Fake News - Kannada
 

ಕಾಶಿಯಲ್ಲಿ ಇತ್ತೀಚಿನ ಆಚರಣೆಗಳು ಎಂದು ಸಂಬಂಧವಿಲ್ಲದ ಹಳೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ

0

ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ನಂತರ ಕಾಶಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಅದರ ಆಚರಣೆಗಳ ದೃಶ್ಯಗಳು ಎಂಬ ಹೇಳಿಕೆಯೊಂದಿಗೆ  ವಿಡಿಯೋ ಒಮದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕಾಶಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಸುದ್ದಿ ಹಬ್ಬಿದ ನಂತರ ಈ ಸಂಭ್ರಮಾಚರಣೆ ಮಾಡಲಾಗಿದೆಯೇ ? ಎಂದು ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ನಂತರ ಜನರು ಸಂಭ್ರಮಿಸುತ್ತಿರುವ ವಿಡಿಯೋ.

ನಿಜಾಂಶ : ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಕನಿಷ್ಠ ಆಗಸ್ಟ್ 2019 ರಿಂದ ಇಂಟರ್ನೆಟ್‌ನಲ್ಲಿ ಪ್ರಸಾರವಾಗುತ್ತಿದೆ. ವೀಡಿಯೊ ಹಳೆಯದಾಗಿದೆ ಮತ್ತು ಜ್ಞಾನವಾಪಿ ಮಸೀದಿಯಲ್ಲಿ ಇತ್ತೀಚಿನ ಸಮೀಕ್ಷೆಯ ಸಮಯದಲ್ಲಿ ಕಂಡುಬಂದಿರುವ ಶಿವಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ವಿಡಿಯೊಗೆ ಸಂಬಂಧಿಸಿದಂತೆ ಯಾವುದೇ ವಿಶ್ವಾಸಾರ್ಹ ಮೂಲಗಳನ್ನು ಕಂಡುಹಿಡಿಯಲಾಗಲಿಲ್ಲ. ನಂತರ ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ, YouTube ಚಾನಲ್‌ನಲ್ಲಿ ಅದೇ ವೀಡಿಯೊವನ್ನು ಕಂಡುಬಂದಿದೆ. ಈ YouTube ಬಳಕೆದಾರರು ಈ ವೀಡಿಯೊವನ್ನು 12 ಆಗಸ್ಟ್ 2019 ರಂದು “ವಾರಣಾಸಿಯಲ್ಲಿ ಮಂಜೀರ ದಮ್ರೂ ಜೂಲೂಸ್” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದ್ದಾರೆ.

ಜ್ಞಾನವಾಪಿ ಮಸೀದಿಯಲ್ಲಿ ಇತ್ತೀಚಿನ ನಡೆಸಲಾದ ಸಮೀಕ್ಷೆಯ ಸಮಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಸುದ್ದಿ ಹರಡಿತ್ತು. ಈ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ ಎಂದು ಹೇಳಿಕೊಂಡಿರುವ ವಿಡಿಯೊ ಹಳೆಯದಾಗಿದ್ದು ಶಿವಲಿಂಗ ಪತ್ತೆಯಾಗಿದೆ ಎಂಬ ಸುದ್ದಿ ಹಿನ್ನಲೆಯಲ್ಲಿ ಆಚರಣೆಯಾಗಿರುವ ವಿಡಿಯೋ ಅಲ್ಲ ಎಂದು ತಿಳಿದು ಬಂದಿದೆ.  ಹಲವರು ಈ ವೀಡಿಯೊವನ್ನು 2021ರಲ್ಲಿ ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಆಚರಣೆ ಯಾವಾಗ ನಡೆದಿದೆ ಎಂದು ನಿಖರವಾದ ದಿನಾಂಕ ಮತ್ತು ಸ್ಥಳವನ್ನು  ಖಚಿತಪಡಿಸಲು ಸಾಧ್ಯವಾಗದಿದ್ದರೂ, ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊ ಹಳೆಯದು ಮತ್ತು ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನುವ ಹಿನ್ನಲೆಯಲ್ಲಿ ಈ ಸಂಭ್ರಮಾಚರಣೆ ನಡೆದಿದೆ ಎನ್ನುವುದಕ್ಕೆ ಯಾವುದೆ ಆಧಾರ ಇಲ್ಲ. ಹಾಗಾಗಿ ಈ ವಿಡಿಯೊಗೂ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗಕ್ಕು ಯಾವುದೇ ಸಂಬಂಧವಿಲ್ಲ ಎಂದು ಈ ಎಲ್ಲಾ ಪುರಾವೆಗಳಿಂದ ದೃಢೀಕರಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಆಗಸ್ಟ್ 2019 ರಿಂದ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ವೀಡಿಯೊ ಹಳೆಯದಾಗಿದ್ದು, ಜ್ಞಾನವಾಪಿ ಮಸೀದಿಯಲ್ಲಿ ಇತ್ತೀಚಿನ ಸಮೀಕ್ಷೆಯ ಸಮಯದಲ್ಲಿ ಕಂಡುಬಂದಿದೆ ಎನ್ನುವ ಶಿವಲಿಂಗಕ್ಕೂ ವಿಡಿಯೊಗೂ ಯಾವುದೇ ಸಂಬಂಧವಿಲ್ಲ.

Share.

Comments are closed.

scroll