Fake News - Kannada
 

ಕಾಂಗ್ರೆಸ್ ನಾಯಕರು ಹೋಟೆಲ್ ನಿಂದ ಹೊರಬರುತ್ತಿರುವ ವಿಡಿಯೋವನ್ನು ಬಾರ್ ನಿಂದ ಹೊರ ಬಂದಂತೆ ಪ್ರಚಾರ ಮಾಡಲಾಗುತ್ತಿದೆ

0

ರಾಹುಲ್ ಗಾಂಧಿ ಮತ್ತು ಇತರರು ಕೇರಳದಲ್ಲಿ ತಮ್ಮ ‘ಭಾರತ್ ಜೋಡೋ ಯಾತ್ರೆ’ಯ ವೇಳೆ ಕೇರಳದ ಬಾರ್‌ನಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್, ವಾಟ್ಸಾಪ್ ಮತ್ತು ಟ್ವಿಟರ್‌ಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಕುಡಿದು ಕೇರಳದ ಬಾರ್‌ನಿಂದ ಹೊರಬರುತ್ತಿರುವ ದೃಶ್ಯಗಳು.

ನಿಜಾಂಶ: ಈ ವಿಡಿಯೋದಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಓಚಿರಾ ಪಟ್ಟಣದ “ಮಲಬಾರ್” ಹೋಟೆಲ್‌ನಿಂದ ಕಾಂಗ್ರೆಸ್ ನಾಯಕರು ಹೊರಬರುತ್ತಿರುವುದನ್ನು ಕಾಣಬಹುದು. ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಸೆ.17ರಂದು ಪಟ್ಟಣಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ಮುಖಂಡರು ಅಂದು ಬೆಳಗ್ಗೆ ಇದೇ ಹೋಟೆಲ್ ನಲ್ಲಿ ಟಿಫಿನ್ ಮಾಡಿದ್ದಾರೆ. ಆಗ ಹೋಟೆಲ್ ನಲ್ಲಿ ಮದ್ಯ ಸರಬರಾಜು ಮಾಡಿರಲಿಲ್ಲ ಎಂದು ಹೋಟೆಲ್ ಮಾಲೀಕ ಅನ್ಸಾರ್ ಮಲಬಾರ್ ತಿಳಿಸಿದ್ದಾರೆ. ಆದ್ದರಿಂದ, ಈ ಪೋಸ್ಟ್ ತಪ್ಪುದಾರಿಗೆಳೆಯುವಂತಿದೆ.

ಈ ಕುರಿತು ಹುಡುಕಾಡಿದಾಗ ಅನು ಅಶೋಕ್’ ಎಂಬ ಫೇಸ್‌ಬುಕ್ ಬಳಕೆದಾರರು ಇದೇ ರೀತಿಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, “ಇದು ಓಚಿರಾದಲ್ಲಿರುವ ಅನ್ಸರ್ ಅಮೀನ್ ಮಲಬಾರ್ ಟೀ ಅಂಗಡಿ. ಇದು ಬಾರ್ ಅಲ್ಲ,’’ ಎಂದು ಮಲೆಯಾಳಂ ಭಾಷೆಯಲ್ಲಿ ವಿವರಿಸಿದ್ದಾರೆ.

ಈ ಮಾಹಿತಿಯೊಂದಿಗೆ, ನಾವು ಈ ವಿಷಯದ ಬಗ್ಗೆ ಮತ್ತಷ್ಟು ಹುಡುಕಿದಾಗ ಆ ಹೋಟೆಲ್‌ನ ವಿವಿಧ ಫೋಟೋಗಳನ್ನು ಕಂಡುಕೊಂಡಿದ್ದೇವೆ.

ವೈರಲ್ ವಿಡಿಯೋದಲ್ಲಿನ ದೃಶ್ಯಗಳನ್ನು ಈ ಫೋಟೋಗಳೊಂದಿಗೆ ಹೋಲಿಸಿದಾಗ, ಎರಡೂ ಒಂದೇ ಸ್ಥಳವನ್ನು ತೋರಿಸುತ್ತವೆ ಎಂದು ಖಚಿತಪಡಿಸಬಹುದು.

ಈ ಹೋಟೆಲ್ ಬಗ್ಗೆ ವಿವಿಧ ವೆಬ್‌ಸೈಟ್‌ಗಳನ್ನು ಹುಡುಕಿದಾಗ, ಎಲ್ಲಿಯೂ ಬಾರ್ ಎಂದು ನಮೂದಿಸಲಾಗಿಲ್ಲ. ಸಂಬಂಧಿತ ವೆಬ್‌ಸೈಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಹೋಟೆಲ್ ಕೊಲ್ಲಂ ಜಿಲ್ಲೆಯ ಓಚಿರಾ ಪ್ರದೇಶದಲ್ಲಿದೆ. ಭಾರತ್ ಜೋಡೋ ಯಾತ್ರೆಯ ಅಂಗವಾಗಿ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಸೆಪ್ಟೆಂಬರ್ 17 ರಂದು ಬೆಳಿಗ್ಗೆ ಓಚಿರಾದಲ್ಲಿರುವ ಮಲಬಾರ್ ಹೋಟೆಲ್‌ಗೆ ತೆರಳಿದ್ದರು. ಇದರ ವೀಡಿಯೊವನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅದೇ ದಿನ ಸುಮಾರು 1:17:00 ಕ್ಕೆ ಲೈವ್ ಸ್ಟ್ರೀಮ್‌ನಲ್ಲಿ ನೋಡಬಹುದು.

ಇದೇ ಹೋಟೆಲ್ ಬಳಿ ಇತರ ಕಾಂಗ್ರೆಸ್ ನಾಯಕರು ತೆಗೆದ ವಿಡಿಯೋಗಳು ಮತ್ತು ಫೋಟೋಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಮಲಬಾರ್ ಹೋಟೆಲ್ ಮಾಲೀಕ ಅನ್ಸರ್ ಮಲಬಾರ್ ಅವರನ್ನು ಮಾತನಾಡಿಸಿದಾಗ, ”ರಾಹುಲ್ ಗಾಂಧಿ ಮತ್ತು ಇತರರು ಸೆ.17ರಂದು ಬೆಳಗ್ಗೆ ಟಿಫಿನ್ ಮಾಡಲು ನಮ್ಮ ಹೋಟೆಲ್ ಗೆ ಬಂದಿದ್ದರು. ನಮ್ಮ ಹೋಟೆಲ್‌ನಲ್ಲಿ ನಾವು ಯಾವುದೇ ಮದ್ಯವನ್ನು ನೀಡುವುದಿಲ್ಲ. ಆ ದಿನವೂ ಸಹ ಮಾರಿಲ್ಲ. ಹೊರಗೆ ನೂರಾರು ಕಾರ್ಯಕರ್ತರು, ಪೊಲೀಸರು ಇರುವಾಗ ಹಾಗೆ ಮದ್ಯ ಸೇವಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ತೆಗೆದುಕೊಂಡಿದ್ದು ಕಾಫಿ, ಕೇಕ್ ಮತ್ತು ಆಮ್ಲೆಟ್ ಮಾತ್ರ. ಉಳಿದ ನಾಯಕರು ಪರೋಟ, ಅಪ್ಪಂ, ತಿಂದು ಟಿ ಕುಡಿದರು” ಎಂದರು. ಹೋಟೆಲ್ ಮಾಲೀಕರು ನಮಗೆ ಕಳುಹಿಸಿರುವ ಸಿಸಿಟಿವಿ ವಿಡಿಯೋವನ್ನು ಇಲ್ಲಿ ವೀಕ್ಷಿಸಬಹುದು.

ಇದನ್ನೇ ಸುಳ್ಳು ಪ್ರಚಾರ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಖಂಡಿಸಿದ್ದಾರೆ. ಇಂತಹ ಅಪಪ್ರಚಾರ ಮಾಡಿದವರ ವಿರುದ್ಧ ಕೇರಳ ಕಾಂಗ್ರೆಸ್ ನಾಯಕರು ಪೊಲೀಸ್ ದೂರು ಕೂಡ ದಾಖಲಿಸಿದ್ದಾರೆ. ಆದರೆ, ಅಲ್ಲಿನ ನಾಯಕರು ಹೊರಗೆ ಮದ್ಯ ಸೇವಿಸಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ.

ಅಂತಿಮವಾಗಿ, ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಹೋಟೆಲ್‌ನಿಂದ ಹೊರಬರುತ್ತಿರುವ ವೀಡಿಯೊವನ್ನು ಬಾರ್‌ನಿಂದ ಹೊರಗೆ ಬಂದಂತೆ ಅಪಪ್ರಚಾರ ಮಾಡಲಾಗುತ್ತಿದೆ.

Share.

Comments are closed.

scroll