Fake News - Kannada
 

‘ಕುಶ್ವಂತ್ ಸಿಂಗ್ ಅವರ ಜೋಕ್ ಬುಕ್ 9’ ನ ಕಾಲ್ಪನಿಕ ಕಥೆಯನ್ನು ವಿಶ್ವಸಂಸ್ಥೆಯಲ್ಲಿ ವಾಜಪೇಯಿಯವರ ಭಾಷಣವೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ವಿಶ್ವಸಂಸ್ಥೆಯಲ್ಲಿ (UNO) ಕಾಶ್ಮೀರ ಸಮಸ್ಯೆ ಕುರಿತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಮಾಡಿದ ಭಾಷಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಪಿ.ವಿ ನರಸಿಂಹರಾವ್‌ರವರು ಪ್ರಧಾನಿಗಳಾಗಿದ್ದಾಗ ಭಾರತದ ಪ್ರತಿನಿಧಿಯಾಗಿ ವಾಜಪೇಯಿಯವರನ್ನು ವಿಶ್ವ ಸಂಸ್ಥೆಗೆ ಕಳಿಸಲಾಗಿತ್ತು. ವಾಜಪೇಯಿಯವರು ಭಾಷಣ ಪ್ರಾರಂಭ ಮಾಡುವ ಮುನ್ನ ರಿಷಿ ಕಶ್ಯಪರ ಒಂದು ಸಣ್ಣ ಕಥೆಯೊಂದನ್ನು ಹೇಳಿದರು. ಆಗ ಪಾಕಿಸ್ತಾನದ ಸದಸ್ಯರೊಬ್ಬರು ರಿಷಿ ಕಶ್ಯಪರು ಕಾಶ್ಮೀರಕ್ಕೆ ಭೇಟಿ ಕೊಟ್ಟಾಗ ಪಾಕಿಸ್ತಾನ ಅಸ್ತಿತ್ವದಲ್ಲಿರಲಿಲ್ಲ ಎಂದು ಹೇಳಿ  ವಾಜಪೇಯಿಯವರ ಭಾಷಣಕ್ಕೆ ಅಡ್ಡಪಡಿಸಿದರು ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಸಮಸ್ಯೆಯ ಕುರಿತು ಮಾಡಿದ ಭಾಷಣ.

ನಿಜಾಂಶ: ಪೋಸ್ಟ್‍ನಲ್ಲಿ ಹಂಚಿಕೊಳ್ಳಲಾಗಿರುವ ಕಥೆಯು ‘ಕುಶ್ವಂತ್ ಸಿಂಗ್ ಅವರ ಜೋಕ್ ಬುಕ್ 9’ ನಲ್ಲಿ ಪ್ರಕಟವಾದ ಸಂಪಾದಿತ ಕಾಲ್ಪನಿಕ ಕಥೆಯಾಗಿದೆ. ವಿಶ್ವಸಂಸ್ಥೆಯಲ್ಲಿ ಭಾಷಣ ಎಂಬ ಕಶ್ಯಪ್ ಋಷಿ ಅವರ ಕಥೆಗೆ ನವದೆಹಲಿ ಮೂಲದ ವ್ಯಕ್ತಿಯಾದ ವಿಪಿನ್ ಬಕ್ಷೆ ಕೊಡುಗೆ ನೀಡಿದ್ದಾರೆ. ಈ ಕಥೆಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ ವಿವರಗಳನ್ನು ಹುಡುಕಿದಾಗ, ಪಿ.ವಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಟಲ್ ಬಿಹಾರಿ ವಾಜಪೇಯಿ ಅವರನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ (UNHCR) 1994 ರ ಜಿನೀವಾ ಅಧಿವೇಶನಕ್ಕೆ ಭಾರತೀಯ ನಿಯೋಗವನ್ನು ಮುನ್ನಡೆಸಲು ಕಳುಹಿಸಿದೆ ಎಂದು ತಿಳಿದುಬಂದಿದೆ. ವಾಜಪೇಯಿ ನೇತೃತ್ವದ ಭಾರತದ ನಿಯೋಗವು ಕಾಶ್ಮೀರ ವಿಷಯದಲ್ಲಿ ಭಾರತದ ವಿರುದ್ದ ವಿಶ್ವಸಂಸ್ಥೆಯು ಕೈಗೊಂಡ  ನಿರ್ಣಯವನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಆದರೆ, UNHCR ನಲ್ಲಿ ವಾಜಪೇಯಿ ಅವರು ರಿಷಿ ಕಶ್ಯಪ್ ಅವರ ಕಥೆಯನ್ನು ವಿವರಿಸಿದ್ದಾರೆ ಎಂದು ಎಲ್ಲಿಯೂ ವರದಿಯಾಗಿಲ್ಲ. UNHCR ನ 1994 ರ ಜಿನೀವಾ ಅಧಿವೇಶನದಲ್ಲಿ ಭಾರತೀಯ ನಿಯೋಗದ ಕೆಲವು ಪ್ರತಿಕ್ರಿಯೆಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಈ ಕಥೆಯ ವಿವರಗಳನ್ನು ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ, ಈ ಕಥೆಯನ್ನು ‘ಕುಶ್ವಂತ್ ಸಿಂಗ್ ಅವರ ಜೋಕ್ ಬುಕ್ 9’ ನಲ್ಲಿ ಪ್ರಕಟವಾದ ಕಾಲ್ಪನಿಕ ಹಾಸ್ಯ ಕಥೆ ಎಂದು ತಿಳಿದುಬಂದಿದೆ. ವಿವಿಧ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ‘ಕುಶ್ವಂತ್ ಸಿಂಗ್ ಅವರ ಜೋಕ್ ಬುಕ್ 9’ ಲಿಂಕ್ ಅನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಕಾಲ್ಪನಿಕ ಕಥೆಯನ್ನು ನವದೆಹಲಿ ಮೂಲದ ವಿಪಿನ್ ಬಕ್ಶೆ ಕೊಡುಗೆ ನೀಡಿದ್ದಾರೆ. ‘ಕುಶ್ವಂತ್ ಸಿಂಗ್ ಜೋಕ್ ಬುಕ್ 9’ ನಲ್ಲಿ ಪ್ರಕಟವಾದ ಈ ಕಾಲ್ಪನಿಕ ಕಥೆಯ ಸ್ಕ್ರೀನ್‌ಶಾಟ್‌ಗಳನ್ನು ಕೆಳಗೆ ನೋಡಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕುಶ್ವಂತ್ ಸಿಂಗ್ ಅವರ ಜೋಕ್ ಬುಕ್ 9′ ರ ಕಾಲ್ಪನಿಕ ಕಥೆಯನ್ನು, 1990 ರಲ್ಲಿ ವಿಶ್ವಸಂಸ್ಥೆಯಲ್ಲಿ ವಾಜಪೇಯಿ ಅವರು ಮಾಡಿದ ಭಾಷಣ ಎಂದು ತಪ್ಪಾಗಿ ‘ಹಂಚಿಕೊಳ್ಳಲಾಗಿದೆ.

Share.

Comments are closed.

scroll