Fake News - Kannada
 

ವರ್ಜಿನಿಯಾ ವಿವಿ ಹಾಸ್ಪಿಟಲ್ ವಿನ್ಯಾಸವನ್ನು ಅಯೋಧ್ಯೆಯಲ್ಲಿ ಕಟ್ಟಲಿರುವ ಬಾಬ್ರಿ ಆಸ್ಪತ್ರೆ ಕಟ್ಟಡದ ವಿನ್ಯಾಸ ಎಂದು ಹಂಚಿಕೊಳ್ಳಲಾಗಿದೆ

0

ಅಯೋಧ್ಯೆಯಲ್ಲಿ ಬಾಬ್ರಿ ಆಸ್ಪತ್ರೆ ಕಟ್ಟಲಾಗುತ್ತದೆ ಎಂದು ‘ಬಾಬ್ರಿ ಹಾಸ್ಪಿಟಲ್’ ಬೋರ್ಡ್ ಇರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ 2019ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿಯನ್ನು  ಸುನ್ನಿ ವಕ್ಫ್ ಬೋರ್ಡ್ ಗೆ ನೀಡಲಾಗಿತ್ತು. ಈ ಪ್ರತಿಪಾದನೆ ನಿಜವೇ ಪರಿಶೀಲಿಸೋಣ

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಬಾಬ್ರಿ ಆಸ್ಪತ್ರೆಯ ವಿನ್ಯಾಸ ಮತ್ತು ಮೊದಲ ನೋಟ.

ನಿಜಾಂಶ: ಪೋಸ್ಟ್‌ ನಲ್ಲಿ ಹಂಚಿಕೊಂಡಿರುವ ಫೋಟೊ ವರ್ಜಿನಿಯಾ ವಿವಿ ಹಾಸ್ಪಿಟಲ್‌ ನ ವಿಸ್ತರಣೆಯ ವಿನ್ಯಾಸವಾಗಿದೆ. ಅಯೋಧ್ಯೆಯಲ್ಲಿ ಬಾಬ್ರಿ ಆಸ್ಪತ್ರೆ ಕಟ್ಟುತ್ತೇವೆ ಎಂದು ಸುನ್ನಿ ವಕ್ಫ್‌ ಬೋರ್ಡ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ ನಲ್ಲಿ ಹಂಚಿಕೊಂಡಿರುವ ಫೋಟೊವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದೇ ರೀತಿಯ ಹಲವಾರು ಫೋಟೊಗಳು ಅಮೆರಿಕ ಮೂಲದ ‘ಸ್ಮಿತ್ ಗ್ರೂಪ್’ ಎಂಬ ವಾಸ್ತುಶಿಲ್ಪ ಯೋಜನೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಕಂಡುಬಂದಿವೆ. ಪೋಸ್ಟ್‌ ನಲ್ಲಿ ಹಂಚಿಕೊಂಡಿರುವ ಫೋಟೊ ವರ್ಜಿನಿಯಾ ವಿವಿ ಆಸ್ಪತ್ರೆಯ ವಿಸ್ತರಣೆಯ ವಿನ್ಯಾಸವಾಗಿದೆ ಎಂದು ವೆಬ್‌ಸೈಟ್‌ ನಲ್ಲಿ ಹೇಳಲಾಗಿದೆ. ಈ ಮಾಹಿತಿಯನ್ನು ಬಳಸಿ ಮತ್ತಷ್ಟು ಹುಡುಕಿದಾಗ ವರಾಜಿನಿಯಾ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಕೂಡ ಈ ಫೋಟೊ ಕಂಡುಬಂದಿದೆ.

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ನೀಡಲಾದ 5 ಎಕರೆ ಜಾಗದಲ್ಲಿ ಬಾಬ್ರಿ ಆಸ್ಪತ್ರೆಕಟ್ಟತ್ತೇವೆ. ಆಸ್ಪತ್ರೆಗೆ ಡಾ.ಕಫೀಲ್ ಖಾನ್ ರವರನ್ನು ನಿರ್ದೇಶಕರನ್ನಾಗಿ ನೇಮಿಸಲಾಗುವುದು ಎಂದು ಸುನ್ನಿ ವಕ್ಫ್‌ಬೋರ್ಡ್ ಘೋಷಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸುನ್ನಿವಕ್ಫ್‌ ಬೋರ್ಡ್ ಪತ್ರಿಕಾ ಪ್ರಕಟಣೆಯೊಂದನ್ನು ನೀಡಿದೆ. 2020ರ ಆಗಸ್ಟ್ 7ರಂದು  ಬಿಡುಗಡೆಯಾದ ಹೇಳಿಕೆಯಲ್ಲಿ ಮೇಲಿನ ಸುದ್ದಿ ಸುಳ್ಳು ಎಂದು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ನ ಕಾರ್ಯದರ್ಶಿ/ ಅಧಿಕೃತ ವಕ್ತಾರ ಅಥರ್ ಹುಸೇನ್ ತಿಳಿಸಿದ್ದಾರೆ.

2019ರ ಅಯೋಧ್ಯೆ ವಿವಾದದ ಕುರಿತು ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಬಾಬ್ರಿ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಪ್ರತ್ಯೇಕ 5 ಎಕರೆ ಜಾಗವನ್ನು ಸುನ್ನಿವಕ್ಫ್‌ ಬೋರ್ಡ್ ಗೆ ನೀಡಬೇಕೆಂದು ಆದೇಶಿಸಿತ್ತು. ಅದರಂತೆ ಉತ್ತರಪ್ರದೇಶ ಸರ್ಕಾರ 5 ಎಕರೆ ಜಾಗವನ್ನು ಸುನ್ನಿವಕ್ಫ್‌ ಬೋರ್ಡ್‌ ಗೆ ನೀಡಿದೆ. ಸುನ್ನಿವಕ್ಫ್ ಬೋರ್ಡ್ ವತಿಯಿಂದ ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್‌ ಎಂಬ 15 ಜನರ ಸಮಿತಿಯನ್ನು ಇತ್ತೀಚೆಗೆ ರಚಿಸಲಾಗಿದ್ದು, ಆ ಜಾಗದಲ್ಲಿ ಮಸೀದಿ, ಗ್ರಂಥಾಲಯ, ಆಸ್ಪತ್ರೆ, ಇಂಡೋ ಇಸ್ಲಾಮಿಕ್ ಸಂಶೋಧನ ಕೇಂದ್ರ ನಿರ್ಮಿಸವುದಾಗಿ ತಿಳಿಸಿದೆ. ಆದರೆ ಬಾಬ್ರಿ ಆಸ್ಪತ್ರೆ ನಿರ್ಮಿಸುತ್ತೇವೆಂದು ಘೋಷಿಸಿಲ್ಲ.

ಒಟ್ಟಾರೆಯಾಗಿ ಅಯೋಧ್ಯೆಯಲ್ಲಿ ಬಾಬ್ರಿ ಆಸ್ಪತ್ರೆ ಕಟ್ಟಲಾಗುತ್ತದೆ ಎಂದು ವರ್ಜಿನಿಯಾ ವಿವಿ ಆಸ್ಪತ್ರೆಯ ವಿನ್ಯಾಸವನ್ನು ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll