ದೆಹಲಿಯ ಮುಂಡ್ಕಾ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ, ಕನಿಷ್ಠ 50 ಜನರನ್ನು ಉಳಿಸಿದ ದಯಾನಂದ ತಿವಾರಿ ಅವರ ಧೈರ್ಯಶಾಲಿ ಕಾರ್ಯವನ್ನು ಮಾಧ್ಯಮಗಳು ವರದಿ ಮಾಡಿಲ್ಲ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅವರು ಹಿಂದೂ ಎಂಬ ಕಾರಣಕ್ಕೆ ಮಾಧ್ಯಮಗಳು ಅವರ ಬಗ್ಗೆ ವರದಿ ಮಾಡಿಲ್ಲ ಎಂದು ಧರ್ಮವನ್ನು ಉಲ್ಲೇಖಿಸಿ ಪೋಸ್ಟ್ ಮಾಡಲಾಗಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ : ದೆಹಲಿಯ ಮುಂಡ್ಕಾದಲ್ಲಿ ಸಂಭವಿಸಿದ ಅಗ್ನಿ ಅವಘಡದ ಸಂದರ್ಭದಲ್ಲಿ 50 ಜನರನ್ನು ರಕ್ಷಿಸಿದ ದಯಾನಂದ ತಿವಾರಿ ಅವರ ಕೆಚ್ಚೆದೆಯ ಕಾರ್ಯವನ್ನು ಮಾಧ್ಯಮಗಳು ವರದಿ ಮಾಡಲಿಲ್ಲ.
ನಿಜಾಂಶ : ದಯಾನಂದ ತಿವಾರಿ ಅವರು ಅನಿಲ್ ತಿವಾರಿ ಅವರೊಂದಿಗೆ ಕನಿಷ್ಠ 50 ಜನರನ್ನು ಮುಂಡ್ಕಾ ಬೆಂಕಿಯಿಂದ ರಕ್ಷಿಸಿದ್ದಾರೆ ಎಂಬುದು ನಿಜ. ಆದರೆ ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿಲ್ಲ ಎಂಬುದು ಸುಳ್ಳು. ಮುಖ್ಯವಾಹಿನಿಯ ಮಾಧ್ಯಮ ಏಜೆನ್ಸಿಗಳು ಅವರ ಧೈರ್ಯದ ಕಾರ್ಯವನ್ನು ವರದಿ ಮಾಡಿವೆ. ದಯಾನಂದ ತಿವಾರಿ ಅವರನ್ನು ಹಲವು ರಾಜಕಾರಣಿಗಳು, ಚಿತ್ರರಂಗದ ಗಣ್ಯರು ಮತ್ತು ಪತ್ರಕರ್ತರು ಶ್ಲಾಘಿಸಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಈ ತಿಂಗಳ ಆರಂಭದಲ್ಲಿ, ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತು, ಈ ದುರಂತದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದರು ಮತ್ತು ಅನೇಕರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಕ್ರೇನ್ ಚಾಲಕ ದಯಾನಂದ್ ತಿವಾರಿ ಅವರು ಬೆಂಕಿ ಅವಘಡದಿಂದ 50 ಜನರನ್ನು ರಕ್ಷಿಸಿದ್ದಾರೆ. ಅವರು ತಮ್ಮ ಸಹಾಯಕ ಅನಿಲ್ ತಿವಾರಿ ಅವರೊಂದಿಗೆ ಕ್ರೇನ್ ಸಹಾಯದಿಂದ ಜನರನ್ನು ರಕ್ಷಿಸಿದರು.
ಆದಾಗ್ಯೂ, ವೈರಲ್ ಪೋಸ್ಟ್‌ನಲ್ಲಿ ಮಾಡಿದ ಹೇಳಿಕೆಗೆ ವಿರುದ್ಧವಾಗಿ, ಬಹು ಮಾಧ್ಯಮ ಸಂಸ್ಥೆಗಳು ದಯಾನಂದ ತಿವಾರಿ ಅವರ ಧೀರ ಕೃತ್ಯವನ್ನು ವರದಿ ಮಾಡಿವೆ. The Times of India, Business Standard, NDTV, The Statesman, Amarujala, Odishatv, India TV, ETV Bharat, Times Now, ಮತ್ತು ಇತರ ಹಲವು ಸುದ್ದಿ ಸಂಸ್ಥೆಗಳಂತಹ ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳು ಈ ಸುದ್ದಿಯನ್ನು ವರದಿ ಮಾಡಿವೆ. ಪ್ರಾದೇಶಿಕ ಮಾಧ್ಯಮ ಸಂಸ್ಥೆಗಳೂ ಸಹ ದಯಾನಂದ ತಿವಾರಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಬಗ್ಗೆ ವರದಿ ಮಾಡಿವೆ.
ವಾಸ್ತವವಾಗಿ, ಅನೇಕ ರಾಜಕಾರಣಿಗಳು, ಚಲನಚಿತ್ರ ವ್ಯಕ್ತಿಗಳು ಮತ್ತು ಪತ್ರಕರ್ತರು ಕೂಡ ದಯಾನಂದ ತಿವಾರಿ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಈ ಕೆಲವು ಟ್ವೀಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದ್ದರಿಂದ, ಇವೆಲ್ಲವೂ ದಯಾನಂದ ತಿವಾರಿ ಅವರ ಧೀರ ಕೃತ್ಯವನ್ನು ಮಾಧ್ಯಮಗಳು ನಿರ್ಲಕ್ಷಿಸಿಲ್ಲ ಆದರೆ ಬಹು ಸುದ್ದಿ ಸಂಸ್ಥೆಗಳಿಂದ ವರದಿ ಮಾಡಿರುವುದನ್ನು ಸ್ಥಾಪಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಂಡ್ಕಾ ಅಗ್ನಿ ದುರಂತದಲ್ಲಿ ಬೆಂಕಿಯಲ್ಲಿ ಸಿಲುಕಿದ್ದ ಜನರನ್ನು ಆಪತ್ತಿನಿಂದ ರಕ್ಷಿಸಿದ್ದ ಸಂರಕ್ಷಕ ದಯಾನಂದ ತಿವಾರಿ ಅವರನ್ನು ಮಾಧ್ಯಮಗಳು ನಿರ್ಲಕ್ಷಿಸಲಿಲ್ಲ. ಹಲವು ಮಾಧ್ಯಮ ಸಂಸ್ಥೆಗಳು ಅವರ ಕೆಚ್ಚೆದೆಯ ಕಾರ್ಯವನ್ನು ಶ್ಲಾಘಿಸಿ ವರದಿ ಮಾಡಿವೆ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.