ಭಾರತದ ರಸ್ತೆಗಳ ಸ್ಥಿತಿ ಎಂದು ಪ್ರತಿಪಾದಿಸಿ, ಗುಂಡಿಗಳು ತುಂಬಿದ ರಸ್ತೆಯಲ್ಲಿ ವಾಹನಗಳು ಹಾರಿ ಹಾದುಹೋಗುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ, ರಸ್ತೆಯ ಗುಂಡಿಗಳ ಕಾರಣದಿಂದಾಗಿ ವಾಹನಗಳು ಜಿಗಿಯುವುದನ್ನು ಕಾಣಬಹುದು. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ವಾಹನಗಳು ಜಿಗಿದು ಹೋಗುವ ವಿಡಿಯೋ ಭಾರತದ್ದು.
ನಿಜಾಂಶ: ವಿಡಿಯೋದಲ್ಲಿ ತೋರಿಸಲಾಗಿರುವ ಗುಂಡಿಗಳಿಂದ ತುಂಬಿದ ರಸ್ತೆ ಭಾರತಕ್ಕೆ ಸಂಬಂಧಿಸಿಲ್ಲ. ಈ ವಿಡಿಯೋ ತುಣುಕಿಗೆ ಸಂಬಂಧಿಸಿದ ಹಲವಾರು ಪೋಸ್ಟ್‌ಗಳು ಈ ರಸ್ತೆ ಚೀನಾಕ್ಕೆ ಸಂಬಂಧಿಸಿದ್ದು ಎಂದು ಹೇಳಿಕೊಳ್ಳುತ್ತವೆ. ಅಲ್ಲದೆ, ವಾಹನಗಳ ಚಾಲನಾ ದಿಕ್ಕು ಭಾರತದ ಚಾಲನಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸಹ ಕಾಣಬಹುದು. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್ ಮಾಡಿದ ವಿಡಿಯೋದಲ್ಲಿನ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ಅನೇಕ ಯೂಟ್ಯೂಬ್ ಚಾನೆಲ್‌ಗಳಲ್ಲಿ ಇದೇ ರೀತಿಯ ತುಣುಕನ್ನು ಹೊಂದಿರುವ ಹಲವಾರು ವಿಡಿಯೋಗಳು ಕಂಡುಬಂದಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. ಈ ವಿಡಿಯೋಗಳಲ್ಲಿ, ಇದನ್ನು ಚೀನಾದಲ್ಲಿನ ರಸ್ತೆಯ ಸ್ಥಿತಿ ಎಂದು ಉಲ್ಲೇಖಿಸಿದ್ದಾರೆ. ಈ ಎಲ್ಲಾ ವಿಡಿಯೋಗಳಲ್ಲಿ, ‘ಲೈವ್ ಲೀಕ್’ ಲೋಗೊವನ್ನು ವಿಡಿಯೋ ಪರದೆಯಲ್ಲಿ ಕಾಣಬಹುದು. ಈ ಕೀವರ್ಡ್ ಗಳನ್ನು ಬಳಸಿಕೊಂಡು ಹೆಚ್ಚಿನ ಮಾಹಿತಿಗಾಗಿ ನಾವು ಹುಡುಕಿದಾಗ, ‘ಭಾರಿ ಮಳೆಯ ನಂತರ ಚೀನೀ ರಸ್ತೆಗಳಲ್ಲಿ ಗುಂಡಿಗಳು’ ಎಂಬ ಶೀರ್ಷಿಕೆಯೊಂದಿಗೆ ‘ಲೈವ್ ಲೀಕ್’ ವೆಬ್ ಸೈಟ್‌ನ ವರದಿ ದೊರಕಿದೆ. ಆದರೆ, ಭಾರತದಿಂದ ‘ಲೈವ್‌ಲಿಂಕ್’ ವೆಬ್‌ಸೈಟ್ ಪ್ರವೇಶಿಸಲು ನಮಗೆ ಸಾಧ್ಯವಾಗಲಿಲ್ಲ.
ವಿಡಿಯೋದಲ್ಲಿನ ಜಾಹೀರಾತು ಫಲಕಗಳು ವಿದೇಶಿ ಭಾಷೆಯಲ್ಲಿವೆ ಎಂದು ಸಹ ನೋಡಬಹುದು. ಜಾಹೀರಾತು ಫಲಕಗಳಲ್ಲಿ ಯಾವ ನಿರ್ದಿಷ್ಟ ಭಾಷೆಯನ್ನು ತೋರಿಸಲಾಗಿದೆ ಎಂದು ನಮಗೆ ತೀರ್ಮಾನಿಸಲು ಸಾಧ್ಯವಾಗದಿದ್ದರೂ, ಅದು ಖಂಡಿತವಾಗಿಯೂ ಭಾರತದ ಯಾವುದೇ ಭಾಷೆಯಲ್ಲ. ಅಲ್ಲದೆ, ವಾಹನಗಳ ಚಾಲನಾ ದಿಕ್ಕು ಭಾರತದಲ್ಲಿನ ಚಾಲನಾ ನಿಯಮಗಳಿಗೆ ವಿರುದ್ಧವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ವಾಹನಗಳು ಜಿಗಿದು ಸಾಗುತ್ತಿರುವ ವಿಡಿಯೋ ಭಾರತಕ್ಕೆ ಸಂಬಂಧಿಸಿದ್ದಲ್ಲ.