Fake News - Kannada
 

2021 ಕುಂಭಮೇಳದ ಚಿತ್ರಗಳು ಎಂದು ತಪ್ಪು ಮಾಹಿತಿಯೊಂದಿಗೆ ಹಳೆಯ ಫೋಟೋಗಳು ವೈರಲ್‌

0

ದೇಶದಲ್ಲಿ COVID-19 ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ 2021 ಕುಂಭಮೇಳದಲ್ಲಿ ಭಕ್ತರ ಕೂಟಗಳು ಎಂದು ಕೆಲವು ಹಿಂದೂ ಭಕ್ತರ ದೊಡ್ಡ ಕೂಟಗಳನ್ನು ತೋರಿಸುವ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು

ಪ್ರತಿಪಾದನೆ: ಇತ್ತೀಚಿನ ಕುಂಭಮೇಳದಲ್ಲಿ ದೊಡ್ಡ ಹಿಂದೂ ಭಕ್ತರ ಕೂಟಗಳ ಚಿತ್ರಗಳು.

ನಿಜಾಂಶ: ಈ ಚಿತ್ರಗಳು ಹರಿದ್ವಾರದಲ್ಲಿ ನಡೆಯುತ್ತಿರುವ 2021 ಕುಂಭಮೇಳಕ್ಕೆ ಸಂಬಂಧಿಸಿಲ್ಲ. ಒಂದು ಚಿತ್ರವು 2019 ರಲ್ಲಿ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದ್ದಾಗಿದೆ. ಇನ್ನೊಂದು ಚಿತ್ರವು 2013 ರಲ್ಲಿ ನಡೆದ ಕುಂಭಮೇಳದಲ್ಲಿನ ಭಕ್ತರ ಕೂಟವನ್ನು ತೋರಿಸುತ್ತದೆ. ಆದ್ದರಿಂದ ಪೋಸ್ಟ್‌ನಲ್ಲಿ ಹೇಳಲಾದ ಪ್ರತಿಪಾದನೆ ತಪ್ಪಾಗಿದೆ.

ಫೋಟೋ 1:

ಈ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ ಸಿಜಿಟಿಎನ್‌ನ 2019 ರ ಸುದ್ದಿ ಲೇಖನವು ದೊರೆತಿದೆ. ಆ ಲೇಖನದಲ್ಲಿ ಅದೇ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ಲೇಖನದ ಪ್ರಕಾರ, ಚಿತ್ರವು ‘ಭಾರತದ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ ಪವಿತ್ರ ಸಂಗಮದಲ್ಲಿ ತೆಗೆಯಲಾಗಿರುವ ಐದು ಕಿಲೋಮೀಟರ್ ವಿಸ್ತಾರದ ಸ್ನಾನದ ಸ್ಥಳದ ವೈಮಾನಿಕ ನೋಟವನ್ನು ತೋರಿಸುತ್ತದೆ’.

ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ಇದೇ ರೀತಿಯ ಚಿತ್ರವು ದೊರೆತಿದೆ. ಆದರೆ ಸ್ಟಾಕ್ ಇಮೇಜ್ ಗ್ಯಾಲರಿಯಾದ ಅಲಾಮಿಯದಲ್ಲಿರುವ ಈ ಚಿತ್ರವು ಸ್ವಲ್ಪ ಹತ್ತಿರದ ನೋಟವನ್ನು ಹೊಂದಿದೆ. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಈ ಫೋಟೋದ ವಿವರಗಳ ಪ್ರಕಾರ, ಈ ಚಿತ್ರವನ್ನು 2019 ರಲ್ಲಿ ಯುಪಿಯ ಪ್ರಯಾಗರಾಜ್‌ನಲ್ಲಿ ನಡೆದ ಕುಂಭ ಮೇಳದಲ್ಲಿ ಕ್ಲಿಕ್ ಮಾಡಲಾಗಿದೆ. 2019 ರ ಕುಂಭಮೇಳಕ್ಕೆ ಸಂಬಂಧಿಸಿದಂತೆ ಅದೇ ಚಿತ್ರವನ್ನು ಪ್ರಕಟಿಸಿದ ಕೆಲವು ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ಈ ನಿರ್ದಿಷ್ಟ ಚಿತ್ರವು ಈ ವರ್ಷ (2021) ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಸಂಬಂಧಿಸಿಲ್ಲ ಎಂಬ ಅಂಶವನ್ನು ಈ ವೆಬ್‌ಸೈಟ್‌ ಮತ್ತು ವರದಿ ಲೇಖನಗಳು ಖಾತರಿಪಡಿಸಿವೆ.

ಫೋಟೋ 2:

ಈ ನಿರ್ದಿಷ್ಟ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ 2013 ರಲ್ಲಿ ಅದೇ ಚಿತ್ರವನ್ನು ಪ್ರಕಟಿಸಿದ ಲೇಖನವೊಂದು ದೊರೆತಿದೆ. ಈ ಲೇಖನದಲ್ಲಿ ಲೇಖಕರು 2013 ರಲ್ಲಿ ಕುಂಭ ಮೇಳಕ್ಕೆ ಭೇಟಿ ನೀಡಿದ ಅನುಭವದ ಬಗ್ಗೆ ಮತ್ತು ಸಾಮಾನ್ಯವಾಗಿ ಕುಂಭಮೇಳದ ಬಗ್ಗೆ ಬರೆದಿದ್ದಾರೆ. ಈ ಲೇಖನವು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿರುವ ಚಿತ್ರದಂತೆಯೇ ಹಲವು ಭಕ್ತರನ್ನು ಅದೇ ಉಡುಪಿನಲ್ಲಿ ತೋರಿಸುವ ಇನ್ನೂ ಕೆಲವು ಚಿತ್ರಗಳನ್ನು ಹೊಂದಿದೆ. ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಇದು ಸಾಬೀತುಪಡಿಸುತ್ತದೆ.

ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಎರಡು ದಿನಗಳಲ್ಲಿ ಕನಿಷ್ಠ 1000 ಕೋವಿಡ್‌-19 ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ರೀತಿಯ ಪೋಸ್ಟ್‌ಗಳನ್ನು ತಪ್ಪು ಮಾಹಿತಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಸುದ್ದಿ ವರದಿಗಳ ಪ್ರಕಾರ, ನಡೆಯುತ್ತಿರುವ ಕುಂಭಮೇಳವನ್ನು ಕಟ್ಟುನಿಟ್ಟಾದ COVID-19 ಮಾನದಂಡಗಳ ಅಡಿಯಲ್ಲಿ ಆಯೋಜಿಸಲಾಗುತ್ತಿದೆ. ಅಲ್ಲದೆ, ಆಗಮನಕ್ಕೆ 72 ಗಂಟೆಗಳಿಗಿಂತ ಮುಂಚಿನ ಕೋವಿಡ್‌ ಋಣಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಭಕ್ತರು ತರಲೇಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದ ಕೆಲವು ಚಿತ್ರಗಳನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದಲ್ಲಿ COVID-19 ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೂ ನಡೆಯುತ್ತಿರುವ ಕುಂಭಮೇಳಕ್ಕೆ ಹೋಲಿಸಿ ಕೆಲವು ಹಳೆಯ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ

Share.

About Author

Comments are closed.

scroll