Fake News - Kannada
 

ಬದುಕಿರುವ ಯೋಧನನ್ನು ಹುತಾತ್ಮ ಎಂದು ತಪ್ಪಾಗಿ ಹಂಚಿಕೆ

0

ವಿಡಿಯೋದಲ್ಲಿ ‘ಜಿಯೋ ಔರ್ ಜೀನೆ ದೋ’ ಎಂದು ಘೋಷಣೆ ಕೂಗುತ್ತಿರುವ BSF ಯೋಧರೊಬ್ಬರು ಭಾರತದ ಗಡಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಹೇಳುವ ಫೋಟೋ ಮತ್ತು ವೀಡಿಯೊದ ಕೊಲಾಜ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಶವಪೆಟ್ಟಿಗೆಯಲ್ಲಿರುವ ಮೃತದೇಹದ ಚಿತ್ರ ಮತ್ತು ಗಡಿಯಲ್ಲಿನ ಶತ್ರುಗಳ ಬೆದರಿಕೆಯನ್ನು ವಿವರಿಸುವಾಗ BSF ಯೋಧನ  ದೊಡ್ಡ ಮೀಸೆಯ ‘ಜಿಯೋ ಔರ್ ಜೀನೆ ದೋ’ (ಬದುಕಿ ಮತ್ತು ಬದುಕಲು ಬಿಡಿ) ಎಂದು ಹೇಳುವ ವೀಡಿಯೊವನ್ನು ಹಂಚಿಕೊಂಡಿದೆ. ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ಇತ್ತೀಚೆಗೆ ಭಾರತದ ಗಡಿಯಲ್ಲಿ ಹುತಾತ್ಮರಾದ ದೊಡ್ಡ ಮೀಸೆ ಹೊಂದಿರುವ BSF ಯೋಧನ  ವೀಡಿಯೊ.

ನಿಜಾಂಶ :  ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೋವು ಸೆಪ್ಟೆಂಬರ್ 2019 ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೇನಾ ಯೋಧ ರಾಜೇಂದರ್ ಸಿಂಗ್ ಅವರ ಮೃತ ದೇಹವನ್ನು ತೋರಿಸುತ್ತದೆ. ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ನಡುವಿನ ಗಡಿ ಕರ್ತವ್ಯ ಮಾಡುತ್ತಿರುವ ವೀರೇಂದ್ರ ಸಿಂಗ್ ಆಗಿದ್ದು ಅವರು ಜೀವಂತವಾಗಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಫೋಟೋ:

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಹಲವು ಫೇಸ್‌ಬುಕ್ ಬಳಕೆದಾರರು ಸೆಪ್ಟೆಂಬರ್ 2019 ರಲ್ಲಿ ಅದೇ ಫೋಟೋವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಇದನ್ನು ಭಾರತೀಯ ಸೇನಾ ಯೋಧ ರಾಜೇಂದ್ರ ಸಿಂಗ್ ಭಾಟಿ ಅವರ ಮೃತ ದೇಹ ಎಂದು ವಿವರಿಸಲಾಗಿದೆ. ಅದರ ಕೆಲವು ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇಂಟರ್‌ನೆಟ್ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮೂಲಗಳನ್ನು ಹುಡುಕಿದಾಗ, ಇದೇ ರೀತಿಯ ದೃಶ್ಯಗಳನ್ನು ತೋರಿಸುವ ವೀಡಿಯೊವನ್ನು 30 ಸೆಪ್ಟೆಂಬರ್ 2019 ರಂದು YouTube ಬಳಕೆದಾರರು ಪ್ರಕಟಿಸಿದ್ದಾರೆ. ಈ YouTube ಬಳಕೆದಾರರು ಇದನ್ನು ಹುತಾತ್ಮ ರಾಜೇಂದ್ರ ಸಿಂಗ್ ಭಾಟಿ ಅವರ ಅಂತ್ಯಕ್ರಿಯೆಯ ಮೆರವಣಿಗೆ ಎಂದು ವಿವರಿಸಿದ್ದಾರೆ.

ಜೈಸಲ್ಮೇರ್ ಜಿಲ್ಲೆಯ ಮೋಹನ್‌ಗಢ ಗ್ರಾಮದ ನಿವಾಸಿ ರಾಜೇಂದ್ರ ಸಿಂಗ್ ಭಾಟಿ ಅವರು ಸೆಪ್ಟೆಂಬರ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಪ್ರದೇಶದಲ್ಲಿ 15 ರಜಪೂತ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 28 ಸೆಪ್ಟೆಂಬರ್ 2019 ರಂದು ಭಯೋತ್ಪಾದಕರ ವಿರುದ್ಧ ಹೋರಾಡುವಾಗ ರಾಜೇಂದ್ರ ಸಿಂಗ್ ಭಾಟಿ ಹುತಾತ್ಮರಾಗಿದ್ದರು. ಹಲವಾರು ಸುದ್ದಿ ವೆಬ್‌ಸೈಟ್‌ಗಳು ರಾಜೇಂದ್ರ ಸಿಂಗ್ ಭಾಟಿ ಅವರ  ಅಂತ್ಯಕ್ರಿಯೆಯ ಮೆರವಣಿಗೆಯನ್ನು ವರದಿ ಮಾಡುವ ಲೇಖನಗಳು ಮತ್ತು ವೀಡಿಯೊಗಳನ್ನು ಪ್ರಕಟಿಸಿದವು. ಅವುಗಳನ್ನು ಇಲ್ಲಿಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೀಡಿಯೊ:

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದ ಸ್ಕ್ರೀನ್‌ಶಾಟ್‌ನ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಕೆಲವು ಫೇಸ್‌ಬುಕ್ ಬಳಕೆದಾರರಿಂದ ಇತ್ತೀಚೆಗೆ ಪೋಸ್ಟ್ ಮಾಡಲಾದ ಒಂದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊಗಳು ಕಂಡುಬರುತ್ತವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಬಳಕೆದಾರರು ಅವರನ್ನು ಪಶ್ಚಿಮ ಬಂಗಾಳದ ಗೆಡೆ ಗಡಿಯಲ್ಲಿ ಕೆಲಸ ಮಾಡುವ BSF ಯೋಧ ಎಂದು ವಿವರಿಸಿದ್ದಾರೆ. ಭಾರತ-ಬಾಂಗ್ಲಾದೇಶ ಗೆಡೆ ಗಡಿಯಲ್ಲಿ BSF ಸೈನಿಕ ವೀರೇಂದ್ರ ಕುಮಾರ್ ಸಿಂಗ್ ಅವರ ಫೋಟೋ ಪೋಸ್ಟ್ ಮಾಡಿದಂತೆಯೇ, ಫೇಸ್‌ಬುಕ್ ಬಳಕೆದಾರರು ಅದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಫೇಸ್‌ಬುಕ್ ಬಳಕೆದಾರರು ಅವರು ಜೀವಂತವಾಗಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀರೇಂದ್ರ ಸಿಂಗ್ ಈ ವೀಡಿಯೊದ ಬಗ್ಗೆ ಹರಡುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಯೋಧನ ವಿವರಗಳಿಗಾಗಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ಹುಡುಕಿದಾಗ, ವಿಶೇಷ ಮೀಸೆ ಹೊಂದಿರುವ BSF ಸೈನಿಕನ ಒಂದೇ ರೀತಿಯ ದೃಶ್ಯಗಳನ್ನು ತೋರಿಸುವ ವೀಡಿಯೊವನ್ನು ‘ಪ್ರೊಸನ್ ವ್ಲಾಗ್ಸ್’ ಎಂಬ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ್ದು ಕಂಡುಬಂದಿದೆ. 8:56 ನಿಮಿಷಗಳ ವೀಡಿಯೊದಲ್ಲಿ ‘ಜಿಯೋ ಔರ್ ಜೀನೆ ದೋ’ ಘೋಷಣೆ ಕೂಗುವ ಸೈನಿಕ ಮಾತನಾಡಿದ್ದು ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಇತರ ಹೇಳಿಕೆಗಳನ್ನು ಇಲ್ಲಿ ಕೇಳಬಹುದು. ಈ ಬ್ಲಾಗರ್ ಅವರು ಸ್ವಾತಂತ್ರ್ಯ ದಿನದಂದು ಗೆಡೆ ಗಡಿಗೆ ಭೇಟಿ ನೀಡಿದಾಗ ಈ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ.

ವಿಡಿಯೋದಲ್ಲಿ ತೋರಿಸಿರುವ ಈ ಯೋಧನ ಸಾವಿನ ಸುದ್ದಿಗೆ ಸಂಬಂಧಿಸಿದಂತೆ ಹೆಚ್ಚಿನ ಸ್ಪಷ್ಟನೆಗಾಗಿ ‘ಇಂಡಿಯಾ ಟುಡೇ’ ಬಿಎಸ್‌ಎಫ್ ವಕ್ತಾರರನ್ನು ಸಂಪರ್ಕಿಸಿದ್ದು. ‘ಇಂಡಿಯಾ ಟುಡೆ’ ಜೊತೆ ಮಾತನಾಡಿದ ಬಿಎಸ್‌ಎಫ್ ವಕ್ತಾರರು, ವಿಡಿಯೋದಲ್ಲಿ ಕಾಣುವ ಯೋಧ ಬಿಎಸ್‌ಎಫ್ ಕಾನ್‌ಸ್ಟೆಬಲ್ ವೀರೇಂದ್ರ ಸಿಂಗ್ ಅವರು  ಜೀವಂತವಾಗಿದ್ದು, ಪ್ರಸ್ತುತ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 2019 ರಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಹುತಾತ್ಮರಾದ ಭಾರತೀಯ ಸೇನಾ ಯೋಧ ರಾಜೇಂದರ್ ಸಿಂಗ್ ಅವರ ಮೃತ ದೇಹದ ಫೋಟೋವನ್ನು, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ನಡುವಿನ ಗೆಡೆ ಬಾರ್ಡರ್‌ನಲ್ಲಿ ಕೆಲಸ ಮಾಡುತ್ತಿರುವ BSF ಯೋಧ ‘ವೀರೇಂದ್ರ ಸಿಂಗ್’ ಅವರದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಿರೇಂದ್ರ ಸಿಂಗ್ ಜೀವಂತವಾಗಿದ್ದಾರೆ ಎಂದು BSF ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll