Fake News - Kannada
 

ಪಿಎಂ ನರೇಂದ್ರಮೋದಿ ವಿಶ್ವಸಂಸ್ಥೆಯಲ್ಲಿ ಮಾತನಾಡುವ ವೇಳೆ ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಹೊರಭಾಗದಲ್ಲಿ ಖಾಲಿಸ್ಥಾನಿ ಬೆಂಬಲಿಗರು ಭಾರತದ ಭಾವುಟವನ್ನು ಹರಿದಿರುವ ವಿಡಿಯೋ ಇದಾಗಿದೆ

0

ಉತ್ತರ ಪ್ರದೇಶದ ಲಖಿಂಪುರ್​ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿದು ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದ ಬಳಿಕ, ಖಾಲಿಸ್ತಾನಿ ಬೆಂಬಲಿಗರ ಗುಂಪು ಭಾರತದ ಭಾವುಟವನ್ನು ಹರಿದಿದ್ದಾರೆ ಎಂಬ ಒಕ್ಕಣೆಯೊಂದಿಗೆ ಒಂದು ಪೋಸ್ಟ್​​ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್​ಆಗಿದೆ. ಈ ವಿಡಿಯೋವನ್ನು ಭಾರತದಲ್ಲಿನ ರೈತರ ಹೋರಾಟ ಹಾಗೂ ಉತ್ತರ ಪ್ರದೇಶದ ಘಟನೆಗೆ ತಳುಕು ಹಾಕಲಾಗಿದೆ. ಇಲ್ಲಿ ಪ್ರತಿಪಾದಿಸಲಾಗಿರುವ ವಿಷಯದ ಸತ್ಯಾಂಶವನ್ನು ನೋಡೋಣ.

ಪ್ರತಿಪಾದನೆ: ಉತ್ತರ ಪ್ರದೇಶದಲ್ಲಿ ಪ್ರತಿಭಟಿಸುತ್ತಿರುವ ರೈತರು ಭಾರತದ ಭಾವುಟವನ್ನು ಹರಿಯುತ್ತಿರುವುದು.

ಸತ್ಯಾಂಶ: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ತಿಂಗಳು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಾಗ ನ್ಯೂಯಾರ್ಕ್​ನಲ್ಲಿನ  ವಿಶ್ವಸಂಸ್ಥೆಯ ಕಚೇರಿಯ ಹೊರಗೆ ಖಾಲಿಸ್ತಾನಿ ಬೆಂಬಲಿಗರು ನಡೆಸಿದ ಪ್ರತಿಭಟನೆಯ ವಿಡಿಯೋ ಇದಾಗಿದೆ. ಕೆಲವು ಆನ್​ಲೈನ್​ನ್ಯೂಸ್ ಪೋರ್ಟಲ್​ಗಳು ಇದೇ ಥರದ ವಿಡಿಯೋದ ವರದಿ ಮಾಡಿದ್ದಾರೆ. ಈ ವಿಡಿಯೋ ಭಾರತಕ್ಕೆ ಅಥವಾ ಲಖಿಂಪುರ್​ಖೇರಿ ಘಟನೆಗೆ ಸಂಬಂಧಿಸಿದ್ದಲ್ಲ. ಈ ಪೋಸ್ಟ್​ನಲ್ಲಿ ಪ್ರತಿಪಾದಿಸಿರುವುದು ಸುಳ್ಳಾಗಿದೆ.

ಸಂಬಂಧಪಟ್ಟ ಕೀವರ್ಡ್​​ಗಳೊಂದಿಗೆ ಗೂಗಲ್​ಸರ್ಚ್ ಮಾಡಿದಾಗ ಇದೇ ವಿಡಿಯೋವನ್ನು ಎನ್​​ಆರ್​ಐ ಹೆರಾಲ್ಡ್​ ಟ್ಟೀಟ್ ಮಾಡಿ ಶೇ​ರ್ಮಾಡಿರುವುದು ಕಂಡುಬಂದಿದೆ. “ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ವೇಳೆ ನ್ಯೂಯಾರ್ಕ್ ನಲ್ಲಿ ಖಲಿಸ್ತಾನಿ ಸಿಖ್ ಬಂಡುಕೋರರು ಭಾರತೀಯ ರಾಷ್ಟ್ರೀಯ ಧ್ವಜವನ್ನು ಹರಿದು ಹಾಕಿ, ಉಗ್ರ ಘೋಷಣೆಗಳನ್ನು ಕೂಗಿದರು” ಎಂಬ ವಿವರಣೆಯನ್ನು ಶೇರ್​ಮಾಡಲಾಗಿರುವ ವಿಡಿಯೋಕ್ಕೆ ನೀಡಲಾಗಿದೆ. ‘ಎನ್ ಆರ್ ಐ ಹೆರಾಲ್ಡ್’ ಆಸ್ಟ್ರೇಲಿಯಾ ಮೂಲದ ವೆಬ್ ನ್ಯೂಸ್ ಪೋರ್ಟಲ್ ಆಗಿದ್ದು, ಇದು ಹೆಚ್ಚಾಗಿ ಭಾರತಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಒಳಗೊಂಡಿರುತ್ತದೆ. ಎನ್ ಆರ್ ಐ ಹೆರಾಲ್ಡ್ ಇದೇ ವಿಡಿಯೋವನ್ನು ತಮ್ಮ ಫೇಸ್ ಬುಕ್ ಪೇಜ್​ನಲ್ಲೂ ಹಂಚಿಕೊಂಡಿದೆ.

ಮೇಲಿನ ಟ್ವೀಟ್​ನಿಂದ ಒಂದು ಸುಳಿವು ಪಡೆದು ಹುಡುಕಾಡಿದಾಗ, ಕಳೆದ ತಿಂಗಳು (ಸೆಪ್ಟೆಂಬರ್​2021) ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಹೊರಗೆ ಪ್ರತಿಭಟನೆ ನಡೆದಿರುವ ವರದಿಯ ಕೆಲವು ಆನ್​ಲೈನ್​ನ್ಯೂಸ್​ಗಳು (ಇಲ್ಲಿ ಮತ್ತು ಇಲ್ಲಿ) ದೊರೆತವು. ಈ ಲೇಖನಗಳು ಪ್ರತಿಭಟನೆಗೆ ಸಂಬಂಧಿಸಿದ ಫೋಟೋಗಳನ್ನೂ ಪ್ರಕಟಿಸಿದ್ದು, ವೈರಲ್​ವಿಡಿಯೋದಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಹರಿದುಹಾಕಿರುವ ಅದೇ ಇಬ್ಬರು ಪ್ರತಿಭಟನಾಕಾರರನ್ನು ಈ ಚಿತ್ರಗಳಲ್ಲೂ ಕಾಣಬಹುದು.

ಕಳೆದ ತಿಂಗಳು ಮೋದಿಯವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಈ ಮೇಲೆ ನಮೂದಿಸಲಾಗಿರುವ ಪ್ರತಿಭಟನೆಯ ನೇರಪ್ರಸಾರವನ್ನು ಯೂಟ್ಯೂಬ್​ಚಾನೆಲ್​ವೊಂದು ಮಾಡಿದೆ.  ವೈರಲ್​ಆಗಿರುವ ವಿಡಿಯೋದಲ್ಲಿರುವ ಇಬ್ಬರು ವ್ಯಕ್ತಿಗಳೇ ಈ ವಿಡಿಯೋದಲ್ಲೂ ಇರುವುದನ್ನು ಕಾಣಬಹುದು.  ಅದಲ್ಲದೆ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವ ವೇಳೆ ಪ್ರತಿಭಟನೆ ನಡೆದಿರುವ ಕುರಿತು ಮುಖ್ಯವಾಹಿನಿ ಸುದ್ದಿ ಸಂಸ್ಥೆಗಳೂ (ಇಲ್ಲಿ ಮತ್ತು ಇಲ್ಲಿ) ವರದಿ ಮಾಡಿವೆ. ಇವೆಲ್ಲವುಗಳಿಂದ ತಿಳಿಯುವುದೇನೆಂದರೆ ಕಳೆದ ತಿಂಗಳು ಮೋದಿಯವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ವೇಳೆ ಖಾಲಿಸ್ಥಾನಿ ಬೆಂಬಲಿಗರು ಪ್ರತಿಭಟಿಸಿರುವುದು ಈ ವಿಡಿಯೋದಲ್ಲಿ ಕಂಡು ಬರುತ್ತದೆ. ಭಾರತ ಅಥವಾ ಲಖಿಂಪುರ್​ಖೇರಿ ಘಟನೆಗೂ ಇದು ಸಂಬಂಧಿಸಿದ್ದಲ್ಲ. 

ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಧಾನಿ ಮೋದಿಯವರ ವಿಶ್ವಸಂಸ್ಥೆಯ ಭಾಷಣದ ವೇಳೆ ಖಲಿಸ್ತಾನ್ ಬೆಂಬಲಿಗರು ನ್ಯೂಯಾರ್ಕ್​ನ ವಿಶ್ವಸಂಸ್ಥೆಯ ಕಟ್ಟಡದ ಹೊರಗೆ ಭಾರತೀಯ ರಾಷ್ಟ್ರ ಧ್ವಜವನ್ನು ಹರಿದು ಹಾಕಿದ ವಿಡಿಯೋವನ್ನು ಲಖಿಂಪುರ್ ಖೇರಿ ಘಟನೆಗೆ ಆರೋಪಿಸಲಾಗಿದೆ.

Share.

About Author

Comments are closed.

scroll