ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬನಾರಸ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಜಾನ್ ಪಠಿಸಿದರು ಎಂದು ಪ್ರತಿಪಾದಿಸಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯುವುದಕ್ಕಾಗಿ 10 ನಿಮಿಷಗಳ ಕಾಲ ಆಜಾನ್ ಒಂದನ್ನೆ ಪಠಿಸಿದರು ಎಂದು ಪೋಸ್ಟ್‌ನಲ್ಲಿ ಆರೋಪಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಪ್ರತಿಪಾದನೆ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬನಾರಸ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೇವಲ ಆಜಾನ್ ಪಠಿಸಿದರು.
ನಿಜಾಂಶ: ಈ ವಿಡಿಯೋ ಅಕ್ಟೋಬರ್ 10 ರಂದು ಬನಾರಸ್‌ನಲ್ಲಿ ನಡೆದ ಕಿಸಾನ್ ನ್ಯಾಯ್ ರ್ಯಾಲಿಗೆ ಸಂಬಂಧಿಸಿದ್ದಾಗಿದೆ. ಈ ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮದ ಆರಂಭದಲ್ಲಿ ಹಿಂದೂ, ಇಸ್ಲಾಂ ಮತ್ತು ಸಿಖ್ ಧಾರ್ಮಿಕ ಪಠ್ಯಗಳ ಪಠಣ ನಡೆಸಿದರು. ಪ್ರಿಯಾಂಕಾ ಗಾಂಧಿ ಸೇರಿದಂತೆ ವೇದಿಕೆಯಲ್ಲಿದ್ದ ಇತರ ಮುಖಂಡರು ಎದ್ದು ನಿಂತು ಎಲ್ಲ ಪಠ್ಯಗಳಿಗೂ ಗೌರವ ಸಲ್ಲಿಸಿದರು. ಪೋಸ್ಟ್‌ನಲ್ಲಿರುವ ವಿಡಿಯೋದಲ್ಲಿ ಕಾರ್ಯಕ್ರಮದಲ್ಲಿ ಆಜಾನ್ ಪಠಿಸುವ ಸಂದರ್ಭವನ್ನು ಮಾತ್ರ ಕ್ರಾಪ್ ಮಾಡಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ಪೋಸ್ಟ್ ದಾರಿ ತಪ್ಪಿಸುವಂತಿದೆ.
ಪೋಸ್ಟ್‌ನಲ್ಲಿನ ವಿಡಿಯೋದ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ ಅಕ್ಟೋಬರ್ 10 ರಂದು ಬನಾರಸ್‌ನಲ್ಲಿ ನಡೆದ ಕಿಸಾನ್ ನ್ಯಾಯ್ ಕಾರ್ಯಕ್ರಮದ ವಿಡಿಯೋ ದೊರಕಿದೆ. ವಿಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ಮಾತನಾಡಿರುವುದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ಕಾರ್ಯಕ್ರಮದ ಸಂಪೂರ್ಣ ವಿಡಿಯೋವನ್ನು ಯುಪಿ ತಕ್ ಚಾನೆಲ್ ಪ್ರಕಟಿಸಿದೆ. ಕಿಸಾನ್ ನ್ಯಾಯ್ ಕಾರ್ಯಕ್ರಮದ ಆರಂಭದಲ್ಲಿ ಪ್ರಿಯಾಂಕಾ ಗಾಂಧಿ ಸೇರಿದಂತೆ ವೇದಿಕೆಯಲ್ಲಿದ್ದ ಇತರ ಮುಖಂಡರು ಎದ್ದು ನಿಂತು ಎಲ್ಲ ಧಾರ್ಮಿಕ ಪಠ್ಯಗಳಿಗೂ ಗೌರವ ಸಲ್ಲಿಸಿದ್ದಾರೆ. ಆ ದೃಶ್ಯಗಳು ವಿಡಿಯೋದ 0:45 ನಿಮಿಷದಿಂದ ಆರಂಭವಾಗುವುದನ್ನು ಕಾಣಬಹುದು. ಹಿಂದೂ, ಇಸ್ಲಾಂ ಮತ್ತು ಸಿಖ್ ಧಾರ್ಮಿಕ ಪಠ್ಯಗಳ ಪಠಣ ನಡೆಸಿದರು. ವಿಡಿಯೋದ 2:10ರ ನಿಮಿಷದಲ್ಲಿ ಪ್ರಿಯಾಂಕಾ ಗಾಂಧಿ ‘ಹರ ಹರ ಮಹಾದೇವ್’ ಎಂಬ ಘೋಷಣೆ ಕೂಗುವುದನ್ನು ನೋಡಬಹುದು. 3:05 ನಿಮಿಷದಿಂದ ಆಜಾನ್ ಪಠಣ ಶುರುವಾಗುತ್ತದೆ. ಸುಮಾರು ಎರಡೂವರೆ ನಿಮಿಷದ ನಂತರ 5:48 ನಿಮಿಷದಲ್ಲಿ ಸಿಖ್ ಧಾರ್ಮಿಕ ಪಠಣ ಆರಂಭವಾಗುತ್ತದೆ.
ಅಲ್ಲದೇ ಪ್ರಿಯಾಂಕಾ ಗಾಂಧಿ ಕಿಸಾನ್ ನ್ಯಾಯ್ ಸಮಾವೇಶ ಉದ್ದೇಶಿಸಿ ಮಾತನಾಡುವ ವೇಳೆ ದುರ್ಗ ಮಂತ್ರ ಪಠಿಸಿದ್ದಲ್ಲದೆ ಜೈ ಮಾತಾ ದಿ ಎಂಬ ಘೋಷಣೆ ಕೂಗಿದ್ದಾರೆ. ಇದನ್ನು ಹಲವು ಮಾಧ್ಯಮಗಳು ವರದಿ ಮಾಡಿರುವುದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಒಟ್ಟಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬನಾರಸ್‌ನಲ್ಲಿ ನಡೆದ ಕಿಸಾನ್ ರ್ಯಾಲಿ ಕಾರ್ಯಕ್ರಮದಲ್ಲಿ ಕೇವಲ ಆಜಾನ್ ಪಠಿಸಿದರು ಎಂದು ಕ್ರಾಪ್ ಮಾಡಿದ ವಿಡಿಯೋ ಹಂಚಿಕೊಳ್ಳಲಾಗಿದೆ.