ಅಮೆರಿಕಾದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಅವರು ಭಾರತೀಯ ಮಾಧ್ಯಮಗಳ ಪ್ರಸ್ತುತ ಸ್ಥಿತಿಯನ್ನು ಚಿತ್ರಿಸುವ ‘ಲಿಪ್‌ಸ್ಟಿಕ್ ಆನ್ ಎ ಪಿಗ್’ (ಹಂದಿಯ ಮೇಲೆ ಲಿಪ್ ಸ್ಟಿಕ್) ಶೀರ್ಷಿಕೆಯ ವ್ಯಂಗ್ಯಚಿತ್ರವನ್ನು ರಚಿಸಿದ್ದಾರೆಂಬ ಕಾರ್ಟೂನ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವ್ಯಂಗ್ಯಚಿತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಖದ ಚಿತ್ರವನ್ನು ಹೊಂದಿರುವ ತಾಯಿ ಹಂದಿ ಮತ್ತು ಆ ಹಂದಿಯಿಂದ ಆಹಾರ ಪಡೆಯುತ್ತಿರುವ (ಹಾಲು ಕುಡಿಯುತ್ತಿರುವ) ಅನೇಕ ಹಂದಿಮರಿಗಳನ್ನು ಕೆಲವು ಭಾರತೀಯ ಸುದ್ದಿ ವಾಹಿನಿಗಳ ಲೋಗೊಗಳೊಂದಿಗೆ ಪ್ರತಿನಿಧಿಸಲಾಗಿದೆ. ಅಲ್ಲದೆ, ಹಿಂಭಾಗದಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಪ್ರತಿನಿಧಿಸಲು ‘ಭಾಗವತ್’ ಹೆಸರಿನ ನಾಯಿ ಕೂಡ ಇದೆ. ಅದೇ ರೀತಿಯಲ್ಲಿ ಭಾರತೀಯ ಮಾಧ್ಯಮಗಳನ್ನು ವ್ಯಂಗ್ಯವಾಗಿ ವಿಡಂಬಿಸಿರುವ ಮತ್ತೊಂದು ವ್ಯಂಗ್ಯಚಿತ್ರವನ್ನು ಸಹ ಗ್ಯಾರಿಸನ್ ಬಿಡಿಸಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆ ಕಾರ್ಟೂನ್‍ನಲ್ಲಿ (ಆರ್ಕೈವ್ಡ್) ತಲೆಗಳನ್ನು ಪೆನ್ ನಿಬ್‍ಗಳೊಂದಿಗೆ ಬದಲಾಯಿಸಲಾಗಿರುವ ನಾಯಿಗಳ ಗುಂಪೊಂದು ತಮ್ಮೆದುರು ಕೈಯಲ್ಲಿ ಹಿಡಿದಿರುವ ಮೂಳೆಗಾಗಿ ನಿರೀಕ್ಷಿಸುತ್ತಿವೆ. ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ವಿಶ್ಲೇಷಿಸಲು ಪ್ರಯತ್ನಿಸೋಣ.
ಪ್ರತಿಪಾದನೆ: ಭಾರತೀಯ ಮಾಧ್ಯಮಗಳ ಪ್ರಸ್ತುತ ಸ್ಥಿತಿಯನ್ನು ಚಿತ್ರಿಸುವ ಅಮೇರಿಕನ್ ಕಾರ್ಟೂನಿಸ್ಟ್ ಬೆನ್ ಗ್ಯಾರಿಸನ್ ಅವರ ಕಾರ್ಟೂನ್‍ಗಳು.
ನಿಜಾಂಶ: ಈ ವ್ಯಂಗ್ಯಚಿತ್ರಗಳು ಅಂತರ್ಜಾಲದಲ್ಲಿ ಹಲವು ವರ್ಷಗಳಿಂದ ಹರಿದಾಡುತ್ತಿವೆ ಮತ್ತು ಬೆನ್ ಗ್ಯಾರಿಸನ್ ಆ ವ್ಯಂಗ್ಯಚಿತ್ರಗಳನ್ನು ಬಿಡಿಸಿಲ್ಲ. ಬೆನ್ ಗ್ಯಾರಿಸನ್ ಅವರು ಭಾರತೀಯ ರಾಜಕೀಯದ ಬಗ್ಗೆ ಯಾವುದೇ ವ್ಯಂಗ್ಯಚಿತ್ರಗಳನ್ನು ಚಿತ್ರಿಸಲಿಲ್ಲ ಮತ್ತು ಅವರ ಸಹಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವ್ಯಂಗ್ಯಚಿತ್ರಗಳು ನಕಲಿ ಎಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಕಾರ್ಟೂನ್ -1:
ಆ ಕಾರ್ಟೂನ್‍ಗಳ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ತಂತ್ರಕ್ಕೆ ಒಳಪಡಿಸಿದಾಗ, ಫೋಟೋದಲ್ಲಿರುವ ವ್ಯಂಗ್ಯಚಿತ್ರದ ಮೂಲ ಕಾರ್ಟೂನ್ ದೊರೆತಿದೆ. ಮೂಲ ವ್ಯಂಗ್ಯಚಿತ್ರದಲ್ಲಿ ಅಮೆರಿಕಾದ ಹಿಲರಿ ಕ್ಲಿಂಟನ್ ಅವರ ಮುಖದ ಚಿತ್ರವನ್ನು ಹೊಂದಿರುವ ತಾಯಿ ಹಂದಿ ಮತ್ತು ‘ಸುಳ್ಳು’, ‘ಅಪರಾಧ’, ‘ಕಳ್ಳತನ’, ‘ಲಂಚ’ ಇತ್ಯಾದಿಗಳನ್ನು ಪ್ರತಿನಿಧಿಸುವ ಅನೇಕ ಹಂದಿಮರಿಗಳನ್ನು ಹೊಂದಿದೆ. ಹಿಂದೆ ಇರುವ ನಾಯಿಯನ್ನು ‘ಬಿಲ್’ ಹೆಸರಿನೊಂದಿಗೆ ಹೆಸರಿಸಲಾಗಿದೆ. ಈ ಕಾರ್ಟೂನ್ ಅನ್ನು ಮಾರ್ಚ್ 2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಅಮೆರಿಕಾದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಅವರು ಚಿತ್ರಿಸಿದರು. ಆದ್ದರಿಂದ ಪೋಸ್ಟ್‌ನಲ್ಲಿರುವ ಕಾರ್ಟೂನನ್ನು ಫೋಟೋಶಾಪ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಫೋಟೊಶಾಪ್ ಮಾಡಲಾಗಿರುವ ಕಾರ್ಟೂನ್‌ನಲ್ಲಿರುವ ಮೋದಿಯವರ ಮುಖದ ವ್ಯಂಗ್ಯಚಿತ್ರವನ್ನು 2010 ರಲ್ಲಿ ನರೇಂದ್ರ ಮೋದಿಯವರಿಗೆ 60 ವರ್ಷ ತುಂಬಿದಾಗ ಚಿತ್ರಿಸಿದ ಕಾರ್ಟೂನ್‌ನಿಂದ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ 2017ರಲ್ಲಿ ಟ್ವೀಟ್ ಮಾಡಿದ್ದಾರೆ.
ಕಾರ್ಟೂನ್ -2:
ಈ ವ್ಯಂಗ್ಯಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ತಂತ್ರಕ್ಕೆ ಒಳಪಡಿಸಿದಾಗ, ಆ ಕಾರ್ಟೂನ್ ಕನಿಷ್ಠ 2009 ರಿಂದ ಅಂತರ್ಜಾಲದಲ್ಲಿ ಆಗಾಗ ಬಳಕೆಯಾಗುತ್ತಿದೆ ಎಂದು ಕಂಡುಬಂದಿದೆ. ಇದು ಮೊದಲು ಪರ್ಷಿಯನ್ ವೆಬ್‌ಸೈಟ್ ‘adeli-af.com’ನ ಲೇಖನದಲ್ಲಿ ಕಂಡುಬಂದಿದೆ. ಆ ಅಂಕಣವನ್ನು ಅಫ್ಘಾನಿಸ್ತಾನದಲ್ಲಿನ ವಿದ್ವಾಂಸರು ಮತ್ತು ಬರಹಗಾರರ ಬಗ್ಗೆ ಬರೆಯಲಾಗಿದೆ. ಲೇಖನದಲ್ಲಿ, ಆ ವ್ಯಂಗ್ಯಚಿತ್ರವನ್ನು ರಚಿಸಿದ ವ್ಯಂಗ್ಯಚಿತ್ರಕಾರರ ನಿಖರವಾದ ವಿವರಗಳನ್ನು ಉಲ್ಲೇಖಿಸಲಾಗಿಲ್ಲ.
ನಾವು ಬೆನ್ ಗ್ಯಾರಿಸನ್‌ರ ವೆಬ್‌ಸೈಟ್‌ನಲ್ಲಿ (grrrgraphics.com) ನೋಡಿದಾಗ, ಭಾರತೀಯ ಮಾಧ್ಯಮಗಳ ಪರಿಸ್ಥಿತಿಯನ್ನು ಚಿತ್ರಿಸುವ ಅಂತಹ ಯಾವುದೇ ವ್ಯಂಗ್ಯಚಿತ್ರವನ್ನು ಅವರು ಚಿತ್ರಿಸಿಲ್ಲದಿರುವುದು ಕಾಂಡುಬಂದಿದೆ. ಬೆನ್ ಗ್ಯಾರಿಸನ್ ಅವರು ಭಾರತೀಯ ರಾಜಕೀಯದ ಬಗ್ಗೆ ಯಾವುದೇ ವ್ಯಂಗ್ಯಚಿತ್ರಗಳನ್ನು ಚಿತ್ರಿಸಿಲ್ಲ ಮತ್ತು ಅವರ ಸಹಿಯೊಂದಿಗಿರುವ ಭಾರತೀಯ ಸಂಗತಿಗಳನ್ನು ಚಿತ್ರಿಸುವ ಎಲ್ಲಾ ವ್ಯಂಗ್ಯಚಿತ್ರಗಳು ನಕಲಿ ಎಂದು 2017 ರಲ್ಲಿ ಗ್ಯಾರಿಸನ್ ಟ್ವೀಟ್ ಮಾಡಿದ್ದಾರೆ.
ಈ ಮೊದಲು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಆಡಳಿತವನ್ನು ಗುರಿಯಾಗಿಸಿಕೊಂಡು ಬೆನ್ ಗ್ಯಾರಿಸನ್ ಬಿಡಿಸಿರುವ ವ್ಯಂಗ್ಯಚಿತ್ರ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಫ್ಯಾಕ್ಟ್ಲಿ ಆ ಪ್ರತಿಪಾದನೆಯನ್ನು ನಿರಾಕರಿಸಿಸಿ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಲೇಖನವನ್ನು ಬರೆದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಮೇರಿಕನ್ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಪ್ರಸ್ತುತ ಭಾರತೀಯ ಮಾಧ್ಯಮಗಳ ಸ್ಥಿತಿಯನ್ನು ಚಿತ್ರಿಸುವ ಯಾವುದೇ ವ್ಯಂಗ್ಯಚಿತ್ರಗಳನ್ನು ರಚಿಸಿಲ್ಲ.