Fake News - Kannada
 

ತ್ರಿಪುರಾದಲ್ಲಿ ಕೋಮು ಹಿಂಸಾಚಾರವನ್ನು ಪ್ರಚೋದಿಸುತ್ತಿರುವ ಪೋಲೀಸರು ಎಂದು ಬಿಹಾರದ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ…!

0

ತ್ರಿಪುರಾ ಪೊಲೀಸ್ ಸಿಬ್ಬಂದಿಗಳು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುತ್ತಾ, ಮುಸ್ಲಿಮರ ಮನೆಗಳನ್ನು ಸುಡಲು ಗಲಭೆಕೋರರನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿಕೊಂಡು ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಯ ಹಿನ್ನೆಲೆಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ತ್ರಿಪುರಾದಲ್ಲಿ ಮುಸ್ಲಿಂ ಮನೆಗಳನ್ನು ಸುಡಲು ಗಲಭೆಕೋರರೊಂದಿಗೆ ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುತ್ತಿರುವ ಪೋಲೀಸರ ವೀಡಿಯೊ.

ಸತ್ಯ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಹಳೆಯದು. ಈ ವೀಡಿಯೊವನ್ನು ಮಾರ್ಚ್ 2018 ರಲ್ಲಿ ಬಿಹಾರದ ಸಮಸ್ತಿಪುರ್ ನಗರದಲ್ಲಿ ರಾಮನವಮಿ ಆಚರಣೆಯ ಸಂದರ್ಭದಲ್ಲಿ ಸೆರೆಹಿಡಿಯಲಾಗಿದೆ. ಇತ್ತೀಚಿನ ತ್ರಿಪುರಾ ಕೋಮುಗಲಭೆಗೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ಬಳಸಿ ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ, 2018ರಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿರುವ ಇದೇ ರೀತಿಯ ವಿಡಿಯೋಗಳು ದೊರೆತಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. 30 ಮಾರ್ಚ್ 2018 ರಂದು ‘ಪಾಟ್ನಾ ಲೈವ್’ ಸುದ್ದಿ ವಾಹಿನಿ ಮಾಡಿದ ಟ್ವೀಟ್‌ನಲ್ಲಿ ಇದೇ ರೀತಿಯ ದೃಶ್ಯಗಳಿರುವ ವೀಡಿಯೊ ಕಂಡುಬಂದಿದೆ. ‘ಪಾಟ್ನಾ ಲೈವ್’ ಸುದ್ದಿ ವಾಹಿನಿಯು, 2018 ರಲ್ಲಿ ರಾಮ ನವಮಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಬಿಹಾರದ ಸಮಸ್ತಿಪುರ ಜಿಲ್ಲೆಯ ಪೊಲೀಸರು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳು ಎಂದು ವರದಿ ಮಾಡಿದೆ.

‘ದಿ ಪಾಟ್ನಾ’ ಲೈವ್ ಸುದ್ದಿ ವಾಹಿನಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೈರಲ್ ವಿಡಿಯೋಗೆ ಸಂಬಂಧಿಸಿದ ಲೇಖನವನ್ನು ಪ್ರಕಟಿಸಿತ್ತು. ಲೇಖನದಲ್ಲಿ ವರದಿಯಾಗಿರುವ ವಿವರಗಳ ಪ್ರಕಾರ, ರಾಮನವಮಿ ಹಬ್ಬದ ಭದ್ರತೆಯ ಉಸ್ತುವಾರಿ ವಹಿಸಿದ್ದ ಎಎಸ್‌ಐ ಸಮಸ್ತಿಪುರದಲ್ಲಿ ನಡೆದ ಧರ್ಮ ಮೆರವಣಿಗೆಯಲ್ಲಿ ಪಾಲ್ಗೊಂಡು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದ್ದರು. ಘಟನೆಯ ನಂತರ, 26 ಮಾರ್ಚ್ 2018 ರಂದು, ಸಮಸ್ತಿಪುರದ ರೋಸ್ಡಾ ಬಜಾರ್‌ನಲ್ಲಿ ಕೋಮು ಘರ್ಷಣೆ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಪೊಲೀಸರು ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೋಮು ಘರ್ಷಣೆಯ ನಂತರ ಎಎಸ್‌ಐ ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುವ ಈ ವೀಡಿಯೊ ವೈರಲ್ ಆಗಿದ್ದು, ತಮ್ಮ ಕರ್ತವ್ಯವನ್ನು ಉಲ್ಲಂಘಿಸಿದ ಮತ್ತು ಧಾರ್ಮಿಕ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗಿದ ಪೊಲೀಸ್ ಅಧಿಕಾರಿಯ ಈ ಕೃತ್ಯಗಳನ್ನು ಹಲವಾರು ನೆಟ್ಟಿಗರು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.

ಮಾರ್ಚ್ 2018 ರಲ್ಲಿ, ಸಮಸ್ತಿಪುರದಲ್ಲಿ ರಾಮ ನವಮಿ ಆಚರಣೆಯ ಸಂದರ್ಭದಲ್ಲಿ ನಡೆದ ಕೋಮು ಹಿಂಸಾಚಾರವನ್ನು ಹಲವಾರು ಸುದ್ದಿ ವೆಬ್‌ಸೈಟ್‌ಗಳು ವರದಿ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಹಳೆಯದಾಗಿದೆ ಮತ್ತು ತ್ರಿಪುರಾದಲ್ಲಿನ ಘಟನೆಗಳಿಗೆ ಸಂಬಂಧಿಸಿದ್ದಲ್ಲ ಎಂದು ತೀರ್ಮಾನಿಸಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಬಿಹಾರದ ಹಳೆಯ ವೀಡಿಯೊವನ್ನು ತ್ರಿಪುರಾ ಪೊಲೀಸರು ತ್ರಿಪುರಾದಲ್ಲಿ ಕೋಮುಗಲಭೆಯನ್ನು ಪ್ರಚೋದಿಸುವ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll