Fake News - Kannada
 

ಈ ಫೋಟೋದಲ್ಲಿನ ಆಸ್ಪತ್ರೆಯ ಹಾಸಿಗೆಗೆ ಬಂಧಿಸಲ್ಪಟ್ಟ ಹಿರಿಯ ವ್ಯಕ್ತಿ ಫಾದರ್ ಸ್ಟಾನ್ ಸ್ವಾಮಿ ಅಲ್ಲ

0

ದಿವಂಗತ ಸಾಮಾಜಿಕ ಕಾರ್ಯಕರ್ತ, ಬುಡಕಟ್ಟು ಸಮುದಾಯದ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಅವರನ್ನು ಆಸ್ಪತ್ರೆಯಲ್ಲಿ ಹಾಸಿಗೆಗೆ ಬೇಡಿಹಾಕಿ ಕಟ್ಟಿಹಾಕಲಾಗಿದೆ ಎಂದು ಫೋಟೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೋಟೋದಲ್ಲಿ ವೃದ್ಧನೊಬ್ಬ ಆಮ್ಲಜನಕದ ಮಾಸ್ಕ್‌ ಧರಿಸಿ ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತಿದ್ದಾರೆ, ಅವರ ಕಾಲುಗಳಿಗೆ ಬೇಡಿ ಹಾಕಿ ಆಸ್ಪತ್ರೆಯ ಹಾಸಿಗೆಗೆ ಬಂಧಿಸಿರುವುದನ್ನು ತೋರಿಸುತ್ತದೆ. ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದಾಗಿ 2021 ಜುಲೈ 05 ರಂದು ಭೀಮಾ-ಕೊರೆಗಾಂವ್ ಪ್ರಕರಣದ ಆರೋಪಿ ಸ್ಟಾನ್ ಸ್ವಾಮಿ ನಿಧನರಾದರು. ಅವರೇ ಹಾಸಿಗೆಯಲ್ಲಿರುವುದು ಎಂಬುದು ನಿಜವೇ ಪರಿಶೀಲಿಸೋಣ.

ಪ್ರತಿಪಾದನೆ: ಮುಂಬೈನ ಆಸ್ಪತ್ರೆಯ ಹಾಸಿಗೆಗೆ ಸ್ಟಾನ್ ಸ್ವಾಮಿ ಅವರನ್ನು ಬೇಡಿಗಳಿಂದ ಬಂಧಿಸಿರುವ ಫೋಟೋ.

ನಿಜಾಂಶ: ಫೋಟೋದಲ್ಲಿರುವ ವೃದ್ಧನು ಉತ್ತರ ಪ್ರದೇಶದ ಎತಾ ಜಿಲ್ಲಾ ಜೈಲಿನಲ್ಲಿರುವ 92 ವರ್ಷದ ಕೊಲೆ ಅಪರಾಧಿ ಬಾಬುರಾಮ್ ಬಲ್ವಾನ್ ಸಿಂಗ್. ಆತ ಇತಾಹ್‌ನ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರನ್ನು ಆಸ್ಪತ್ರೆಯ ಹಾಸಿಗೆಗೆ ಕಟ್ಟಲಾಗಿತ್ತು. ಈ ಫೋಟೋಗೂ ದಿವಂಗತ ಸ್ಟಾನ್ ಸ್ವಾಮಿ ಅವರಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಲಾದ ಫೋಟೋವನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, 13 ಮೇ 2021 ರಂದು ‘ಎನ್‌ಡಿಟಿವಿ‘ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಈ ಲೇಖನದಲ್ಲಿ ವಯಸ್ಸಾದ ಜೈಲಿನ ಖೈದಿಯನ್ನು ಉತ್ತರ ಪ್ರದೇಶದ ಎತಾದಲ್ಲಿರುವ ಆಸ್ಪತ್ರೆಯ ಹಾಸಿಗೆಗೆ ಅಮಾನವೀಯವಾಗಿ ಕಟ್ಟಿಹಾಕಲಾಗಿದೆ ಎಂದು ಬರೆಯಲಾಗಿದೆ. 92 ವರ್ಷದ ಕೊಲೆ ಅಪರಾಧಿ ಬಾಬುರಾಮ್ ಬಲ್ವಾನ್ ಸಿಂಗ್ ಅವರು ಉಸಿರಾಟದ ತೀವ್ರ ತೊಂದರೆಗೆ ಒಳಗಾಗಿದ್ದರು. ಅವರನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ಲೇಖನದ ಪ್ರಕಾರ, ಜೈಲಿನ ಅಧಿಕಾರಿಗಳು ಬಲ್ವಾನ್ ಸಿಂಗ್ ಅವರನ್ನು ಇಟಾದ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವರನ್ನು ಅಲ್ಲಿಯೇ ಆಸ್ಪತ್ರೆಯ ಹಾಸಿಗೆಗೆ ಕಟ್ಟಿಹಾಕಿದ್ದರು.

ಈ ಘಟನೆಯ ವಿವರಗಳನ್ನು ವರದಿ ಮಾಡಿರುವ, ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಕರ್ತ ಅನುಜಾ ಜೈಸ್ವಾಲ್ ಈ ಫೋಟೋವನ್ನು ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಕಾರಾಗೃಹದ ಡಿಜಿ ಅವರು,  ಯುಪಿ ಹೆಚ್ಚುವರಿ ಮಹಾನಿರ್ದೇಶಕ (ಜೈಲು) ಆನಂದ್ ಕುಮಾರ್ ಅವರ ಆದೇಶದ ಮೇರೆಗೆ ಬಲ್ವಾನ್ ಸಿಂಗ್ ಅವರಿದ್ದ ಜೈಲು ವಾರ್ಡನ್ ಅಶೋಕ್ ಯಾದವ್ ಅವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಮಾಹಿತಿಯನ್ನು ವರದಿ ಮಾಡಿರುವ ಹಲವಾರು ಇತರ ಸುದ್ದಿ ವೆಬ್‌ಸೈಟ್‌ಗಳು ಸಹ ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಭೀಮಾ-ಕೊರೆಗಾಂವ್ ಹಿಂಸಾಚಾರದ ಆರೋಪಿಗಳಲ್ಲಿ ಒಬ್ಬರಾದ ಸ್ಟಾನ್ ಸ್ವಾಮಿ ಅವರು 2021ರ ಜುಲೈ 05 ರಂದು ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನಿಧನರಾದರು. ಅಕ್ಟೋಬರ್ 09, 2020 ರಂದು ಎಲ್ಗರ್ ಪರಿಷತ್ ಪ್ರಕರಣದಲ್ಲಿ ಭಯೋತ್ಪಾದನಾ-ವಿರೋಧಿ ಕಾನೂನಿನಡಿಯಲ್ಲಿ ಎನ್ಐಎ ಅಧಿಕಾರಿಗಳು ಸ್ಟಾನ್ ಸ್ವಾಮಿಯನ್ನು ಬಂಧಿಸಿದ್ದರು. ಮೇ 2021 ರಲ್ಲಿ ಸ್ಟಾನ್ ಸ್ವಾಮಿ ಅವರು ಕೊರೊನಾ ವೈರಸ್‌ಗೆ ತುತ್ತಾದ ಬಳಿಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದರು. 28 ಮೇ 2021 ರಂದು ನ್ಯಾಯಾಲಯದ ಆದೇಶದ ನಂತರ, ಸ್ಟಾನ್ ಸ್ವಾಮಿಯನ್ನು ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಫೋಟೋದಲ್ಲಿ ಆಸ್ಪತ್ರೆಯ ಹಾಸಿಗೆಗೆ ಬೇಡಿಗಳಿಂದ ಬಂಧಿಸಲ್ಪಟ್ಟಿರುವ ವೃದ್ಧ ದಿವಂಗತ ಸ್ಟಾನ್ ಸ್ವಾಮಿ ಅವರಲ್ಲ.

Share.

Comments are closed.

scroll