Fake News - Kannada
 

ಕರ್ನಾಟಕ ಯೂತ್‌ ಕಾಂಗ್ರೆಸ್ ಕಚೇರಿ ಉದ್ಘಾಟನೆಯಲ್ಲಿ ಇಸ್ಲಾಂ ಧಾರ್ಮಿಕ ವಿಧಾನಗಳನ್ನು ಅನುಸರಿಸಿಲ್ಲ

0

ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಕಮಿಟಿ (KPYCC) ಕಚೇರಿಗೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕ ಯೂತ್ ಕಾಂಗ್ರೆಸ್ ಕಚೇರಿ ಉದ್ಘಾಟನೆಯಂದು ಕಾಂಗ್ರೆಸ್‌ ನಾಯಕರು ಇಸ್ಲಾಮಿಕ್ ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಕರ್ನಾಟಕ ಯೂತ್ ಕಾಂಗ್ರೆಸ್ ಕಚೇರಿಯನ್ನು ಇಸ್ಲಾಮಿಕ್ ಸಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸಿ ಉದ್ಘಾಟಿಸಲಾಗಿದೆ ಎಂದು ಪ್ರತಿಪಾದಿಸಲಾಗಿದೆ.

ನಿಜಾಂಶ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೋ ಅಧಿಕೃತವಾಗಿದ್ದು, ಫೋಟೋದಲ್ಲಿ ತೋರಿಸಿರುವಂತೆ ಕಾಂಗ್ರೆಸ್ ನಾಯಕರು ಇಸ್ಲಾಮಿಕ್ ಪ್ರಾರ್ಥನೆಗಳನ್ನು ಮಾಡಿದ್ದು ನಿಜ. ಆದರೆ ಅವರು ಇತರ ಧಾರ್ಮಿಕ ಪ್ರಾರ್ಥನೆಗಳನ್ನು ಸಹ ಮಾಡಿದ್ದಾರೆ. ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಕೆಪಿವೈಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನದಲ್ಲಿ ಪೂಜೆ, ಹೋಮ ಹವನ ನಡೆಸಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಸಂಪ್ರದಾಯದಂತೆ ಪ್ರಾರ್ಥನೆ ಮಾಡುತ್ತಿರುವ ಫೋಟೋವನ್ನು ಮಾತ್ರ ಆಯ್ಕೆ ಮಾಡಿಕೊಂಡು ಅದನ್ನು ಅಪಹಾಸ್ಯ ಮಾಡಲಾಗುತ್ತಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ದಿಕ್ಕುತಪ್ಪಿಸುವಂತಿದೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಫೋಟೋವನ್ನು ಗೂಗಲ್ ಇಮೇಜ್ ಸರ್ಚ್ ಮಾಡಿದಾಗ, ಇದೇ ರೀತಿಯ ಫೋಟೋಗಳು ಮೊಹಮ್ಮದ್ ಹಾರಿಸ್ ನಲಪಾಡ್ ಮತ್ತು ‘IYC Karnataka’ ಟ್ವೀಟರ್‌ ಖಾತೆಯಿಂದ ಪೋಸ್ಟ್‌‌ ಮಾಡಿರುವುದು ಕಂಡುಬಂದಿದೆ. ಆದ್ದರಿಂದ, ಪೋಸ್ಟ್ ಮಾಡಿದ ಫೋಟೋ ಅಧಿಕೃತವಾಗಿದೆ. ಆದಾಗ್ಯೂ, ಅವರು ಟ್ವೀಟ್ ಮಾಡಿದ ಫೋಟೋಗಳಲ್ಲಿ, ಇತರ ಧಾರ್ಮಿಕ ಪ್ರಾರ್ಥನೆಗಳನ್ನು ಸಹ ನಡೆಸಲಾಗಿದೆ ಎಂದು ಕಾಣಬಹುದು.

ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹಾರಿಸ್ ನಲಪಾಡ್ ಕೆಪಿವೈಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕಾಂಗ್ರೆಸ್ ಭವನದಲ್ಲಿ ಹೋಮ ಹವನ ನಡೆದಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿರುವುದನ್ನು ಓದಬಹುದು. ‘ಡೆಕ್ಕನ್ ಹೆರಾಲ್ಡ್‘ ವರದಿಯ ಪ್ರಕಾರ, ನಲಪಾಡ್ ಅವರು ‘ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಧಾರ್ಮಿಕ ವಿಧಿಗಳೊಂದಿಗೆ ತಮ್ಮ ಕಚೇರಿಯನ್ನು ಉದ್ಘಾಟಿಸಿದ್ದಾರೆ. ಕಾರ್ಯಕ್ರಮಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಒಟ್ಟಾರೆ ಹೇಳುವುದಾದರೆ KPYCC ನೂತನ ಅಧ್ಯಕ್ಷ ನಲಪಾಡ್ ಅವರು ಇಸ್ಲಾಂ ಧರ್ಮ ಮಾತ್ರವಲ್ಲದೆ ವಿವಿಧ ಧರ್ಮಗಳ ಪ್ರಾರ್ಥನೆ ಸಲ್ಲಿಸುವ ಮೂಲಕ ಅಧಿಕಾರ ವಹಿಸಿಕೊಂಡಿದ್ದು, ಸರ್ವಧರ್ಮ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವಂತೆ ಇಸ್ಲಾಂ ಧಾರ್ಮಿಕ ವಿಧಾನಗಳನ್ನ ಮಾತ್ರ ಅನುಸರಿಸಿದ್ದಾರೆ ಎಂಬುಂದು ಸುಳ್ಳು.

Share.

About Author

Comments are closed.

scroll