ರಸ್ತೆ ತುಂಬಾ ಗುಂಡಿಗಳೇ ತುಂಬಿಕೊಂಡಿರುವ ಫೋಟೊವೊಂದನ್ನು ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ವಯನಾಡ್ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ…
ಪ್ರತಿಪಾದನೆ: ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ವಯನಾಡ್ನ ರಸ್ತೆಯ ಪರಿಸ್ಥಿತಿ.
ನಿಜಾಂಶ: ಈ ಚಿತ್ರವು ಬಿಹಾರದ ಭಾಗಲ್ಪುರ್ ಜಿಲ್ಲೆಯ ಭಾಗಲ್ಪುರ್-ಪಿರ್ಪೈಂಟಿ ಮಿರ್ಜಾಚೌಕಿ ರಾಷ್ಟ್ರೀಯ ಹೆದ್ದಾರಿ-80 ಯದ್ದಾಗಿದೆ. ಇದು ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ವಯನಾಡ್ನದ್ದಲ್ಲ. ಹಾಗಾಗಿ ಪೋಸ್ಟ್‌ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿನ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಟ್ವಿಟರ್‌ನಲ್ಲಿ ಬಳಕೆದಾರರು ಇದೇ ಚಿತ್ರವನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಪೋಸ್ಟ್ ವಿವರಣೆಯಲ್ಲಿ ಇದು ಭಾಗಲ್ಪುರ್-ಪಿರ್ಪೈಂಟಿ ರಾಷ್ಟ್ರೀಯ ಹೆದ್ದಾರಿ ಎಂದು ಬರೆಯಲಾಗಿದೆ. ಇದನ್ನು ಆಧರಿಸಿ ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಾಡಿದಾಗ 2017ರಲ್ಲಿ ಟೈಮ್ಸ್ ಆಫ್ ಇಂಡಿಯಾ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ಫೋಟೊ ಇರುವುದು ಕಂಡುಬಂದಿದೆ. ಕೆಟ್ಟ ಸ್ಥಿತಿಯಲ್ಲಿರುವ ಭಾಗಲ್ಪುರ್ ರಾಷ್ಟ್ರೀಯ ಹೆದ್ದಾರಿ-80 ಎಂಬ ಶೀರ್ಷಿಕೆಯ ಆ ಲೇಖನದಲ್ಲಿ ಇದು ಬಿಹಾರದ ಭಾಗಲ್ಪುರ್-ಪಿರ್ಪೈಂಟಿ ಮಿರ್ಜಾಚೌಕಿ ರಾಷ್ಟ್ರೀಯ ಹೆದ್ದಾರಿ-80ಯ ದುಸ್ಥಿತಿ ಎಂದು ವಿವರಿಸಲಾಗಿದೆ.
ಇದೇ ಚಿತ್ರವು 2017ರಲ್ಲಿ ವೈರಲ್ ಆದಾಗ ಆಗಿನ ಬಿಹಾರದ ರಸ್ತೆ ಸಾರಿಗೆ ಸಚಿವ ತೇಜಸ್ವಿ ಯಾದವ್ ಈ ಚಿತ್ರದೊಂದಿಗೆ ಮತ್ತೊಂದು ಚಿತ್ರವನ್ನು ಟ್ವೀಟ್ ಮಾಡಿ ಆರೋಪಗಳು ವಾಸ್ತವಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಎಬಿಪಿ ಲೈವ್ ಸುದ್ದಿ ವಾಹಿನಿಯೂ ಈ ಕುರಿತು ತನಿಖಾ ವರದಿಯೊದನ್ನು ಪ್ರಕಟಿಸಿ ಇದು ಭಾಗಲ್ಪುರ್ ರಾಷ್ಟ್ರೀಯ ಹೆದ್ದಾರಿ ಎಂದು ಖಚಿತಪಡಿಸಿತ್ತು. ಈ ಚಿತ್ರ ವೈರಲ್ ಆಗುವ ವೇಳೆಗಾಗಲೇ ಹೊಸ ರಸ್ತೆ ನಿರ್ಮಾಣವಾಗಿತ್ತು ಎಂದು ಅದು ತನ್ನ ವರದಿಯಲ್ಲಿ ತಿಳಿಸಿತ್ತು.
ಒಟ್ಟಿನಲ್ಲಿ ಬಿಹಾರದ ಹದಗೆಟ್ಟ ಹಳೆಯ ರಸ್ತೆಯ ಚಿತ್ರವನ್ನು ರಾಹುಲ್ ಗಾಂಧಿಯ ವಯನಾಡ್ ಕ್ಷೇತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.