Fake News - Kannada
 

ಭಾರತ ಸರ್ಕಾರವು ಧರ್ಮದ ಆಧಾರದ ಮೇಲೆ ಅಪರಾಧಿಗಳ ಅಂಕಿಅಂಶಗಳು ಮತ್ತು ತೆರಿಗೆ-ಸಂಬಂಧಿತ ಡೇಟಾವನ್ನು ಬಿಡುಗಡೆ ಮಾಡುವುದಿಲ್ಲ

0

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ 18% (ಮುಸ್ಲಿಂ ಜನಸಂಖ್ಯೆಯ ಉಲ್ಲೇಖ) ಹೊಂದಿರುವ ಸಮುದಾಯವು ಅಪರಾಧ ಕೃತ್ಯಗಳಿಗೆ ಅತೀ ಹೆಚ್ಚು ಕೊಡುಗೆ ನೀಡುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 98% ಅತ್ಯಾಚಾರಗಳು, 95% ದರೋಡೆಗಳು, 100% ಭಯೋತ್ಪಾದನೆ, 300% ಜನಸಂಖ್ಯಾ ಸ್ಫೋಟ, 800% ಸರ್ಕಾರಿ ಸೌಲಭ್ಯಗಳ ಬಳಕೆ, ಆದರೆ 0.1% ತೆರಿಗೆ ಮಾತ್ರ ಶೂನ್ಯ ಎಂಬ ಅರ್ಥ ಬರುವಂತೆ, ಇದೆಲ್ಲದಕ್ಕೂ ಮುಸ್ಲಿಂ ಸಮುದಾಯವು ಹೊಣೆಯಾಗಿದೆ ಎಂದು ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿದೆ. 2011 ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಂ ಜನಸಂಖ್ಯೆಯು  ಶೇ 14.2%  ಇದೆ ಎಂದು ವರದಿಗಳಿವೆ.  ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಭಾರತದಲ್ಲಿನ ಮುಸ್ಲಿಂ ಜನಸಂಖ್ಯೆಯು 98% ಅತ್ಯಾಚಾರಗಳು, 95% ದರೋಡೆಗಳು, 100% ಭಯೋತ್ಪಾದನೆ, 300% ಜನಸಂಖ್ಯೆಯ ಸ್ಫೋಟ, 800% ಸರ್ಕಾರಿ ಸೌಲಭ್ಯಗಳ ಬಳಕೆ ಮಾಡಿಕೊಂಡಿದೆ. ಆದರೆ 0.1% ತೆರಿಗೆಯನ್ನು ಮಾತ್ರ ಕೊಡುಗೆ ನೀಡುತ್ತದೆ.

ನಿಜಾಂಶ : ಭಾರತದಲ್ಲಿ ಮುಸ್ಲಿಮರು 98% ಅತ್ಯಾಚಾರ, 95% ದರೋಡೆ, 100% ಭಯೋತ್ಪಾದನೆ, 300% ಜನಸಂಖ್ಯಾ ಸ್ಫೋಟ, ಮತ್ತು 800% ಸರ್ಕಾರಿ ಸೌಲಭ್ಯಗಳನ್ನು ಬಳಸುತ್ತಾರೆ ಎಂದು ಹೇಳುವ ಯಾವುದೇ ಪುರಾವೆಗಳಿಲ್ಲ; ಹಾಗೆಯೇ ಕೇವಲ 0.1% ತೆರಿಗೆಯನ್ನು ಮಾತ್ರ ಸರ್ಕಾರಕ್ಕೆ ನೀಡುತ್ತಿದೆ ಎಂಬುದು ಕೂಡ ಸುಳ್ಳು. ಭಾರತ ಸರ್ಕಾರವು ಅಪರಾಧದ ಅಂಕಿಅಂಶಗಳನ್ನು, ತೆರಿಗೆ ಸಂಬಂಧಿತ ಡೇಟಾವನ್ನು ಧರ್ಮದ ಆಧಾರದ ಮೇಲೆ ಬಿಡುಗಡೆ ಮಾಡುವುದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕ್ರೈಮ್:

ಅಪರಾಧ ಕೃತ್ಯಗಳ ಅಂಕಿ ಅಂಶಗಳನ್ನು ಭಾರತದಲ್ಲಿ ದಾಖಲೀಕರಿಸುವ ಏಜನ್ಸಿ ಎಂದರೆ ಅದು ರಾಷ್ಡ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) . ಇದರ ಪ್ರಕಾರ  ಭಾರತದಲ್ಲಿ ಧರ್ಮಾಧಾರಿತವಾಗಿ ಯಾವುದೇ ಅಪರಾಧ ಕೃತ್ಯಗಳನ್ನು ಪರಿಗಣಿಸಲಾಗುವುದಿಲ್ಲ ಬದಲಿಗೆ ಅದೊಂದು ಅಪರಾಧ ಕೃತ್ಯ ಎಂದಷ್ಟೆ ದಾಖಲಿಸುತ್ತದೆ.

ಎನ್‌ಸಿಆರ್‌ಬಿ ತನ್ನ ವೆಬ್‌ಸೈಟ್‌ನಲ್ಲಿ ‘ಕ್ರೈಮ್ ಇನ್ ಇಂಡಿಯಾ 2020‘ ವರದಿಯನ್ನು ಬಿಡುಗಡೆ ಮಾಡಿದೆ. ಆ ವರದಿಯ ಪ್ರಕಾರ, ಅಪರಾಧ ಕೃತ್ಯಗಳನ್ನು ಧರ್ಮದ ಆಧಾರದಲ್ಲಿ ದಾಖಲಿಸುವುದಿಲ್ಲ ಹಾಗೂ ಧರ್ಮದ ಗುರುತಾಗಿ ಯಾವುದೇ ಉಲ್ಲೇಖವಿಲ್ಲ. ಹಾಗೆಯೇ ಅಧ್ಯಾಯ 3 ರ ‘ಮಹಿಳೆಯರ ವಿರುದ್ಧದ ಅಪರಾಧ’ದಲ್ಲೂ ಯಾವುದೇ ಧರ್ಮದ ಉಲ್ಲೇಖವಿಲ್ಲ. \

ಈ ಹಿಂದೆ, 2016-18ರಲ್ಲಿ 84,374 ಅತ್ಯಾಚಾರಗಳಲ್ಲಿ 81000 ಮುಸ್ಲಿಮರು ಮಾಡಿದ್ದಾರೆ ಎಂಬ ಸುದ್ದಿಯೊಂದು ಸಾಕಷ್ಟು ವೈರಲ್ ಆಗಿತ್ತು. ಆಗ ಸುದ್ದಿಯ ಕುರಿತು ಲೇಖನವನ್ನು ಫ್ಯಾಕ್ಟ್ ಲಿ  ಫ್ಯಾಕ್ಟ್‌ ಚೆಕ್ ಮಾಡುವ ಮೂಲಕ ಅದು ತಪ್ಪು ಎಂದು ತಿಳಿಸಲಾಗಿತ್ತು.

NCRB ಸಂಗ್ರಹಿಸಿದ ಮತ್ತು 31 ಡಿಸೆಂಬರ್ 2020 ರವರೆಗೆ ನವೀಕರಿಸಿದ ಮಾಹಿತಿಯ ಪ್ರಕಾರ, 72% ಕ್ಕಿಂತ ಹೆಚ್ಚು ವಿಚಾರಣಾಧೀನ ಕೈದಿಗಳು ಹಿಂದೂಗಳು ಮತ್ತು ಸುಮಾರು 21% ಮುಸ್ಲಿಮರು ಎಂದು ತಿಳಿದು ಬಂದಿದೆ.

ತೆರಿಗೆ ಕೊಡುಗೆ:

ಎರಡು ರೀತಿಯ ತೆರಿಗೆಗಳಿದ್ದು ಒಂದು ನೇರ ತೆರಿಗೆ, ಮತ್ತೊಂದು ಪರೋಕ್ಷ ತೆರಿಗೆ. ಭಾರತ ಸರ್ಕಾರವು ಧರ್ಮದ ಆಧಾರದ ಮೇಲೆ ನೇರ ಅಥವಾ ಪರೋಕ್ಷ ತೆರಿಗೆ ಡೇಟಾವನ್ನು ಬಿಡುಗಡೆ ಮಾಡುವುದಿಲ್ಲ. ಆದಾಯ ತೆರಿಗೆ ಇಲಾಖೆ ನೇರ ತೆರಿಗೆ ಸಂಗ್ರಹದ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ, ಆದರೆ ಇವುಗಳು ಧರ್ಮವನ್ನು ಆಧರಿಸಿಲ್ಲ. ಆದಾಯ ತೆರಿಗೆ ರಿಟರ್ನ್ ಅಂಕಿಅಂಶಗಳಲ್ಲಿ ಅಳವಡಿಸಿಕೊಂಡ ವಿಧಾನವು ಯಾವುದೇ ಧರ್ಮವನ್ನು ಆಧರಿಸಿಲ್ಲ. ಸರಕು ಮತ್ತು ಸೇವಾ ತೆರಿಗೆ (GST) ಗೆ ಸಂಬಂಧಿಸಿದ ಡೇಟಾವು ಯಾವುದೇ ಧರ್ಮವನ್ನು ಆಧರಿಸಿಲ್ಲ.

ಈ ಹಿಂದೆ, ಭಾರತದಲ್ಲಿ ಸಿಖ್ಖರು 33% ಆದಾಯ ತೆರಿಗೆಯನ್ನು ಕೊಡುಗೆ ನೀಡುತ್ತಾರೆ ಎಂಬ ವೈರಲ್ ಸುದ್ದಿಯನ್ನು 2019 ರಲ್ಲಿ ಫ್ಯಾಕ್ಟ್ಲಿಯು ಫ್ಯಾಕ್ಟ್‌ಚೆಕ್ ಲೇಖನದ ಮೂಲಕ ಸುದ್ದಿ ಸುಳ್ಳು ಎಂದು ನಿರೂಪಿಸಿತ್ತು. ನೇರ ತೆರಿಗೆ ಸಂಗ್ರಹದ ಡೇಟಾವನ್ನು ಧರ್ಮದ ಆಧಾರದ ಮೇಲೆ ಬಿಡುಗಡೆ ಮಾಡಲಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಭಾರತ ಸರ್ಕಾರವು ಧರ್ಮದ ಆಧಾರದ ಮೇಲೆ ಅಪರಾಧ ಅಂಕಿಅಂಶಗಳು ಮತ್ತು ತೆರಿಗೆ-ಸಂಬಂಧಿತ ಡೇಟಾವನ್ನು ಬಿಡುಗಡೆ ಮಾಡುವುದಿಲ್ಲ, ಹಾಗಾಗಿ ಪೋಸ್ಟರ್‌ನಲ್ಲಿ ಪ್ರತಿಪಾದಿಸಿರುವ ಮುಸ್ಲಿಂ ಕುರಿತಾದ ಅಪರಾಧ ಕೃತ್ಯಗಳು ಸಂಪೂರ್ಣ ಸುಳ್ಳಾಗಿವೆ.

Share.

Comments are closed.

scroll