Fake News - Kannada
 

ಕೇವಲ ಐದಲ್ಲ, ಹಲವಾರು ರಾಷ್ಟ್ರಗಳು ಕೋವಿಡ್ -19 ಲಸಿಕೆಯನ್ನು ಅಭಿವೃದ್ದಿಪಡಿಸುತ್ತಿವೆ ಮತ್ತು ತಯಾರಿಸುತ್ತಿವೆ

0

ಭಾರತ ಸೇರಿದಂತೆ ಪ್ರಪಂಚದ ಕೇವಲ 5 ರಾಷ್ಟ್ರಗಳು ಮಾತ್ರ ಕೋವಿಡ್ -19 ಲಸಿಕೆ ತಯಾರಿಸುತ್ತಿವೆ. ಅವುಗಳಲ್ಲಿ ಭಾರತದ ‘ಭಾರತ್ ಬಯೋಟೆಕ್ಸ್‌ನ ಕೋವಾಕ್ಸಿನ್‌’ ಲಸಿಕೆಯು ಅತ್ಯಂತ ಪರಿಣಾಮಕಾರಿ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಿಜವೇ ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಪ್ರಪಂಚದ ಕೇವಲ 5 ರಾಷ್ಟ್ರಗಳು ಮಾತ್ರ ಕೋವಿಡ್ -19 ಲಸಿಕೆ ತಯಾರಿಸುತ್ತಿವೆ. ಅವುಗಳಲ್ಲಿ ಭಾರತದ ಲಸಿಕೆ ಅತ್ಯಂತ ಪರಿಣಾಮಕಾರಿಯಾದುದು.

ನಿಜಾಂಶ: ಕೋವಿಡ್ -19 ಲಸಿಕೆಯನ್ನು ಅಭಿವೃದ್ದಿಪಡಿಸುತ್ತಿರುವ ಮತ್ತು ತಯಾರಿಸುತ್ತಿರುವ ಹಲವು (5 ಕ್ಕಿಂತ ಹೆಚ್ಚು) ರಾಷ್ಟ್ರಗಳಲ್ಲಿ ಭಾರತ ಒಂದೆಂಬುದು ನಿಜ. ಆದರೆ ಭಾರತದ ‘ಭಾರತ್ ಬಯೋಟೆಕ್ಸ್‌ನ ಕೋವಾಕ್ಸಿನ್‌’ ಲಸಿಕೆಯು ಅತ್ಯಂತ ಪರಿಣಾಮಕಾರಿ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಈಗ ನಡೆಯುತ್ತಿರುವ  ಕೋವಾಕ್ಸಿನ್ನ 3 ನೇ ಹಂತದ ಪ್ರಯೋಗಗಳ ಪರಿಣಾಮಕಾರಿತ್ವದ ದತ್ತಾಂಶವನ್ನು ಮಾರ್ಚ್ 2021 ರೊಳಗೆ ಬಿಡುಗಡೆ ಮಾಡಲು ಕಂಪನಿಯು ನಿರೀಕ್ಷಿಸುತ್ತಿದೆ ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಡಾ.ಕೃಷ್ಣ ಎಲಾ ಹೇಳಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.

ವಿಶ್ವದಾದ್ಯಂತ ಕೋವಿಡ್ 19 ಪ್ರಕರಣಗಳು ವರದಿಯಾಗುತ್ತಿದ್ದಂತೆ ಹಲವಾರು ರಾಷ್ಟ್ರಗಳು ಕೋವಿಡ್ -19 ಲಸಿಕೆಯನ್ನು ಅಭಿವೃದ್ದಿಪಡಿಸಲು ಮತ್ತು ತಯಾರಿಸಲು ಮುಂದಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ಕೋವಿಡ್ 19 ಲಸಿಕೆ ಕಂಡುಹಿಡಿಯುವ ಅಭ್ಯರ್ಥಿಗಳ ಕರಡು ಪಟ್ಟಿಯ ಪ್ರಕಾರ 63 ಲಸಿಕೆಗಳು ಕ್ಲಿನಿಕಲ್ ಡೆವಲಪ್‌ಮೆಂಟ್ ಹಂತದಲ್ಲಿವೆ ಮತ್ತು 172 ಲಸಿಕೆಗಳು ಪ್ರಿ ಕ್ಲಿನಿಕಲ್ ಡೆವಲಪ್‌ಮೆಂಟ್ ಹಂತದಲ್ಲಿವೆ. (2021ರ ಜನವರಿ 05ರವರೆಗೆ)

ಕ್ಲಿನಿಕಲ್ ಅಭಿವೃದ್ಧಿಯ ‘ಹಂತ 3’ ಅಥವಾ ‘ಹಂತ 2/3’ ಹಂತದಲ್ಲಿರುವ ಲಸಿಕೆಗಳ ಕೆಲವು ಡೆವಲಪರ್‌ಗಳನ್ನು ಕೆಳಗೆ ನೀಡಲಾಗಿದೆ (ಭಾರತ್ ಬಯೋಟೆಕ್‌ನ ‘ಕೋವಾಕ್ಸಿನ್’ ಸಹ ‘ಹಂತ 3’ ನಲ್ಲಿದೆ). ಡಬ್ಲ್ಯುಎಚ್‌ಒ ಪಟ್ಟಿಯಿಂದ ಕೇವಲ ಐದು ದೇಶಗಳಲ್ಲ, ಆದರೆ ಎಂಎನ್‌ಸಿಗಳು ಮತ್ತು ಅನೇಕ ದೇಶಗಳಲ್ಲಿನ ಸರ್ಕಾರಿ ಸಂಸ್ಥೆಗಳು [ಭಾರತ (ಭಾರತ್ ಬಯೋಟೆಕ್), ಯುಎಸ್ (ಮಾಡರ್ನಾ), ಯುಕೆ (ಅಸ್ಟ್ರಾಜೆನೆಕಾ), ರಷ್ಯಾ (ಗಮಲೇಯ), ಜಪಾನ್ (ಆಂಜೆಸ್), ಚೀನಾ (ಸಿನೋವಾಕ್), ಕೆನಡಾ (ಮೆಡಿಕಾಗೊ), ಜರ್ಮನಿ (ಬಯೋಟೆಕ್), ಕಜಕಿಸ್ತಾನ್ (ಜೈವಿಕ ಸುರಕ್ಷತಾ ಸಮಸ್ಯೆಗಳ ಸಂಶೋಧನಾ ಸಂಸ್ಥೆ) ಮತ್ತು ಇನ್ನೂ ಅನೇಕರು ಲಸಿಕೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಲ್ಲದೆ, ಲಸಿಕೆ ತಯಾರಿಕೆಯು ಕೇವಲ ಅಭಿವೃದ್ಧಿ ಹೊಂದಿದ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಉದಾಹರಣೆಗೆ, ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೊರೊನಾವೈರಸ್ ಲಸಿಕೆಯನ್ನು ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಆಸ್ಟ್ರೇಲಿಯಾದ ಸಿಎಸ್‌ಎಲ್ ತಯಾರಿಸುತ್ತಿದೆ. ಅಸ್ಟ್ರಾಜೆನೆಕಾದ ವೆಬ್‌ಸೈಟ್‌ನಲ್ಲಿ, ‘ಲಸಿಕೆ ಉತ್ಪಾದನೆ ಮತ್ತು ಪೂರೈಕೆಯನ್ನು ವೇಗಗೊಳಿಸಲು 15 ಕ್ಕೂ ಹೆಚ್ಚು ದೇಶಗಳಲ್ಲಿ 20 ಕ್ಕೂ ಹೆಚ್ಚು ಪೂರೈಕೆ ಪಾಲುದಾರರ ಸಹಯೋಗವನ್ನು ಒಳಗೊಂಡಿರುತ್ತದೆ, ಇದನ್ನು 20 ಕ್ಕೂ ಹೆಚ್ಚು ವಿಶ್ಲೇಷಣಾತ್ಮಕ ಪರೀಕ್ಷಾ ತಾಣಗಳು ಬೆಂಬಲಿಸುತ್ತವೆ’ಎಂದು ಬರೆಯಲಾಗಿದೆ. ಫಿಜರ್ ಮತ್ತು ಬಯೋಟೆಕ್ ಲಸಿಕೆಯನ್ನು ಜರ್ಮನಿ, ಬೆಲ್ಜಿಯಂ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ತಯಾರಿಸಲಾಗುತ್ತಿದೆ ಎಂದು ‘ರಾಯಿಟರ್ಸ್’ ವರದಿ ಮಾಡಿದೆ.

ಇನ್ನು ಭಾರತ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆ ‘ಕೋವಾಕ್ಸಿನ್’ ವಿಶ್ವದ ಅತ್ಯಂತ ಪರಿಣಾಮಕಾರಿ COVID-19 ಲಸಿಕೆ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಈಗ ನಡೆಯುತ್ತಿರುವ  ಕೋವಾಕ್ಸಿನ್ನ 3 ನೇ ಹಂತದ ಪ್ರಯೋಗಗಳ ಪರಿಣಾಮಕಾರಿತ್ವದ ದತ್ತಾಂಶವನ್ನು ಮಾರ್ಚ್ 2021 ರೊಳಗೆ ಬಿಡುಗಡೆ ಮಾಡಲು ಕಂಪನಿಯು ನಿರೀಕ್ಷಿಸುತ್ತಿದೆ ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಡಾ.ಕೃಷ್ಣ ಎಲಾ ಹೇಳಿದ್ದಾರೆ ಎಂದು ಅನೇಕ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಭಾರತದಲ್ಲಿ ತಯಾರಾಗುತ್ತಿರುವ COVID-19 ಲಸಿಕೆಗಾಗಿ ಅನೇಕ ದೇಶಗಳು ಎದಿರುನೋಡುತ್ತಿವೆ. ಬ್ರೆಜಿಲ್‌ನ ಖಾಸಗಿ ಚಿಕಿತ್ಸಾಲಯಗಳು ಭಾರತ್ ಬಯೋಟೆಕ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ವರದಿಯಾಗಿದೆ. ಅಲ್ಲದೆ, ನೇಪಾಳ ಮತ್ತು ಶ್ರೀಲಂಕಾ ದೇಶಗಳು ಭಾರತದಿಂದ ಲಸಿಕೆಗಾಗಿ ಹುಡುಕುತ್ತಿವೆ ಎಂದು ವರದಿಯಾಗಿದೆ. “32 ಸಣ್ಣ-ದೊಡ್ಡ ದೇಶಗಳು ಲಸಿಕೆಗಾಗಿ ಪ್ರಿ ಆರ್ಡರ್ ಮಾಡಿವೆ”ಎಂಬುದರ ಬಗ್ಗೆ ಯಾವುದೇ ನಿರ್ದಿಷ್ಟ ವರದಿಗಳು ಕಂಡುಬಂದಿಲ್ಲ. ಆದರೆ, GAVI ವೆಬ್‌ಸೈಟ್‌ನಲ್ಲಿ ‘ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ), ಗವಿ, ಲಸಿಕೆ ಒಕ್ಕೂಟ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ 2021 ರಲ್ಲಿನ ಲಸಿಕೆಯು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾದರೆ ಭವಿಷ್ಯದ ಲಸಿಕೆಗಳಿಗಾಗಿ ಹೆಚ್ಚುವರಿ 100 ಮಿಲಿಯನ್ ಡೋಸ್‌ಗಳ ಉತ್ಪಾದನೆ ಮತ್ತು ವಿತರಣೆಯನ್ನು ವೇಗಗೊಳಿಸುತ್ತವೆ ಎಂದು ಬರೆದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೇವಲ ಐದು ಮಾತ್ರವಲ್ಲದೆ, ಹಲವಾರು ರಾಷ್ಟ್ರಗಳು ಕೋವಿಡ್ -19 ಲಸಿಕೆಯನ್ನು ಅಭಿವೃದ್ದಿಪಡಿಸುತ್ತಿವೆ ಮತ್ತು ತಯಾರಿಸುತ್ತಿವೆ. ಜೊತೆಗೆ ಭಾರತದ ‘ಭಾರತ್ ಬಯೋಟೆಕ್ಸ್‌ನ ಕೋವಾಕ್ಸಿನ್‌’ ಲಸಿಕೆಯು ಅತ್ಯಂತ ಪರಿಣಾಮಕಾರಿ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.

Share.

About Author

Comments are closed.

scroll