Fake News - Kannada
 

ಗೋಮೂತ್ರ ಬಳಕೆಯಿಂದ ಕ್ಯಾನ್ಸರ್ ಕಡಿಮೆಯಾಗಿದೆ ಎಂದು ಚಾಲಕ ಹೇಳಿದ್ದ ಮಾತನ್ನು ಕಾಂಗ್ರೆಸ್ ಸಂಸದ ಹೇಳಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

0

ಗೋಮೂತ್ರ ಉಪಯೋಗಿಸಿದ್ದರಿಂದ ಕ್ಯಾನ್ಸರ್ ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಸಂಸದರೊಬ್ಬರು ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ ಎಂದಿರುವ  ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂಬುದನ್ನು ಪರಿಶೀಲಿಸೋಣ

ಪ್ರತಿಪಾದನೆ: ಗೋಮೂತ್ರ ಉಪಯೋಗದಿಂದ ಕ್ಯಾನ್ಸರ್ ಸಂಪೂರ್ಣವಾಗಿ ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಸಂಸದರೊಬ್ಬರು ರಾಜ್ಯಸಭೆಯಲ್ಲಿ ಮಾತನಾಡುತ್ತಿರುವ ದೃಶ್ಯಗಳು.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊವನ್ನು ಎಡಿಟ್ ಮಾಡಲಾಗಿದೆ. ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ರಾಜ್ಯಸಭಾ ಸಂಸದ ಆಸ್ಕರ್ ಫರ್ನಾಂಡೀಸ್ ಅವರು 2020 ರಲ್ಲಿ ರಾಜ್ಯಸಭೆಯಲ್ಲಿ ಮಾತನಾಡುತ್ತಾ, ಕ್ಯಾನ್ಸರ್ ಅನ್ನು ಜಯಿಸಿದ ವ್ಯಕ್ತಿಯೊಂದಿಗೆ ಹಂಚಿಕೊಂಡ ಅನುಭವವನ್ನು ವಿವರಿಸಿದ್ದರು. ಮೀರತ್‌ನ ಆಶ್ರಮವೊಂದರಲ್ಲಿ ಕೆಲಸ ಮಾಡುತ್ತಿರುವ ಚಾಲಕರೊಬ್ಬರು ಗೋಮೂತ್ರ ಉಪಯೋಗಿಸಿದ್ದರಿಂದ ಕ್ಯಾನ್ಸರ್ ಅನ್ನು ಜಯಿಸಿದ್ದಾಗಿ ತಿಳಿಸಿದ್ದರು ಎಂದು ಆಸ್ಕರ್ ಫರ್ನಾಂಡೀಸ್ ಹೇಳಿದ್ದರು. ಆದರೆ, ಆಸ್ಕರ್ ಫರ್ನಾಂಡೀಸ್ ಅವರಿಗೆ ಕ್ಯಾನ್ಸರ್ ಇದೆ ಅಥವಾ ಗೋಮೂತ್ರದಿಂದ ಕ್ಯಾನ್ಸರ್ ಕಡಿಮೆಯಾಗುತ್ತದೆ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.

ಪೋಸ್ಟ್‌ನಲ್ಲಿ ಹೇಳಲಾಗಿರುವ ವಿಷಯಗಳ ಮಾಹಿತಿಗಾಗಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ, ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್ ಅವರು 18 ಮಾರ್ಚ್ 2020 ರಂದು ‘ಪ್ರಿಂಟ್’ ಪ್ರಕಟಿಸಿದ ಲೇಖನದಲ್ಲಿ ‘ಗೋಮೂತ್ರ’ದಿಂದ ಕ್ಯಾನ್ಸರ್ ಅನ್ನು ಜಯಿಸಿದ ವ್ಯಕ್ತಿಯ ಕಥೆಯನ್ನು ರಾಜ್ಯಸಭೆಯಲ್ಲಿ ಉಲ್ಲೇಖಿಸಿದ್ದಾರೆ’ ಎಂದು ತಿಳಿದುಬಂದಿದೆ.  ಹೋಮಿಯೋಪತಿ ಮತ್ತು ಭಾರತೀಯ ವೈದ್ಯಕೀಯ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಆಯೋಗಗಳ ಸ್ಥಾಪನೆಯ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಆಸ್ಕರ್ ಫರ್ನಾಂಡೀಸ್ ಅವರು ತಮಗೆ ತಿಳಿದಿರುವ ವ್ಯಕ್ತಿಯೊಬ್ಬರು ‘ಗೋಮೂತ್ರ’ದ ಮೂಲಕ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಜಯಿಸಿದ್ದಾರೆ ಎಂದು ಲೇಖನ ವರದಿ ಮಾಡಿದೆ.

18 ಮಾರ್ಚ್ 2020 ರಂದು ರಾಜ್ಯಸಭೆಯಲ್ಲಿ ಆಸ್ಕರ್ ಫರ್ನಾಂಡೀಸ್ ಅವರು ತಮ್ಮ ಸಂಪೂರ್ಣ ಭಾಷಣವನ್ನು ಮಾಡುತ್ತಿರುವ ವೀಡಿಯೊವನ್ನು ‘ಸಂಸದ್ ಟಿವಿ’ ಸುದ್ದಿ ವಾಹಿನಿ ಪ್ರಕಟಿಸಿದೆ. ವಿಡಿಯೋದ ಸುಮಾರು 2:10 ನಿಮಿಷಗಳ ಸಮಯದಲ್ಲಿ ಆಸ್ಕರ್ ಫೆರ್ನಾಂಡಿಸ್ ಹೀಗೆ ಹೇಳಿದ್ದಾರೆ. “ನಾನು ಮೀರತ್‌ನಲ್ಲಿರುವ ಆಶ್ರಮಕ್ಕೆ ಹೋಗಿದ್ದೆ. ವಾಪಸಾಗುವುದು ತಡವಾದ ಕಾರಣ ಆಶ್ರಮ ಸ್ವಾಮೀಜಿಯವರು ತಮ್ಮ ಚಾಲಕನನ್ನು ನನ್ನ ಜೊತೆಯಲ್ಲಿ ಕಳುಹಿಸಿದರು. ಆ ಚಾಲಕನನ್ನು ಆಶ್ರಮದಲ್ಲಿ ನೀನೇಕೆ ಉಳಿದಿದ್ದಿಯಾ? ಎಂದು ಕೇಳಿದೆ, ‘ಸರ್, ನಾನು ಯಾವುದೇ ಚಿಕಿತ್ಸೆಯಿಂದ ಗುಣವಾಗದ ತೀವ್ರ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ಈ ಆಶ್ರಮಕ್ಕೆ ಸೇರಿಕೊಂಡೆ. ಈ ಆಶ್ರಮ ನೀಡಿದ ಗೋಮೂತ್ರದಿಂದ ನನ್ನ ಕ್ಯಾನ್ಸರ್ ಸಂಪೂರ್ಣವಾಗಿ ವಾಸಿಯಾಯಿತು. ಅದಕ್ಕಾಗಿಯೇ ನನಗೆ ಹೊಸ ಜೀವನವನ್ನು ನೀಡಿದ ಈ ಆಶ್ರಮದ ಸೇವೆಯನ್ನು ನನ್ನ ಜೀವನದುದ್ದಕ್ಕೂ ಮಾಡಲು ನಿರ್ಧರಿಸಿದ್ದೇನೆ, ”ಎಂದು ಚಾಲಕ ಹೇಳಿಕೊಂಡರು ಎಂದು ಹೇಳಿದ್ದಾರೆ.

18 ಮಾರ್ಚ್ 2020 ರಂದು ರಾಜ್ಯಸಭೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ಮಾಡಿದ ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಇದರಲ್ಲಿ ಆಸ್ಕರ್ ಫೆರ್ನಾಂಡೀಸ್ ರಾಜ್ಯಸಭೆಯಲ್ಲಿ ಚಾಲಕ ತನ್ನೊಂದಿಗೆ ಹಂಚಿಕೊಂಡ ಅನುಭವವನ್ನು ಸರಳವಾಗಿ ವಿವರಿಸಿದ್ದಾರೆ. ಆಸ್ಕರ್ ಫರ್ನಾಂಡೀಸ್ ಅವರು ತಮಗೆ ಕ್ಯಾನ್ಸರ್ ಇದೆ ಅಥವಾ ಗೋಮೂತ್ರ ಉಪಯೋಗದಿಂದ ಕ್ಯಾನ್ಸರ್ ಕಡಿಮೆಯಾಗುತ್ತದೆ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೊವನ್ನು ಕಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ ಎಂದು ಖಚಿತವಾಗಿ ಹೇಳಬಹುದು.

 ಒಟ್ಟಾರೆ ಕಾಂಗ್ರೆಸ್ ಸಂಸದ ದಿವಂಗತ ಆಸ್ಕರ್ ಫರ್ನಾಂಡೀಸ್ ಅವರು ಗೋಮೂತ್ರ ಬಳಸಿ ಕ್ಯಾನ್ಸರ್‌ನಿಂದ ಗುಣವಾಗಿರುವುದನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿಲ್ಲ.

Share.

About Author

Comments are closed.

scroll