ಮುಂಬೈನಲ್ಲಿ ಕಂಗನಾ ರಣಾವತ್‌ರನ್ನು ಬೆಂಬಲಿಸಿ ಕರ್ಣಿಸೇನಾ ಸಂಘಟಿಸಿದ ರ್ಯಾಲಿ ಎಂಬ ಪ್ರತಿಪಾದನೆಯೊಂದಿಗೆ ಕೇಸರಿ ಧ್ವಜಗಳೊಂದಿಗೆ ಚಲಿಸುತ್ತಿರುವ ವಾಹನಗಳ ರ್ಯಾಲಿಯ ವಿಡಿಯೋವನ್ನೊಳಗೊಂಡ ಪೋಸ್ಟ್ ಒಂದು ವೈರಲ್ ಆಗಿದೆ. ಅದೇ ರೀತಿಯಲ್ಲಿ ಕಂಗನಾ ರಣಾವತ್‌ರಿಗೆ ಬೆಂಬಲ ನೀಡಲು ರಾಜಸ್ಥಾನದಿಂದ ಮುಂಬೈಗೆ ಹೊರಟ ಕರ್ಣಿಸೇನಾದ 1000 ವಾಹನಗಳು ಎಂಬ ಪ್ರತಿಪಾದನೆಯೊಂದಿಗೆ ಟೋಲ್ ಪ್ಲಾಜಾವೊಂದನ್ನು ಹಾದುಹೋಗುವ ಬೆಂಗಾವಲು ವಾಹನಗಳ ವಿಡಿಯೋವೊಂದನ್ನು (ಆರ್ಕೈವ್) ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪ್ರತಿಪಾದನೆಗಳು ನಿಜವೇ ಪರಿಶೀಲಿಸೋಣ ಬನ್ನಿ.
ಪ್ರತಿಪಾದನೆ: ಕಂಗನಾ ರಣಾವತ್‌ರನ್ನು ಬೆಂಬಲಿಸಿ ಕರ್ಣಿಸೇನಾ ಸಂಘಟಿಸಿದ ರ್ಯಾಲಿಯ ವಿಡಿಯೋ.
ನಿಜಾಂಶ: ಮೊದಲನೇ ವಿಡಿಯೋ ರಾಜ ಹರಿಸಿಂಗ್‌ರವರ ಜನ್ಮದಿನಾಚರಣೆಯ ಪ್ರಯುಕ್ತ 2018ರಲ್ಲಿ ಜಮ್ಮುವಿನಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯದ್ದಾಗಿದೆ. ಮತ್ತೊಂದು ವಿಡಿಯೋ ಸಹ 2018ರಲ್ಲೇ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ. ಹಾಗಾಗಿ ಕಂಗನಾ ರಣಾವತ್‌ರನ್ನು ಬೆಂಬಲಿಸಿ ಕರ್ಣಿಸೇನಾ ಸಂಘಟಿಸಿದ ರ್ಯಾಲಿಯ ವಿಡಿಯೋ ಎಂಬ ಪ್ರತಿಪಾದನೆ ತಪ್ಪಾಗಿದೆ.
ಮೊದಲನೇ ವಿಡಿಯೋ:
ವಿಡಿಯೋದ ಆರಂಭದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ರಾಜಕೀಯ ಪಕ್ಷವೊಂದರ ಪೋಸ್ಟರ್ ಒಂದನ್ನು ಬಸ್ ಸ್ಟ್ಯಾಂಡಿನಲ್ಲಿ ಅಂಟಿಸಿರುವುದು ಕಾಣುತ್ತದೆ. ಅದರಲ್ಲಿ ಸೈಕಲ್ ಚಿಹ್ನೆಯೊಂದಿಗೆ ‘ಜಮ್ಮು ಕಾಶ್ಮೀರ್ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ’ ಎಂದು ಬರೆಯಲಾಗಿದೆ. ಈ ಪಕ್ಷದ ಕುರಿತು ಹುಡುಕಿದಾಗ ಇಂದಿಗೂ ಆ ಪಕ್ಷ ಸೈಕಲ್ ಚಿಹ್ನೆಯೊಂದಿಗೆ ಜಮ್ಮು ಕಾಶ್ಮೀರದಲ್ಲಿ ಅಸ್ತಿತ್ವದಲ್ಲಿರುವುದು ಕಂಡುಬಂದಿದೆ. ಅಲ್ಲದೇ ಬೆಂಗಾವಲು ವಾಹನವೊಂದರ ಬಾನೆಟ್ ಮೇಲೆ “ಯುವ ರಜಪೂತ್ ಸಭಾ” ಎಂಬ ಬ್ಯಾನರ್ ಇರುವುದು ಕಂಡುಬಂದಿದೆ.
ಈ ಸುಳಿವುಗಳನ್ನಾಧರಿಸಿ “ಯುವ ರಜಪೂತ್ ಸಭಾ” ಎಂಬ ಕೀವರ್ಡ್‌ಗಳನ್ನು ಬಳಸಿ ಯೂಟ್ಯೂಬ್‌ನಲ್ಲಿ ಹುಡುಕಿದಾಗ ವಿಶಾಲ್ ಸಿಂಗ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವಿಡಿಯೋ ಪತ್ತೆಯಾಗಿದೆ. ಈ ವಿಡಿಯೋವು 2018 ರ ಅಕ್ಟೋಬರ್ 25 ರಂದು ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿದ್ದು, “ರಾಜ ಹರಿಸಿಂಗ್‌ರವರ ಜನ್ಮದಿನಾಚರಣೆಯ ಪ್ರಯುಕ್ತ ಜಮ್ಮುವಿನಲ್ಲಿ ಯುವ ರಜಪೂತ್ ಸಭಾ ಹಮ್ಮಿಕೊಂಡಿದ್ದ ರ್ಯಾಲಿ ಎಂದು ವಿಡಿಯೋ ವಿವರಣೆಯಲ್ಲಿ ಬರೆಯಲಾಗಿದೆ.
ರಾಜ ಹರಿಸಿಂಗ್‌ರವರ ಜನ್ಮದಿನಾಚರಣೆ ಜಮ್ಮು ಕಾಶ್ಮೀರ್ ಎಂಬ ಕೀವರ್ಡ್‌ಗಳೊಂದಿಗೆ ಗೂಗಲ್‌ನಲ್ಲಿ ಹುಡುಕಿದಾಗ ಈ ರ್ಯಾಲಿಯ ಕುರಿತು ವರದಿ ಮಾಡಿರುವ ಹಲವು ಲೇಖನಗಳು ಕಾಣಸಿಗುತ್ತವೆ. ಆ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ರಾಜ ಹರಿಸಿಂಗ್‌ರವರ ಜನ್ಮದಿನಾಚರಣೆಯ ಸಂಭ್ರಮಾಚರಣೆಯ 2018ರ ವಿಡಿಯೋ ವರದಿ ಸಹ ಕಂಡುಬಂದಿದೆ. ಹಾಗಾಗಿ ಈ ವಿಡಿಯೋ ಹಳೆಯದಾಗಿದ್ದು, ರಾಜ ಹರಿಸಿಂಗ್‌ರವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಜಮ್ಮುವಿನಲ್ಲಿ ನಡೆದಿರುವುದು ಎಂಬ ತೀರ್ಮಾನಕ್ಕೆ ಬರಬಹುದು. ಆದುದರಿಂದ ಕಂಗನಾ ರಣಾವತ್ ಬೆಂಬಲಿಸಿ ಕರ್ಣಿಸೇನಾ ರ್ಯಾಲಿ ಎಂದು ಜಮ್ಮು ರ್ಯಾಲಿಯ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಎರಡನೇ ವಿಡಿಯೋ:
ವಿಡಿಯೋದ ಸ್ಕ್ರೀನ್ ಶಾಟ್‌ಗಳನ್ನಿಟ್ಟುಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇದೇ ರೀತಿಯ ವಿಡಿಯೋ ಇರುವ ಬ್ಲಾಗ್ ಒಂದಕ್ಕೆ ಕರೆದೊಯ್ಯುತ್ತದೆ. ಮೂರು ವರ್ಷಗಳ ಹಿಂದೆಯೇ ಈ ಬ್ಲಾಗ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ವಿಡಿಯೋ ವಿವರಣೆಯಲ್ಲಿ “ಸಾವಿರಕ್ಕೂ ಹೆಚ್ಚು ರೈಲುಗಳೊಂದಿಗೆ ಆಗಮಿಸಿದ ಶೇರ್ ಸಿಂಗ್ ರಾಣಾ!, ಸಾವಿರಕ್ಕೂ ಹೆಚ್ಚು ಕಾರುಗಳೊಂದಿಗೆ ಆಗಮಿಸಿದ ಶೇರ್ ಸಿಂಗ್ ರಾಣಾ! ಎಂದು ಬರೆಯಲಾಗಿದೆ. ಜೊತೆಗೆ ಇದೇ ವಿಡಿಯೋವನ್ನು ಏಪ್ರಿಲ್ 08, 2018ರಂದು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದ್ದು, ವಿಡಿಯೋ ವಿವರಣೆಯಲ್ಲಿ “ರಾಜಸ್ತಾನಿ ಆರ್ಮಿಯ ಬೆಂಗಾವಲು ಪಡೆಯೊಂದಿಗೆ ರಾಜ ಭೈಯ್ಯಾ-ದೇಸಿ ಯಂಗ್ಸ್ಟರ್” ಎಂದು ಬರೆಯಲಾಗಿದೆ. ಈ ಎಲ್ಲಾ ಸಾಕ್ಷ್ಯಗಳೊಂದಿಗೆ ಈ ವಿಡಿಯೊ ಮೂರು ವರ್ಷದಷ್ಟು ಹಳೆಯದಾಗಿದ್ದು, ಇದಕ್ಕೂ ಕಂಗನಾಗೂ ಯಾವುದೇ ಸಂಬಂಧವಿಲ್ಲ ಎಂಬ ತೀರ್ಮಾನಕ್ಕೆ ಬರಬಹುದು.
ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಕಂಗನಾ ಟ್ವೀಟ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹುಚರ್ಚಿತವಾಗಿತ್ತು. ಇದು ಮಹಾರಾಷ್ಟ್ರ ಸರ್ಕಾರ ಮತ್ತು ಕಂಗನಾ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಆಕೆ ಮುಂಬೈಗೆ ಬರಬಾರದು ಎಂದು ಕೆಲ ಶಿವಸೇನೆ ಮುಖಂಡರು ಆಗ್ರಹಿಸಿದಾಗ ಕಂಗನಾ ತಾನು ಬಂದೇ ತೀರುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕಂಗನಾಗೆ ಕರ್ಣಿಸೇನಾ ಬೆಂಬಲ ಎಂಬ ಸುದ್ದಿ ಸಹ ವೈರಲ್ ಆಗಿತ್ತು.
ಒಟ್ಟಿನಲ್ಲಿ ಕಂಗನಾ ರಣಾವತ್ ಬೆಂಬಲಿಸಿ ಕರ್ಣಿಸೇನಾ ರ್ಯಾಲಿ ಎಂದು ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.