Fake News - Kannada
 

ಭಾರತದಿಂದ ಪರಾರಿಯಾಗಲು ಬಿಜೆಪಿ ಮುಖಂಡರಿಗೆ ಲಂಚ ನೀಡಿದ್ದೇನೆ ಎಂದು ನೀರವ್ ಮೋದಿ ಲಂಡನ್ ನ್ಯಾಯಾಲಯದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ

0

ಪಂಜಾಬ್ ನ್ಯಾಶನಲ್‌‌ ಬ್ಯಾಂಕ್ ಹಣವಂಚನೆ ಆರೋಪಿ, ಗುಜರಾತಿನ ವಜ್ರ ವ್ಯಾಪಾರಿ ನೀರವ್ ಮೋದಿ ಭಾರತದಿಂದ ಪರಾರಿಯಾಗಲು ಬಿಜೆಪಿ ಮುಖಂಡರಿಗೆ 1300 ಕೋಟಿ ಲಂಚ ನೀಡಿದ್ದಾಗಿ ಲಂಡನ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಲೇಖನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ನ ಸತ್ಯಾಂಶವನ್ನು ಪರಿಶೀಲಿಸೋಣ.

ಪ್ರತಿಪಾದನೆ: ಭಾರತದಿಂದ ಪರಾರಿಯಾಗಲು ನೀರವ್‌ ಮೋದಿ ಬಿಜೆಪಿ ನಾಯಕರಿಗೆ  1300 ಕೋಟಿ ಲಂಚ ನೀಡಿದ್ದಾಗಿ ಲಂಡನ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.

ಸತ್ಯಾಂಶ: ನೀರವ್ ಮೋದಿಯ ಕುರಿತು ಲಂಡನ್‌ ನ್ಯಾಯಾಲಯದ ವಿಚಾರಣೆಗಳು ಮತ್ತು ಅವರ ಇರುವಿಕೆಯ ಅನೇಕ ಸುದ್ದಿಗಳು ವರದಿಯಾಗಿದೆ. ಆದರೆ ಈ ಯಾವುದೇ ಸುದ್ದಿಗಳಲ್ಲಿ ನೀರವ್ ಮೋದಿ ನೀಡಿದ್ದಾರೆ ಎಂದು ಹೇಳಲಾದ ಈ ರೀತಿಯಾದ ಹೇಳಿಕೆಯ ಕುರಿತು ಯಾವುದೆ ಉಲ್ಲೇಖವಿಲ್ಲ. ಆದ್ದರಿಂದ, ಪೋಸ್ಟ್‌‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನೀರವ್‌ ಮೋದಿ ದೇಶವನ್ನು ತೊರೆಯಲು ಬಿಜೆಪಿ ನಾಯಕರಿಗೆ ಹಣ ನೀಡಿರುವ ಕುರಿತ ಹೇಳಿಕೆಯ ಬಗ್ಗೆ ನಾವು ಸುದ್ದಿಗಳನ್ನು ಹುಡುಕಿದೆವು ಆದರೆ ಆ ರೀತಿಯ ಯಾವುದೆ ವರದಿಗಳು ಕಂಡುಬಂದಿಲ್ಲ. ನೀರವ್ ಮೋದಿ ಪ್ರಸ್ತುತ ನೈರುತ್ಯ ಲಂಡನ್‌ನ ವಾಂಡ್ಸ್‌ವರ್ತ್‌ ಜೈಲಿನಲ್ಲಿದ್ದಾರೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ಸುದ್ದಿ ಪ್ರಕಟಿಸಿದೆ. ಸುದ್ದಿಯ ಪ್ರಕಾರ, 2021 ರ ಫೆಬ್ರವರಿ 25 ರಂದು ಯುಕೆ ನ್ಯಾಯಾಲಯವು ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿತು. ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹಸ್ತಾಂತರದ ಆದೇಶಕ್ಕೆ ಸಹಿ ಹಾಕಿದರು. ಆದರೆ, ನೀರವ್ ಮೋದಿ ಭಾರತದಲ್ಲಿ ನ್ಯಾಯಯುತ ವಿಚಾರಣೆಯನ್ನು ಎದುರಿಸಲು ಸಾಧ್ಯವಿಲ್ಲ ಎಂದು ಆರೋಪಿಸಿ ನ್ಯಾಯಾಲಯದ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಮಾರ್ಚ್ 2019 ರಲ್ಲಿ ನೀರವ್ ಮೋದಿಯನ್ನು ಯುಕೆ ಅಧಿಕಾರಿಗಳು ಮಧ್ಯ ಲಂಡನ್‌ನಲ್ಲಿ ಬಂಧಿಸಿದ್ದರು. ಅದರ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಭಾರತದಿಂದ ಪರಾರಿಯಾಗಿದ್ದಕ್ಕಾಗಿ ಬಿಜೆಪಿ ಮುಖಂಡರಿಗೆ ಲಂಚ ನೀಡಿದ್ದೇನೆ ಎಂದು ಲಂಡನ್ ನ್ಯಾಯಾಲಯದಲ್ಲಿ ನೀರವ್ ಮೋದಿ ಹೇಳಿಕೆ ನೀಡಿದ್ದಾರೆಂದು ಈ ಯಾವುದೆ ವರದಿಗಳು  ಉಲ್ಲೇಖಿಸಿಲ್ಲ.

ಭಾರತದಿಂದ ಪರಾರಿಯಾಗಲು ಬಿಜೆಪಿ ಅಥವಾ ಕಾಂಗ್ರೆಸ್ ಮುಖಂಡರಿಗೆ ಲಂಚ ನೀಡುವ ಬಗ್ಗೆ ನೀರವ್ ಮೋದಿ ಹೇಳಿಕೆ ನೀಡಿದ್ದಾರೆ ಎಂದು 2019 ರಲ್ಲಿ ಹೇಳಲಾಗಿತ್ತು. ಇದರ ಬಗ್ಗೆ ಫ್ಯಾಕ್ಟ್‌‌ಲಿ ಫ್ಯಾಕ್ಟ್‌ಚೆಕ್ ಮಾಡಿತ್ತು. ಅದನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದಿಂದ ಪರಾರಿಯಾಗಲು ಬಿಜೆಪಿ ಮುಖಂಡರಿಗೆ 1300 ಕೋಟಿ ಲಂಚ ನೀಡಿದ ಬಗ್ಗೆ ನೀರವ್ ಮೋದಿ ಲಂಡನ್ ನ್ಯಾಯಾಲಯದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ.

Share.

About Author

Comments are closed.

scroll