾಲ್‌ನ ಶೇರ್-ಎ-ಬಾಂಗ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ಫೋಟೋ ಸೆರೆಹಿಡಿಯಲಾಗಿದೆ.

ಬಾಂಗ್ಲಾದೇಶದಲ್ಲಿ ಈ ಘಟನೆಯ ಬಗ್ಗೆ ಪ್ರಕಟವಾದ ಸುದ್ದಿ ಲೇಖನಗಳು ಮತ್ತು ಮಾಧ್ಯಮ ವರದಿಗಳನ್ನು ನೋಡಬಹುದು.

ಕೊರೊನಾ ಪ್ರಕರಣಗಳಲ್ಲಿ ಭಾರಿ ಏರಿಕೆಯ ಹಿನ್ನೆಲೆಯಲ್ಲಿ, ಭಾರತದ ಆಸ್ಪತ್ರೆಗಳು ಆಮ್ಲಜನಕದ ಸಿಲಿಂಡರ್‌ಗಳ ಕೊರತೆಯನ್ನು ಎದುರಿಸುತ್ತಿವೆ. ಆಸ್ಪತ್ರೆಯಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳ ಕೊರತೆಯಿಂದಾಗಿ ಕೆಲವು ಆಸ್ಪತ್ರೆಗಳು ಹೊಸ ಕೊರೊನಾ ಸೋಂಕಿತ ರೋಗಿಗಳನ್ನು ದಾಖಲಿಸಿಕೊಳ್ಳುವುದನ್ನು ನಿಲ್ಲಿಸಿದವು. ಆಮ್ಲಜನಕ ಸಿಲಿಂಡರ್ ಬಿಕ್ಕಟ್ಟಿನ ಬಗ್ಗೆ ಪ್ರಕಟವಾದ ಸುದ್ದಿ ಲೇಖನಗಳನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕ ಸುದ್ದಿಯನ್ನು ನೋಡಬಹುದು. ಇತ್ತೀಚೆಗೆ, ಮಹಾರಾಷ್ಟ್ರದ ನಾಸಿಕ್ ಆಸ್ಪತ್ರೆಯಲ್ಲಿ ಆಮ್ಲಜನಕ ಟ್ಯಾಂಕರ್ ಸೋರಿಕೆಯಾದ ಕಾರಣ 24 ಕೊರೊನಾ ಸೋಂಕಿತ ರೋಗಿಗಳು ಸಾವನ್ನಪ್ಪಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಂಬಂಧವಿಲ್ಲದ ಹಳೆಯ ಫೋಟೋಗಳನ್ನು ಭಾರತದ ಕೊರೊನಾ ರೋಗಿಗಳು ಆಕ್ಸಿಜನ್ ಸಿಲಿಂಡರ್‌ಗಳನ್ನು ತಾವೇ ತೆಗೆದುಕೊಂಡು ಸಾಗುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll