ಪ್ರಧಾನಿ ನರೇಂದ್ರ ಮೋದಿ ‘ಭೂಮಿಯ ಕೊನೆಯ, ಅತ್ಯುತ್ತಮ ಭರವಸೆ’ ಎಂದು ಅಮೆರಿಕದ ಪ್ರಮುಖ ಪತ್ರಿಕೆ ‘ನ್ಯೂಯಾರ್ಕ್ ಟೈಮ್ಸ್’ ತನ್ನ ಮೊದಲ ಪುಟದಲ್ಲಿ ಬರೆದಿದೆ ಎಂದು ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ. ಈ ವೈರಲ್ ಪೋಸ್ಟ್ ಮೂಲಕ ‘ಭೂಮಿಯ ಕೊನೆ ಭರವಸೆ’ ಎಂಬ ಶೀರ್ಷಿಕೆಯ ಜೊತೆಗೆ ಉಪ-ಶೀರ್ಷಿಕೆಯನ್ನೂ ನೀಡಲಾಗಿದೆ. ಉಪಶೀರ್ಷಿಕೆಯಲ್ಲಿ, ‘ವಿಶ್ವದ ಅತ್ಯಂತ ಪ್ರೀತಿಪಾತ್ರ ಮತ್ತು ಅತ್ಯಂತ ಶಕ್ತಿಶಾಲಿ ನಾಯಕ, ನಮ್ಮನ್ನು ಆಶೀರ್ವದಿಸಲು ಇಲ್ಲಿದ್ದಾರೆ’ ಎಂದು ಬರೆಯಲಾಗಿದೆ. ವೈರಲ್ ಪೋಸ್ಟ್‌ನಲ್ಲಿ ಮಾಡಿರುವ ಪತ್ರಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ನ್ಯೂಯಾರ್ಕ್ ಟೈಮ್ಸ್ ಪ್ರಧಾನಿ ಮೋದಿಯನ್ನು ‘ಭೂಮಿಯ ಕೊನೆಯ, ಅತ್ಯುತ್ತಮ ಭರವಸೆ’ ಎಂದು ಕರೆದಿದೆ.
ವಾಸ್ತವ: ನ್ಯೂಯಾರ್ಕ್ ಟೈಮ್ಸ್‌ನ ಭಾನುವಾರದ ಆವೃತ್ತಿಯ (26 ಸೆಪ್ಟೆಂಬರ್ 2021) ಮುಖಪುಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಯಾವುದೇ ಪ್ರಮುಖ ಲೇಖನವಿಲ್ಲ. ನ್ಯೂಯಾರ್ಕ್ ಟೈಮ್ಸ್‌ನ ಭಾನುವಾರದ ಆವೃತ್ತಿಯ ನಿಜವಾದ ಮುಖಪುಟವು ವಿಭಿನ್ನವಾಗಿದೆ. ಈ ಚಿತ್ರವನ್ನು ಮಾರ್ಫ್ ಮಾಡಲಾಗಿದೆ. ‘ಲಾಸ್ಟ್ ಬೆಸ್ಟ್ ಹೋಪ್ ಆಫ್ ಅರ್ಥ್’ ಎಂಬುದು ಅಬ್ರಹಾಂ ಲಿಂಕನ್ ಜನಪ್ರಿಯಗೊಳಿಸಿದ ನುಡಿಗಟ್ಟು, ಇದನ್ನು ಅವರು ಅಮೆರಿಕಾ ಸಂಯುಕ್ತ ಸಂಸ್ಥಾನ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಕುರಿತು 1862 ರಲ್ಲಿ ಅಂತರ್ಯುದ್ಧದ ಸಮಯದಲ್ಲಿ ಉಲ್ಲೇಖಿಸಿದ್ದರು. ಪ್ರಧಾನಿ ಮೋದಿಯನ್ನು ‘ಭೂಮಿಯ ಕೊನೆಯ, ಅತ್ಯುತ್ತಮ ಭರವಸೆ’ ಎಂದು ಕರೆದು ನ್ಯೂಯಾರ್ಕ್ ಟೈಮ್ಸ್ ಯಾವುದೇ ಸುದ್ದಿ ಲೇಖನಗಳನ್ನು ಪ್ರಕಟಿಸಿಲ್ಲ. ಆದುದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನ್ಯೂಯಾರ್ಕ್ ಟೈಮ್ಸ್ ನ ಭಾನುವಾರದ ಆವೃತ್ತಿಯ (26 ಸೆಪ್ಟೆಂಬರ್ 2021) ಮುಖಪುಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಯಾವುದೇ ಪ್ರಮುಖ ಸುದ್ದಿಯಿಲ್ಲ. ನ್ಯೂಯಾರ್ಕ್ ಟೈಮ್ಸ್ ನ ಭಾನುವಾರದ ಆವೃತ್ತಿಯ ನಿಜವಾದ ಮುಖಪುಟವನ್ನು ಇಲ್ಲಿ ನೋಡಬಹುದು. ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಯಾವುದೇ ಇತ್ತೀಚಿನ ಸುದ್ದಿ ಲೇಖನಗಳಿಲ್ಲ.
ಪೋಸ್ಟ್‌ನಲ್ಲಿರುವ ಚಿತ್ರವನ್ನು ಹತ್ತಿರದಿಂದ ನೋಡಿದಾಗ, ಸೆಪ್ಟೆಂಬರ್ ತಿಂಗಳ ಕಾಗುಣಿತ ತಪ್ಪಾಗಿರುವುದು ಕಾಣುತ್ತದೆ. ಸೆಪ್ಟೆಂಬರ್ ಅನ್ನು ಚಿತ್ರದಲ್ಲಿ “SETPEMBER” ಎಂದು ಬರೆಯಲಾಗಿದೆ. ನ್ಯೂಯಾರ್ಕ್ ಟೈಮ್ಸ್‌ನ ನಿಜವಾದ ಭಾನುವಾರದ ಆವೃತ್ತಿಗೆ ಹೋಲಿಸಿದರೆ ‘ಸಂಪುಟ ಸಂಖ್ಯೆ’ ಮತ್ತು ಪತ್ರಿಕೆಯ ‘ವೆಚ್ಚ’ ಚಿತ್ರದಲ್ಲಿ ವಿಭಿನ್ನವಾಗಿವೆ.
ಲೇಖನದಲ್ಲಿ ಬಳಸಲಾದ ವಾಕ್ಯಗಳು ಕೂಡಾ ನ್ಯೂಯಾರ್ಕ್ ಟೈಮ್ಸ್ ಬಳಸಿಲ್ಲ. ಚಿತ್ರದ ಕೆಳಗಿರುವ ಶೀರ್ಷಿಕೆ ಹೀಗಿದೆ, “ಶ್ರೇಷ್ಠರಾದ ಮೋದಿಜಿ ಅವರು ನಮ್ಮ ದೇಶವನ್ನು ಆಶೀರ್ವದಿಸಲು ಖಾಲಿ ಎ 4 ಪೇಪರ್ ಮೇಲೆ ಸಹಿ ಹಾಕುತ್ತಿದ್ದಾರೆ… ಹರ್ ಹರ್ ಮೋದಿ.”
ಅಲ್ಲದೆ, ನ್ಯೂಯಾರ್ಕ್ ಟೈಮ್ಸ್ ನ ಇತ್ತೀಚಿನ ಆವೃತ್ತಿಗಳಿಗಿಂತ ಚಿತ್ರದಲ್ಲಿ ಬಳಸಿರುವ ಫಾಂಟ್ ಕೂಡ ವಿಭಿನ್ನವಾಗಿದೆ. ಪತ್ರಿಕೆಯ ನಿಜವಾದ ಭಾನುವಾರದ ಆವೃತ್ತಿಯಲ್ಲಿ ಬಳಸಿದ ಚಿತ್ರದ ಶೀರ್ಷಿಕೆಯಲ್ಲಿ ಬಳಸಿದ ಫಾಂಟ್‌ಗೆ ಹೋಲಿಸಿದಾಗ ಮೋದಿ ಚಿತ್ರದ ಅಡಿಯಲ್ಲಿರುವ ಶೀರ್ಷಿಕೆಯಲ್ಲಿ ಬಳಸಿದ ಫಾಂಟ್ ವಿಭಿನ್ನವಾಗಿದೆ.
ವೈರಲ್ ಪೋಸ್ಟ್‌ನಲ್ಲಿ ಇರುವ ಪಿಎಂ ಮೋದಿಯ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ಚಿತ್ರದೊಂದಿಗೆ ಹಲವಾರು ಲೇಖನಗಳು (ಇಲ್ಲಿ ಮತ್ತು ಇಲ್ಲಿ) ಕಂಡುಬಂದಿವೆ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡುವವರ ಪುಸ್ತಕದಲ್ಲಿ ಪ್ರಧಾನಿ ಸಹಿ ಹಾಕುತ್ತಿದ್ದಾಗ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ. ಪ್ರಧಾನಿ ಮೋದಿ 2021 ರ ಮಾರ್ಚ್ 12 ರಂದು ಸಬರಮತಿ ಆಶ್ರಮಕಕ್ಕೆ ಭೇಟಿ ನೀಡಿದ್ದರು.
ಅಬ್ರಹಾಂ ಲಿಂಕನ್ ಅವರು ಅಂತರ್ಯುದ್ಧದ ಸಮಯದಲ್ಲಿ, ಅಮೇರಿಕಾ, ಸ್ವಾತಂತ್ರ್‍ಯ ಮತ್ತು ಪ್ರಜಾಪ್ರಭುತ್ವವನ್ನು ಉಲ್ಲೇಖಿಸಿ ಮಾಡಿದ ಒಂದು ನುಡಿಗಟ್ಟಾಗಿದೆ ‘ಲಾಸ್ಟ್ ಬೆಸ್ಟ್ ಹೋಪ್ ಆಫ್ ಅರ್ಥ್’(ಭೂಮಿಯ ಕೊನೆಯ ಭರವಸೆ). 01 ಡಿಸೆಂಬರ್ 1862 ರಂದು, ಅಬ್ರಹಾಂ ಲಿಂಕನ್ ತನ್ನ ಎರಡನೇ ವಾರ್ಷಿಕ ಸಂದೇಶವನ್ನು ಅಲ್ಲಿನ ಸಂಸತ್ತಿಗೆ ನೀಡಿದ್ದರು. ಅದರಲ್ಲಿ ಅವರು ಈ ವಾಕ್ಯವನ್ನು ಬಳಸಿದ್ದರು.
29 ಸೆಪ್ಟೆಂಬರ್ 2021 ರಂದು ನ್ಯೂಯಾರ್ಕ್ ಟೈಮ್ಸ್ ಕೂಡಾ ಈ ಚಿತ್ರದ ಬಗ್ಗೆ ಟ್ವೀಟ್ ಮಾಡಿ, ಚಿತ್ರವು ಸಂಪೂರ್ಣವಾಗಿ ಎಡಿಟ್ ಮಾಡಿ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಒಟ್ಟಿನಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ, ‘ದಿ ನ್ಯೂಯಾರ್ಕ್ ಟೈಮ್ಸ್’ ನರೇಂದ್ರ ಮೋದಿಯನ್ನು ‘ಭೂಮಿಯ ಕೊನೆಯ, ಅತ್ಯುತ್ತಮ ಭರವಸೆ’ ಎಂದು ಕರೆಯಲಿಲ್ಲ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋವನ್ನು ಡಿಜಿಟಲ್ ಆಗಿ ತಯಾರಿಸಲಾಗಿದೆ.