Fake News - Kannada
 

ಬಾಂಗ್ಲಾದೇಶದ ಹಿಂದೂ ದೇವಾಲಯದ ಮೇಲಿನ ದಾಳಿಯ ವೀಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯ ವೇಳೆ ನಡೆದ ದಾಳಿ ಎಂದು ಹಂಚಿಕೊಳ್ಳಲಾಗುತ್ತಿದೆ

0

ಪಶ್ಚಿಮ ಬಂಗಾಳದ ದುರ್ಗಾ ದೇವಿ ಮಂಡಲಗಳ ಮೇಲೆ ಕೆಲವು ಮುಸ್ಲಿಮರು ಕಲ್ಲು ಎಸೆಯುತ್ತಿರುವ ವೀಡಿಯೊ ಎಂದು ಹೇಳುವ ಪೋಸ್ಟ್‌ಗಳೊಂದಿಗೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಲೇಖನದ ಮೂಲಕ ಆ ವೀಡಿಯೊದ ಸತ್ಯವನ್ನು ತಿಳಿಯೋಣ.

ಪ್ರತಿಪಾದನೆ: ಪಶ್ಚಿಮ ಬಂಗಾಳದ ದುರ್ಗಾ ದೇವಿ ಮಂಡಲಗಳ ಮೇಲೆ ಮುಸ್ಲಿಮರು ದಾಳಿ ಮಾಡಿದ ವಿಡಿಯೋ.

ನಿಜಾಂಶ: ಬಾಂಗ್ಲಾದೇಶದ ಚಾಂದ್‌ಪುರದಲ್ಲಿರುವ ಹಿಂದೂ ದೇವಾಲಯದ ಮೇಲೆ ಮುಸ್ಲಿಮರು ದಾಳಿ ನಡೆಸಿದ ಘಟನೆಯ ವಿಡಿಯೋ ಇದಾಗಿದ್ದು, ಈ ಘಟನೆಯ ಸುದೀರ್ಘ ವೀಡಿಯೋವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಹಲವಾರು ಸುದ್ದಿ ಸಂಸ್ಥೆಗಳೂ ಸಹ ಇದೇ ದೃಶ್ಯಗಳಿರುವ ವಿಡಿಯೋ ತುಣುಕನ್ನು ಪ್ರಕಟಿಸಿವೆ. ಈ ವಿಡಿಯೋಗೂ ಪಶ್ಚಿಮ ಬಂಗಾಳಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.

ಹಂಚಿಕೊಳ್ಳಲಾಗಿರುವ ವೀಡಿಯೊದ ಕೆಳಗಿನ ಬಲಭಾಗದಲ್ಲಿ ‘ದಿ ಬೈಟ್’ ಲೋಗೋ ಸ್ಪಷ್ಟವಾಗಿ ಕಾಣಿಸುತ್ತದೆ. ಇದರ ಆಧಾರದ ಮೇಲೆ, ಟ್ವಿಟರ್‌ನಲ್ಲಿ ಹುಡುಕಿದಾಗ ಅದೇ ಹೆಸರಿನ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿರುವ ಟ್ವೀಟ್ ತೊರೆತಿದೆ. ಆದರೆ, ಟ್ವೀಟ್ ಪ್ರಕಾರ, ಬಾಂಗ್ಲಾದೇಶದ ಚಾಂದ್‌ಪುರದ ದುರ್ಗಾ ಮಂಟಪದ ಮೇಲೆ ಮುಸ್ಲಿಮರ ದಾಳಿಗೆ ಸಂಬಂಧಿಸಿದ ವೀಡಿಯೊ ಎಂದು ಬರೆಯಲಾಗಿದೆ.

ಮೇಲಿನ ವಿವರಗಳ ಆಧಾರದ ಮೇಲೆ, ಕೀವರ್ಡ್‌ಗಳನ್ನು ಬಳಸಿ ಫೇಸ್‌ಬುಕ್‌ನಲ್ಲಿ ಹುಡುಕಿದಾಗ, ವೈರಲ್ ವೀಡಿಯೊದ ವಿಭಿನ್ನ ಆವೃತ್ತಿಯನ್ನು (ಉದ್ದದ) ಹಂಚಿಕೊಂಡಿರುವ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು (ಇಲ್ಲಿ ಮತ್ತು ಇಲ್ಲಿ) ದೊರೆತಿವೆ. ಈ ವಿಡಿಯೋಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ಜನರು ದುರ್ಗಾ ಮಂಟಪಕ್ಕೆ ಕಲ್ಲು ಎಸೆಯುತ್ತಿದ್ದಾರೆ ಎಂದು ವಿವರಿಸಲಾಗಿದೆ. ಅಂದರೆ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ಉದ್ದದ ವಿಡಿಯೋದಿಂದ ದುರ್ಗಾ ಮಂಟಪ ಕಾಣಿಸದಂತೆ ಟ್ರಿಮ್ ಮಾಡಿ ಹಂಚಿಕೊಳ್ಳಲಾಗಿದೆ.

ಮೇಲಿನ ವಿವರಗಳನ್ನು ಆಧರಿಸಿ ಈ ದಾಳಿಗಳಿಗೆ ಸಂಬಂಧಿಸಿದ ಸುದ್ದಿ ಲೇಖನಗಳನ್ನು ಹುಡುಕಿದಾಗ, ವೈರಲ್ ವೀಡಿಯೊದಲ್ಲಿನ ದೃಶ್ಯಗಳನ್ನು ಹೋಲುವ ಫೋಟೋವನ್ನು ಪ್ರಕಟಿಸಿದ ಬಾಂಗ್ಲಾದೇಶದ ಸ್ಥಳೀಯ ಸುದ್ದಿ ಲೇಖನ ದೊರೆತಿದೆ. ಆ ವರದಿಯ ಪ್ರಕಾರ, ವೈರಲ್ ವೀಡಿಯೊ ಚಂದಾಪುರದ ಹಿಂದೂ ದೇವಾಲಯದ ಮೇಲಿನ ದಾಳಿಯ ಬಗ್ಗೆ ವಿವರಿಸಿದೆ. ‘ಕೊಮಿಲ್ಲಾದಲ್ಲಿ ನಡೆದ ಘಟನೆಯ ನಂತರ, ಯುವಕರ ಗುಂಪೊಂದು ಅಕ್ಟೋಬರ್ 13 ರಂದು ರಾತ್ರಿ 8 ಗಂಟೆಯ ಸಮಯದಲ್ಲಿ ಶ್ರೀ ಶ್ರೀ ಲಕ್ಷ್ಮಿ-ನಾರಾಯಣ ಜಿಯು ಅಕ್ರಾ ಮತ್ತು ಹಾಜಿಗಂಜ್ ಬಜಾರ್‌ನಲ್ಲಿರುವ ರಾಮಕೃಷ್ಣ ಮಿಷನ್ ದೇವಾಲಯದ ಮೇಲೆ ದಾಳಿ ಮಾಡಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.

ಬಾಂಗ್ಲಾದೇಶದ ಕುಮಿಲ್ಲಾದ ಚಿತ್ತಗಾಂಗ್ ಡಿವಿಷನ್‌ನಲ್ಲಿ ದುರ್ಗಾಪೂಜಾ ಆಚರಣೆಯ ಸಂದರ್ಭದಲ್ಲಿ ಕುರಾನ್ಅನ್ನು ಅಪವಿತ್ರಗೊಳಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿಯು ಅಲ್ಲಿನ ಮುಸ್ಲಿಮರು ಹಿಂದೂ ದೇವಾಲಯಗಳು ಮತ್ತು ದುರ್ಗಾ ಮಂಡಲಗಳ ಮೇಲೆ ದಾಳಿ ನಡೆಸಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಚಾಂದ್‌ಪುರದ ಹಿಂದೂ ದೇವಾಲಯದ ಮೇಲೂ ದಾಳಿ ನಡೆಸಲಾಗಿದ್ದು, ಚಂದಾಪುರದಲ್ಲಿ ನಡೆದ ದಾಳಿಗಳ ಕುರಿತು ವರದಿ ಮಾಡಿರುವ ಸ್ಥಳೀಯ ಬಾಂಗ್ಲಾದೇಶದ ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಬಾಂಗ್ಲಾದೇಶದ ದಾಳಿಯ ಕುರಿತು ಭಾರತೀಯ ಮಾಧ್ಯಮಗಳೂ ಸಹ ತಮ್ಮ ವರದಿಯಲ್ಲಿ ಚಂದಾಪುರದ ಹಿಂದೂ ದೇವಾಲಯದ ಮೇಲಿನ ದಾಳಿಯ ದೃಶ್ಯಗಳನ್ನು ಸಹ ಪ್ರಸಾರ ಮಾಡಿವೆ. ಈ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇದಲ್ಲದೆ, ಪಶ್ಚಿಮ ಬಂಗಾಳದ ದುರ್ಗಾ ಮಂಡಲಗಳ ಮೇಲೆ ಮುಸ್ಲಿಮರು ದಾಳಿ ಮಾಡಿದ ಯಾವುದೇ ಸುದ್ದಿ ವರದಿಗಳು ಇಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿರುವ ವೀಡಿಯೊ ಬಾಂಗ್ಲಾದೇಶದ ಘಟನೆಗೆ ಸಂಬಂಧಿಸಿದೆ ಮತ್ತು ಈ ವೀಡಿಯೊಗೂ ಬಂಗಾಳಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳಬಹುದು.

ಒಟ್ಟಾರೆಯಾಗಿ ಬಾಂಗ್ಲಾದೇಶದ ಹಿಂದೂ ದೇವಾಲಯದ ಮೇಲಿನ ದಾಳಿಯ ವೀಡಿಯೊವನ್ನು ಪಶ್ಚಿಮ ಬಂಗಾಳದ ದುರ್ಗಾ ಮಂಟಪದ ಮೇಲಿನ ದಾಳಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll