ಸಂದೇಶಗಳನ್ನು ಹಂಚಿಕೊಳ್ಳಲು ವಾಟ್ಸಾಪ್ ಬಳಕೆದಾರರಿಗೆ ಶುಲ್ಕ ವಿಧಿಸಲು ಪ್ರಾರಂಭಿಸುತ್ತದೆ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಕಪಕವಾಗಿ ಹರಿದಾಡುತ್ತಿದೆ. ವಾಟ್ಸಾಪ್ ನ ನಿರ್ದೇಶಕ ಮತ್ತು ಸಿಇಒ ನೀಡಿದ ಎಚ್ಚರಿಕೆಯ ಸಂದೇಶ ಎಂದು ಪೋಸ್ಟ್ ಹೇಳಿಕೊಂಡಿದೆ. ಈ ಸಂದೇಶವನ್ನು ತಮ್ಮ 20 ಸಂಪರ್ಕಗಳಿಗೆ ರವಾನಿಸಿ, ವಾಟ್ಸಪ್‌ನ ಹೊಸ ಐಕಾನ್ ಆಗಿ ಫೇಸ್‌ಬುಕ್ “ಎಫ್” ಪಡೆಯಲು ಇದು ಕೇಳುತ್ತದೆ. ಸಂದೇಶವನ್ನು ಫಾರ್ವರ್ಡ್ ಮಾಡದಿದ್ದರೆ ನಾಳೆ ಸಂಜೆ 6 ರೊಳಗೆ ಅವರ ವಾಟ್ಸಾಪ್ ಖಾತೆ ಮುಚ್ಚಲ್ಪಡುತ್ತದೆ ಎಂದು ಅದು ಎಚ್ಚರಿಸಿದೆ. ಈಗಾಗಲೇ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯ ಕುರಿತು ಸಾಕಷ್ಟು ಗೊಂದಲಗಳ ನಡುವೆ ಈ ಸಂದೇಶ ವೈರಲ್ ಆಗಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಸಂದೇಶಗಳನ್ನು ಕಳುಹಿಸಲು ವಾಟ್ಸಾಪ್ ತಮ್ಮ ಬಳಕೆದಾರರಿಗೆ ಶುಲ್ಕ ವಿಧಿಸುತ್ತದೆ.
ಸತ್ಯಾಂಶ: ಸಂದೇಶಗಳನ್ನು ಕಳುಹಿಸುವಾಗ ಬಳಕೆದಾರರಿಗೆ ಶುಲ್ಕ ವಿಧಿಸುವ ಯಾವುದೇ ಹೊಸ ನಿಯಮವನ್ನು ವಾಟ್ಸಪ್ ಘೋಷಿಸಲಿಲ್ಲ. ವಾಟ್ಸಾಪ್ ವೆಬ್‌ಸೈಟ್ ಕೂಡಾ ಇದನ್ನು ಇಂಟರ್ನೆಟ್ ಸೇವೆಗಳನ್ನು ಹೊಂದಿರುವ, ಉಚಿತ ಸಂದೇಶ ಹಂಚಿಕೆ ಮಾಡುವ ವೇದಿಕೆ ಎಂದು ಉಲ್ಲೇಖಿಸುತ್ತದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವಾಟ್ಸಾಪ್ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಹುಡುಕಿದಾಗ, ಸಂದೇಶಗಳನ್ನು ಕಳುಹಿಸಲು ಬಳಕೆದಾರರಿಗೆ ಶುಲ್ಕ ವಿಧಿಸುವ ಯಾವುದೇ ಹೊಸ ನಿಯಮವನ್ನು ವಾಟ್ಸಾಪ್ ಘೋಷಿಸಿಲ್ಲ ಎಂದು ತಿಳಿದುಬಂದಿದೆ. ವಾಟ್ಸಾಪ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಕೂಡಾ ಅಂತಹ ಯಾವುದೇ ಹೊಸ ನೀತಿಯನ್ನು ಘೋಷಿಸಿಲ್ಲ. ವೆಬ್‌ಸೈಟ್‌ನಲ್ಲಿ, ವಾಟ್ಸಾಪ್ ತಮ್ಮ ಸಂಸ್ಥೆಯು ಉಚಿತ ಸಂದೇಶ ಹಂಚಿಕೆ ವೇದಿಕೆಯಾಗಿದೆ ಎಂದು ಉಲ್ಲೇಖಿಸಿದೆ. ಅವರು ತಮ್ಮ ವೆಬ್‌ಸೈಟ್‌ನಲ್ಲಿನ FAQ ವಿಭಾಗದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿಯ ಸುಳ್ಳು ಸಂದೇಶಗಳನ್ನು ಹಂಚಿಕೊಳ್ಳುತ್ತಿರುವ ಬಗ್ಗೆ ವಾಟ್ಸಾಪ್ ತಮ್ಮ ಬ್ಲಾಗ್‌ನಲ್ಲಿ ಲೇಖನವೊಂದನ್ನು ಕೂಡಾ ಪ್ರಕಟಿಸಿದೆ.
ಹಳೆಯ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಇದೇ ರೀತಿಯ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವುದನ್ನು ನಾವು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವಾಟ್ಸಾಪ್ ಅಂತಹ ಯಾವುದೇ ಹೊಸ ನಿಯಮವಯನ್ನು ಘೋಷಿಸಿದ್ದರೆ, ಹಲವಾರು ಮಾಧ್ಯಮ ವೆಬ್‌ಸೈಟ್‌ಗಳು ಅದನ್ನು ತಕ್ಷಣ ವರದಿ ಮಾಡುತ್ತಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ಸುಳ್ಳುಗಳ ಬಗ್ಗೆ ಅನೇಕ ಇತರ ಫ್ಯಾಕ್ಟ್-ಚೆಕಿಂಗ್ ವೆಬ್‌ಸೈಟ್‌ಗಳು ಕೂಡಾ ಲೇಖನಗಳನ್ನು ಪ್ರಕಟಿಸಿದೆ. ಅವುಗಳನ್ನು ಇಲ್ಲಿ, ಇಲ್ಲಿ, ಮತ್ತು ಇಲ್ಲಿ ಓದಬಹುದು.
2019 ರಲ್ಲಿ, ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ 19 ಬಿಲಿಯನ್ ಡಾಲರ್‌ಗೆ ವಾಟ್ಸಾಪ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು, ಸಂದೇಶಗಳನ್ನು ಹಂಚಿಕೊಳ್ಳಲು ವಾಟ್ಸಾಪ್ ಬಳಕೆದಾರರಿಗೆ ಶುಲ್ಕ ವಿಧಿಸಲು ಪ್ರಾರಂಭಿಸುತ್ತಾರೆ ಎಂಬ ಪ್ರತಿಪಾದನೆಯೊಂದಿಗೆ ಸಂದೇಶವನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ಗಳನ್ನು ಇಲ್ಲಿ ನೋಡಬಹುದು. ಈ ಸುಳ್ಳು ಸುದ್ದಿಗಳ ಬಗೆಗಿನ ಸತ್ಯಾಸತ್ಯತೆಯನ್ನು (ಫ್ಯಾಕ್ಟ್‌ಚೆಕ್) ತಿಳಿಸುವ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.
ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ 2014 ರಲ್ಲಿ 19 ಬಿಲಿಯನ್ ಯುಎಸ್ ಡಾಲರ್‌ಗೆ ವಾಟ್ಸಾಪ್ ಅನ್ನು ಖರೀದಿಸಿದ್ದರು. ಆದರೆ, ಹೊಸ ವಾಟ್ಸಾಪ್ ಲೋಗೊ ಫೇಸ್‌ಬುಕ್‌ನ “ಎಫ್” ಚಿಹ್ನೆಗೆ ಬದಲಾಗುತ್ತದೆ ಎಂಬುವುದನ್ನು ಉಲ್ಲೇಖಿಸುವ ಬಗ್ಗೆ ಯಾವುದೇ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ವಾಟ್ಸಾಪ್ ತನ್ನ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಶುಲ್ಕ ವಿಧಿಸುವ ಯಾವುದೇ ಹೊಸ ನಿಯಮನ್ನು ಘೋಷಿಸಲಿಲ್ಲ.