Fake News - Kannada
 

ಫೋಟೋದಲ್ಲಿನ ಮುಸ್ಲಿಂ ವ್ಯಕ್ತಿ ಕಳುಹಿಸಿಕೊಡುತ್ತಿರುವ ಹುಡುಗಿಯರು ಅನಾಥರಲ್ಲ, ಅವರನ್ನು ಆತ ದತ್ತು ತೆಗೆದುಕೊಂಡಿಲ್ಲ

0

ಅನಾಥರಾದ  ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ವಿದ್ಯೆಬುದ್ಧಿ ಕಲಿಸಿ ಇಬ್ಬರಿಗೂ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿ ಕಳುಹಿಸುತ್ತಿರುವ ಪಠಾನ್ ಬಾಬು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದಾರೆ, ಎಂದು ಶೇರ್ ಮಾಡುತ್ತಿರುವ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ಧರ್ಮಕ್ಕೆ ಸೇರಿದ ಒಬ್ಬ ವ್ಯಕ್ತಿ, ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಂಡ ಇಬ್ಬರು ಹುಡುಗಿಯರನ್ನು ಕಳುಹಿಸಿಕೊಡುತ್ತಿರುವ ಪೋಟೋಗಳನ್ನು ಈ ಪೋಸ್ಟ್ ನಲ್ಲಿ ನಾವು ನೋಡಬಹುದು. ಆ ಪೋಸ್ಟ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಅನಾಥರಾದ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡು ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಮಾಡಿ ಕಳುಹಿಸಿದ ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಕ್ತಿ ಪಠಾನ್ ಬಾಬು.

ನಿಜಾಂಶ: ಪೋಟೋದಲ್ಲಿರುವ ಆ ಇಬ್ಬರು ಹುಡುಗಿಯರು ಅನಾಥರಲ್ಲ. ಆ ಇಬ್ಬರು ಹುಡುಗಿಯರ ತಾಯಿ ಸವಿತಾ ಭುಸಾರಿ, ತಮ್ಮ ಎದುರುಗಡೆ ಮನೆಯಲ್ಲಿರುವ ಪಠಾನ್ ಬಾಬುರನ್ನು ತನ್ನ ಸಹೋದರನಂತೆ ಭಾವಿಸಿ ಪ್ರತಿ ವರ್ಷ ರಾಖಿ ಕಟ್ಟುತ್ತಾ ಬರುತ್ತಿದ್ದಾರೆ. ಆ ಬಾಂಧವ್ಯದಿಂದ ಪಠಾನ್ ಬಾಬು, ಸವಿತಾ ಭೂಸಾರಿಯವರ ಇಬ್ಬರು ಮಕ್ಕಳ ಮದುವೆಯಲ್ಲಿ ಸೋದರಮಾವನಂತೆ ನಡೆದುಕೊಂಡಿದ್ದಾರೆಂದು ಪರಿಶೀಲನೆಯಿಂದ ತಿಳಿದುಬಂದಿದೆ. ಆದ್ದರಿಂದ, ಪೋಸ್ಟ್ ನಲ್ಲಿ ಮಾಡುತ್ತಿರುವ ಈ ಪ್ರತಿಪಾದನೆ ತಪ್ಪು.

ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಫೋಟೋಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅವೇ ಪೋಟೋಗಳನ್ನು ಹಂಚಿಕೊಂಡಿರುವ  ‘ಮಹಾರಾಷ್ಟ್ರ ಟೈಮ್ಸ್’ ನ್ಯೂಸ್ ವೆಬ್ಸೈಟ್ ನವರು 22 ಆಗಸ್ಟ್ 2020ರಂದು ಪ್ರಕಟಿಸಿದ ಒಂದು ಲೇಖನ ಸಿಕ್ಕಿತು. ಪಠಾನ್ ಬಾಬು ಎನ್ನುವ ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಕ್ತಿ, ತನ್ನ ಎದುರು ಮನೆಯಲ್ಲಿ ವಾಸವಿರುವ ಸವಿತಾ ಭೂಸಾರಿ ಮಕ್ಕಳ ಮದುವೆಯಲ್ಲಿ ಸೋದರಮಾವನಂತೆ ನಡೆದುಕೊಂಡು ಎಲ್ಲಾ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂದು ಲೇಖನದಲ್ಲಿ ತಿಳಿಸಿದ್ದಾರೆ. ಈ ಘಟನೆ ಮಹಾರಾಷ್ಟ್ರದಲ್ಲಿನ ಅಹ್ಮದ್ ನಗರದಲ್ಲಿ ನಡೆದಿದೆ ಎಂದು ಅದರಲ್ಲಿ ಹೇಳುತ್ತಿದ್ದಾರೆ. ಸವಿತಾ ಭೂಸಾರಿ ತನ್ನ ಎದರುಗಡೆ ಮನೆಯಲ್ಲಿ ವಾಸವಿರುವ ಪಠಾಣ್ ಬಾಬುವನ್ನು ತನ್ನ ಸ್ವಂತ ಸಹೋದರನಂತೆ ಭಾವಿಸಿ ಪ್ರತಿ ವರ್ಷ ರಾಖಿ ಕಟ್ಟುತ್ತಾ ಬಂದಿದ್ದಾರೆಂದು, ಆ ಬಾಂಧವ್ಯದಿಂದಲೇ ಪಠಾನ್ ಬಾಬು ಸವಿತಾ ಭೂಸಾರಿ ಅವರ ಇಬ್ಬರು ಮಕ್ಕಳಾದ ಗೌರಿ ಮತ್ತು ಸಾವೇರಿ ಮದುವೆಯಲ್ಲಿ ಸೋದರಮಾವನಂತೆ ನಡೆದುಕೊಂಡರೆಂದು ಲೇಖನದಲ್ಲಿ ಹೇಳಿದ್ದಾರೆ. ತನ್ನ ಗಂಡ ಕುಟುಂಬವನ್ನು ಬಿಟ್ಟು ಹೋಗಿದ್ದರೂ ಸಹ, ಸವಿತಾ ಭೂಸಾರಿ ತನ್ನ ಇಬ್ಬರು ಮಕ್ಕಳನ್ನು ಎಷ್ಟೋ ಕಷ್ಟಪಟ್ಟು ಓದಿಸಿದ್ದಾರೆ ಎಂದು, ಇದಕ್ಕೆ ತನ್ನ ಸಹೋದರನೆಂದು ಭಾವಿಸುವ ಪಠಾನ್ ಬಾಬು ಸಹಾಯ ಮಾಡಿದ್ದಾರೆ ಎಂದು ಅದರಲ್ಲಿ ಹೇಳಿದ್ದಾರೆ.

ಸಮೀರ್ ಗಾಯಕ್ವಾಡ್ ಎನ್ನುವ ಅಂಕಣಕಾರ ತನ್ನ ಫೇಸ್ಬುಕ್ ಪುಟದಲ್ಲಿ ಇದೇ ವಿಷಯವನ್ನು ಹೇಳಿದ್ದಾರೆ. ಆ ಪೋಸ್ಟ್ ಅನ್ನು ನಾವು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ, ಫೋಟೋದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಕಳುಹಿಸಿಕೊಡುತ್ತಿರುವ ಇಬ್ಬರು ಹುಡುಗಿಯರು ಅನಾಥರೆಂದು ಹಂಚಿಕೊಳ್ಳುತ್ತಿರುವ ಈ ಪೋಸ್ಟ್ ತಪ್ಪು.

Share.

About Author

Comments are closed.

scroll