ಜುಲೈ 03 2020 ರಂದು ಲೇಹ್ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರಮೋದಿ ಯವರುಇತ್ತೀಚೆಗೆ ಗಾಲ್ವಾನ್ ಕಣಿವೆಯಲ್ಲಿನ ಸಂಘರ್ಷದಲ್ಲಿ ಗಾಯಗೊಂಡ ಸೈನಿಕರನ್ನು ಭೇಟಿಮಾಡಿ ಸಂವಾದ ನಡೆಸಿದ್ದರು. ಸಾಮಾಜಿಕ ಜಾಲತಾಣ ಕೆಲವು ಬಳಕೆದಾರರು ಮೋದಿ ಮತ್ತು ಎಂ.ಎಸ್ ಧೋನಿಯವರು ಭೇಟಿನೀಡಿದ್ದ ಎರಡು ಚಿತ್ರಗಳ ಕೊಲಾಜ್ಅನ್ನು ವ್ಯಾಪಕವಾಗಿ ಹಂಚಿಕೊಂಡು ಮೋದಿ ಭೇಟಿಗಾಗಿಯೇ ಊಟದ ಸಭಾಂಗಣವನ್ನು (ಕೆಲವರು ಕಾನ್ಫರೆನ್ಸ್ ಸಭಾಂಗಣ ಎಂದು ಹಂಚಿಕೊಂಡಿದ್ದಾರೆ) ನಕಲಿ ಆಸ್ಪತ್ರೆ ವಾರ್ಡ್ ಆಗಿ ಪರಿವರ್ತಿಸಲಾಗಿದೆ ಎಂದು ಬರೆದಿದ್ದಾರೆ. ಕೇವಲ ಫೋಟೊಗಾಗಿ ಈ ಪೂರ್ವನಿರ್ಧರಿತ ಭೇಟಿ ನಡೆದಿದ್ದು ಸೈನಿಕರನ್ನು ಪಾತ್ರಧಾರಿಗಳನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ಕೂಡ ಆರೋಪಿಸಿದ್ದಾರೆ. ಈ ಪೋಸ್ಟ್ ಗಳ ಪ್ರತಿಪಾದನೆ ನಿಜವೆ ಪರಿಶೀಲಿಸೋಣ ಬನ್ನಿ.
ಪ್ರತಿಪಾದನೆ: ಗಾಯಗೊಂಡ ಸೈನಿಕರ ಭೇಟಿಯ ಪ್ರಧಾನಿ ಮೋದಿ ಫೋಟೊಶೂಟ್‌ಗಾಗಿ ಲೇಹ್‌ನಲ್ಲಿ ನಕಲಿ ಆಸ್ಪತ್ರೆ ವಾರ್ಡ್ ಸ್ಥಾಪಿಸಲಾಗಿದೆ.
ನಿಜಾಂಶ: ಫೋಟೊದಲ್ಲಿರುವ ಆಸ್ಪತ್ರೆ ವಾರ್ಡ್ ಮೋದಿ ಭೇಟಿಗಾಗಿ ಸೃಷ್ಟಿಸಿದ್ದಲ್ಲ. ಭಾರತೀಯ ಸೈನ್ಯದ ಚೀಫ್ ಜನರಲ್ ಎಂಎಂ ನಾರವಾನೆಯವರು ಜೂನ್ 23 ರಂದು ಲೇಹ್‌ನ ಮಿಲಿಟರಿ ಆಸ್ಪತ್ರೆಗೆ ಗಾಯಗೊಂಡ ಸೈನಿಕರನ್ನು ನೋಡಲು ಭೇಟಿ ನೀಡಿದಾಗ ಇದೇ ವಾರ್ಡ್‌ನ ಚಿತ್ರಗಳನ್ನು ಕಾಣಬಹುದು. ‘ಆ ಹಾಲ್ ಸಾಮಾನ್ಯವಾಗಿ ಆಡಿಯೋ, ವಿಡಿಯೋ ತರಬೇತಿಗಾಗಿ ಬಳಕೆಯಾಗುತ್ತಿತ್ತು. ಮಿಲಿಟರಿ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸಾ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ ನಂತರ ಈ ಹಾಲ್ ಅನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಯಿತು ಎಂದು ಭಾರತೀಯ ಸೈನ್ಯವು ಪತ್ರಿಕಾ ಹೇಳಿಕೆಯಲ್ಲಿತಿಳಿಸಿದೆ. ಜೊತೆಗೆ ಪೋಸ್ಟ್ ಮಾಡಲಾದ ಎಂ.ಎಸ್ ಧೋನಿಯವರ ಚಿತ್ರವು 2019ರ ಆಗಸ್ಟ್‌ನಲ್ಲಿ ಆರ್ಮಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದಾಗ ತೆಗೆದುದ್ದಾಗಿದೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
ಎಂ.ಎಸ್ ಧೋನಿಯವರ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಎಂ.ಎಸ್ ಧೋನಿಯವರ ಚಿತ್ರವು 2019ರ ಆಗಸ್ಟ್‌ನಲ್ಲಿ ಆರ್ಮಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದಾಗ ತೆಗೆದುದ್ದಾಗಿದೆ ಎಂದು ಕಂಡುಬಂದಿದೆ. ಸೈನಕಿಕರೊಂದಿಗೆ ಧೋನಿ ಮಾತನಾಡುತ್ತಿರುವ ವಿಡಿಯೋವು 2019 ರ ಭೇಟಿಗೆ ಸಂಬಂಧಿಸಿದ್ದಾಗಿದ್ದು ಅದನ್ನುಇಲ್ಲಿ ನೋಡಬಹುದು. ಹಾಗಾಗಿ ಆ ಫೋಟೊ ಇತ್ತೀಚಿಗೆ ತೆಗೆದ ಫೋಟೋ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಈ ವಿಷಯದ ಕುರಿತು ಹೆಚ್ಚಿನ ಹುಟಕಾಟ ನಡೆಸಿದಾಗ, 2020 ರ ಜುಲೈ 03 ರಂದು ಪ್ರಧಾನಿ ಮೋದಿಯವರು ಲೇಹ್‌ನ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ್ದಕ್ಕೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದ ದುರುದ್ದೇಶಪೂರಿತ ಮತ್ತು ಆಧಾರರಹಿತ ಆರೋಪಗಳ ಬಗ್ಗೆ ಭಾರತೀಯ ಸೇನೆಯು ಈಗಾಗಲೇ ಪತ್ರಿಕಾ ಪ್ರಕಟಣೆ ನೀಡಿದೆ ಎಂದು ತಿಳಿದುಬಂದಿದೆ.
ಈ ಸ್ಪಷ್ಟನೆಯಲ್ಲಿ ತಿಳಿಸಿರುವಂತೆ “ಈ ಸೌಲಭ್ಯವು 100 ಹಾಸಿಗೆಗಳ ಬಿಕ್ಕಟ್ಟು ವಿಸ್ತರಣೆಯ ಸಾಮರ್ಥ್ಯದ ಭಾಗವಾಗಿದೆ ಮತ್ತು ಇದು ಜನರಲ್ ಆಸ್ಪತ್ರೆ ಸಂಕೀರ್ಣದ ಭಾಗವಾಗಿದೆ. COVID-19 ಪ್ರೋಟೋಕಾಲ್ ಪ್ರಕಾರ ಜನರಲ್ ಆಸ್ಪತ್ರೆಯ ಕೆಲವು ವಾರ್ಡ್‌ಗಳನ್ನು ಪ್ರತ್ಯೇಕ ಸೌಲಭ್ಯಗಳಾಗಿ ಪರಿವರ್ತಿಸಬೇಕಾಗಿತ್ತು. ಆದ್ದರಿಂದ, ಸಾಮಾನ್ಯವಾಗಿ ಆಡಿಯೊ ವಿಡಿಯೋ ತರಬೇತಿ ಹಾಲ್ ಆಗಿ ಬಳಸಲಾಗುತ್ತಿದ್ದ ಈ ಸಭಾಂಗಣವನ್ನು ವಾರ್ಡ್ ಆಗಿ ಪರಿವರ್ತಿಸಲಾಯಿತು, ಏಕೆಂದರೆ ಆಸ್ಪತ್ರೆಯನ್ನು COVID-19 ಚಿಕಿತ್ಸಾ ಆಸ್ಪತ್ರೆ ಎಂದು ಗೊತ್ತುಪಡಿಸಲಾಗಿದೆ. COVID ಪ್ರದೇಶಗಳಿಂದ ಸಂಪರ್ಕ ತಡೆಯನ್ನು ಖಚಿತಪಡಿಸಿಕೊಳ್ಳಲು ಗಾಯಗೊಂಡ ಸೈನಿಕರನ್ನು ಗಾಲ್ವಾನ್‌ನಿಂದ ಬಂದಾಗಿನಿಂದ ಅಲ್ಲಿ ಇರಿಸಲಾಗಿದೆ’” ಎಂದು ಸೇನೆ ಹೇಳಿಕೆ ನೀಡಿದೆ.
ಅಲ್ಲದೆ, ಸೇನೆ ತನ್ನ ಸ್ಪಷ್ಟೀಕರಣದಲ್ಲಿ, ಜೂನ್ 23ರಂದು ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ಮತ್ತು ಸೇನಾ ಕಮಾಂಡರ್ ಕೂಡ ಗಾಯಗೊಂಡ ಸೈನಿಕರನ್ನು ಅದೇ ಸ್ಥಳದಲ್ಲಿ ಭೇಟಿ ಮಾಡಿದ್ದಾರೆ ಎಂದು ಉಲ್ಲೇಖಿಸಿದೆ. ಪ್ರಧಾನ ಮಂತ್ರಿಯ ಭೇಟಿಯ ಫೋಟೋಗಳನ್ನು ಭಾರತೀಯ ಸೇನಾ ಮುಖ್ಯಸ್ಥರ ಭೇಟಿಯ ಫೋಟೋಗಳೊಂದಿಗೆ ಹೋಲಿಸಿದಾಗ, ಅದು ಒಂದೇ ಸಭಾಂಗಣವಾಗಿದೆ. (ಎರಡೂ ಫೋಟೋಗಳ ಹಿನ್ನೆಲೆಯಲ್ಲಿ ಅದೇ ಪರದೆಗಳು, ಅದೇ ಚಿತ್ರಕಲೆ ಮತ್ತು ಟಿಬೆಟಿಯನ್ ಪ್ರಾರ್ಥನಾ ಧ್ವಜಗಳನ್ನು ನೋಡಬಹುದು). ಆದ್ದರಿಂದ, ಗಾಯಗೊಂಡ ಸೈನಿಕರು ಪ್ರಧಾನ ಮಂತ್ರಿಯ ಭೇಟಿಗೆ ಮುಂಚೆಯೇ ಅದೇ ಸಭಾಂಗಣದಲ್ಲಿ (ವಾರ್ಡ್ ಆಗಿ ಪರಿವರ್ತಿಸಲಾದ) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತೀರ್ಮಾನಿಸಬಹುದು.
ಒಟ್ಟಿನಲ್ಲಿ ಮೋದಿಯವರ ಭೇಟಿಗೋಸ್ಕರ ಕಾನ್ಫರೆನ್ಸ್ ಹಾಲ್ ಅನ್ನು ಆಸ್ಪತ್ರೆ ವಾರ್ಡ್ ಆಗಿ ಪರಿವರ್ತಿಸಿಲ್ಲ.