Fake News - Kannada
 

ಗಾಲ್ವಾನ್ ಸಂಘರ್ಷದಲ್ಲಿ 100ಕ್ಕೂ ಹೆಚ್ಚು ಚೀನಿ ಸೈನಿಕರ ಹತ್ಯೆಯಾಗಿದೆ ಎಂದು ಜಿಯಾನ್ಲಿ ಯಾಂಗ್ ಹೇಳಿಲ್ಲ

0

‘ತ್ಸೈ ಇಂಗ್-ವೆನ್’ ಟ್ವಿಟ್ಟರ್ ಹ್ಯಾಂಡಲ್ ನಿಂದ ಮಾಡಲಾಗಿದೆ ಎನ್ನಲಾಗುವ ಒಂದು ಟ್ವೀಟ್ ನ ಸ್ಕ್ರೀನ್ ಶಾಟ್ (ಆರ್ಕೈವ್) ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ತ್ಸೈ ಇಂಗ್-ವೆನ್’ ಅವರು ರಿಪಬ್ಲಿಕ್ ಆಫ್ ಚೈನಾದ (ತೈವಾನ್) ಅಧ್ಯಕ್ಷರಾಗಿದ್ದವರು. ಆಟ್ವೀಟ್‌ನಲ್ಲಿಜೂನ್ 15, 2020 ರಂದುಗಾಲ್ವಾನ್ ಸಂಘರ್ಷದಲ್ಲಿ 100ಕ್ಕೂ ಹೆಚ್ಚು ಚೀನಿ ಸೈನಿಕರ ಹತ್ಯೆಯಾಗಿದೆ ಎಂದು ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ನಾಯಕರ ಮಗ ಜಿಯಾನ್ಲಿ ಯಾಂಗ್ ಹೇಳಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಇದು ಸತ್ಯವೇ ಪರಿಶೀಲಿಸೋಣ.

ಆ ಟ್ವೀಟ್ ನ ಪಠ್ಯ ಇಂತಿದೆ..
“ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ನಾಯಕರ ಮಗ ಜಿಯಾನ್ಲಿ ಯಾಂಗ್ ಒಂದು ಸಂವೇದನಾಯುತ ಹೇಳಿಕೆ ನೀಡಿದ್ದಾರೆ. ಜೂನ್ 15ರ ರಾತ್ರಿ ಗಾಲ್ವಾನ್ ಗಡಿಯಲ್ಲಿ ನಡೆದ ಭಾರತ-ಚೀನಾ ಸೈನಿಕರ ನಡುವಿನ ಭೀಕರ ಸಂಘರ್ಷದಲ್ಲಿ 100ಕ್ಕೂ ಹೆಚ್ಚು ಚೀನಿ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ” ಎಂದು ಫೇಸ್ ಬುಕ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಜೂನ್ 15, 2020ರಂದು ಗಾಲ್ವಾನ್‌ನಲ್ಲಿ ನಡೆದ ಸಂಘರ್ಷದಲ್ಲಿ 100ಕ್ಕೂ ಹೆಚ್ಚು ಚೀನಿ ಸೈನಿಕರ ಹತ್ಯೆಯಾಗಿದೆ ಎಂದು ಚೀನಾದ ಮಾಜಿ ಮಿಲಿಟರಿ ಅಧಿಕಾರಿ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷದ ನಾಯಕರ ಮಗ ಜಿಯಾನ್ಲಿ ಯಾಂಗ್ ಹೇಳಿದ್ದಾರೆ.

ನಿಜಾಂಶ: ಜಿಯಾನ್ಲಿ ಯಾಂಗ್ ಚೀನಾದ ಮಾಜಿ ಮಿಲಿಟರಿ ಅಧಿಕಾರಿಯಲ್ಲ. ಗಾಲ್ವಾನ್ ಸಂಘರ್ಷದಲ್ಲಿ 100ಕ್ಕೂ ಹೆಚ್ಚು ಚೀನಿ ಸೈನಿಕರ ಹತ್ಯೆಯಾಗಿದೆ ಎಂದು ಅವರು ಹೇಳಿಲ್ಲ. ಅಲ್ಲದೇ ಮೇಲಿನ ಟ್ವೀಟ್ ಕೂಡ ತ್ಸೈ ಇಂಗ್-ವೆನ್ ಯವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಬಂದುದಲ್ಲ. ಹಾಗಾಗಿ ಈ ಪ್ರತಿಪಾದನೆ ತಪ್ಪಾಗಿದೆ.

ಸ್ಕ್ರೀನ್‌ಶಾಟ್‌ ಆಧಾರವಾಗಿಟ್ಟುಕೊಂಡು ತೈವಾನ್ ಅಧ್ಯಕ್ಷರಾದ ತ್ಸೈ ಇಂಗ್-ವೆನ್ ರವರ ಕುರಿತು ಟ್ವಿಟ್ಟರ್‌ನಲ್ಲಿ ಹುಡುಕಿದಾಗ ಅವರ ಅಧಿಕೃತ ಖಾತೆ @ingwen ನಿಂದ ಆರಂಭವಾಗಿದೆ. ಅಲ್ಲದೇ 12 ಲಕ್ಷ ಫಾಲೋವರ್ಸ್ ಹೊಂದಿರುವ ಈ ಖಾತೆ ವೆರಿಫೈಡ್ ಆಗಿದ್ದು, ಅಧಿಕೃತ ಬ್ಲೂಟಿಕ್ ಪಡೆದಿದೆ. ಆದರೆ ಸ್ಕ್ರೀನ್‌ಶಾಟ್‌ನಲ್ಲಿರುವ ಟ್ವಿಟ್ಟರ್ ಹ್ಯಾಂಡಲ್ @tsaiing_web ನಿಂದ ಆರಂಭವಾಗಿದ್ದು ಮೇಲಿನ ಟ್ವೀಟ್ ಹೊಂದಿದೆ. ಆದರೆ ಅದು ವೆರಿಫೈಡ್ ಆಗಿಲ್ಲ. ಜೊತೆಗೆ ಕೇವಲ 2,700 ಫಾಲೋವರ್ಸ್ ಮಾತ್ರ ಹೊಂದಿದೆ. ಆದ್ದರಿಂದ, ಆ ಟ್ವೀಟ್ ಚೀನಾ ಗಣರಾಜ್ಯದ (ತೈವಾನ್) ಅಧ್ಯಕ್ಷರಾದ ‘ತ್ಸೈ ಇಂಗ್-ವೆನ್’ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಬಂದದ್ದಲ್ಲ ಎಂದು ಗುರುತಿಸಬಹುದು.

ಇನ್ನುಜಿಯಾನ್ಲಿ ಯಾಂಗ್ 100ಕ್ಕೂ ಹೆಚ್ಚು ಚೀನಿ ಸೈನಿಕರ ಹತ್ಯೆಯಾಗಿದೆ ಎಂದು ಹೇಳಿರುವುದರ ಕುರಿತು ಯಾವುದೇ ಪತ್ರಿಕಾ ವರದಿಗಳು ಕಂಡುಬಂದಿಲ್ಲ. ಆದರೆ ಜಿಯಾನ್ಲಿ ಯಾಂಗ್ ವಾಷಿಂಗ್‌ಟನ್ ಟೈಮ್ಸ್‌ ಪತ್ರಿಕೆಗೆ ಬರೆದ ಲೇಖನದಲ್ಲಿ ‘ಭಾರತ ಸರ್ಕಾರವು ಹತ್ಯೆಯಾದ ಸೈನಿಕರಿಗೆ ಸರ್ಕಾರಿ ಗೌರವದೊಂದಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವಾಗಲೂ, ಚೀನಾ ಕಮ್ಯುನಿಸ್ಟ್ ಪಕ್ಷವು ಗಾಲ್ವಾನ್ ಸಂಘರ್ಷದಲ್ಲಿ ಮೃತಪಟ್ಟ ಚೀನಿ ಸೈನಿಕರ ಕುರಿತು ಮಾಹಿತ ಒದಗಿಸಿಲ್ಲ’ ಎಂದು ಹೇಳಿದ್ದಾರೆ. ಆ ಲೇಖನದಲ್ಲಿ ಅವರು ಗಾಲ್ವಾನ್ ಸಂಘರ್ಷದಲ್ಲಿ 100ಕ್ಕೂ ಹೆಚ್ಚು ಚೀನಿ ಸೈನಿಕರು ಹತ್ಯೆಯಾಗಿರುವ ಬಗ್ಗೆ ಬರೆದಿಲ್ಲ. ಹಾಗೂ ಈ ಕುರಿತು ಅವರ ಟ್ವಿಟ್ಟರ್ ಖಾತೆಯಿಂದ ಯಾವುದೇ ಟ್ವೀಟ್ ಕೂಡ ಮಾಡಿಲ್ಲ.

ಎಲ್ಲಕ್ಕಿಂತ ಮಿಗಿಲಾಗಿ ಜಿಯಾನ್ಲಿ ಯಾಂಗ್ ಚೀನಾದ ಮಾಜಿ ಮಿಲಿಟರಿ ಅಧಿಕಾರಿಯಲ್ಲ. ಅವರು ಚೀನಾದ ಕಮ್ಯುನಿಸಂನೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದು, ಚೀನಾದಲ್ಲಿ ಪ್ರಜಾಪ್ರಭುತ್ವವನ್ನು ತರಲು ಕೆಲಸ ಮಾಡುತ್ತಾರೆ ಮತ್ತು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಬಹುದು.

ಒಟ್ಟಿನಲ್ಲಿ ಗಾಲ್ವಾನ್ ಸಂಘರ್ಷದಲ್ಲಿ 100ಕ್ಕೂ ಹೆಚ್ಚು ಚೀನಿ ಸೈನಿಕರ ಹತ್ಯೆಯಾಗಿದೆ ಎಂದು ಜಿಯಾನ್ಲಿ ಯಾಂಗ್ ಹೇಳಿದ್ದಾರೆ ಎಂಬುದು ಸುಳ್ಳು ಸುದ್ದಿಯಾಗಿದೆ.

Share.

About Author

Comments are closed.

scroll