ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕ್ಯಾಪ್ಟನ್ ದಿವಂಗತ ದೀಪಕ್ ವಸಂತ್ ಸಾಥೆ ಅವರು ಹಾಡಿರುವ ಹಾಡಿದು ಎಂಬ ಹೇಳಿಕೆಯೊಂದಿಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕೇರಳದಲ್ಲಿ ‘7 ಆಗಸ್ಟ್ 2020’ ರಂದು ಅಪಘಾತಕ್ಕೀಡಾದ ದುಬೈ-ಕೋಜಿಕೋಡ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪೈಲಟ್-ಇನ್-ಕಮಾಂಡ್ ಕ್ಯಾಪ್ಟನ್ ದೀಪಕ್ ವಸಂತ್ ಸಾಥೆ. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ವೇದಿಕೆಯೊಂದರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಕ್ಯಾಪ್ಟನ್ ದಿ. ದೀಪಕ್ ವಸಂತ್ ಸಾಥೆ ಅವರು ಬಾಲಿವುಡ್ ಹಾಡು ಹಾಡುತ್ತಿರುವ ವಿಡಿಯೋ.
ನಿಜಾಂಶ: ಹಂಚಿಕೊಳ್ಳಲಾಗಿರುವ ವಿಡಿಯೊದಲ್ಲಿ ವೇದಿಕೆಯ ಮೇಲೆ ಹಾಡುವ ಅಧಿಕಾರಿ ನಿವೃತ್ತ ವೈಸ್ ಅಡ್ಮಿರಲ್ ಗಿರೀಶ್ ಲುತ್ರಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಪ್ಟನ್ ದಿ. ದೀಪಕ್ ವಸಂತ್ ಸಾಥೆ ಅಲ್ಲ. ಇಂಡಿಯನ್ ವೆಸ್ಟರ್ನ್ ನೇವಿ ಕಮಾಂಡ್‌ನ ಸುವರ್ಣ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ, ಗಿರೀಶ್ ಲುಥ್ರಾ ಅವರು ವೇದಿಕೆಯ ಮೇಲೆ ಉದಿತ್ ನಾರಾಯಣ್ ಅವರ ‘ಘರ್ ಸೆ ನಿಕಲ್ತೆ ಹಿ’ ಹಾಡನ್ನು ಹಾಡಿದ್ದರು. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವೀಡಿಯೊದಲ್ಲಿ ಕಾಣಿಸುವ ಅಧಿಕಾರಿಯ ಫೋಟೋವನ್ನು ಕ್ಯಾಪ್ಟನ್ ದೀಪಕ್ ವಸಂತ್ ಸಾಥೆ ಅವರ ಫೋಟೋದೊಂದಿಗೆ ಹೋಲಿಸಿದಾಗ, ಎರಡೂ ಒಂದೇ ಅಲ್ಲ ಎಂದು ಕಂಡುಕೊಂಡೆವು. ಅಲ್ಲದೆ, ವಿಡಿಯೊದಲ್ಲಿ ಅಧಿಕಾರಿಯ ಸಮವಸ್ತ್ರವನ್ನು ಗಮನಿಸಿದರೆ, ಅವರು ಭಾರತೀಯ ನೌಕಾಪಡೆಯ ಅಧಿಕಾರಿ ಎಂದು ತಿಳಿಯುತ್ತದೆ. ಈ ಕೀವರ್ಡ್ ಗಳನ್ನು ಬಳಸಿಕೊಂಡು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ‘ದಿ ಕ್ವಿಂಟ್’ ಸುದ್ದಿ ವೆಬ್‌ಸೈಟ್ ‘07 ಮಾರ್ಚ್ 2019’ ರಂದು ಪ್ರಕಟಿಸಿದ ಲೇಖನದಲ್ಲಿ ಅದೇ ವೀಡಿಯೊ ದೊರಕಿದೆ. ಇಂಡಿಯನ್ ವೆಸ್ಟ್ರನ್ ನೌಕಾಪಡೆಯ ಕಮಾಂಡ್‌ನ ‘ಸುವರ್ಣ ಮಹೋತ್ಸವ (50 ವರ್ಷದ ಮಹೋತ್ಸವ)ದ ವಿಶೇಷ ಸಂದರ್ಭದಲ್ಲಿ ವೈಸ್ ಅಡ್ಮಿರಲ್ ಗಿರೀಶ್ ಲುತ್ರಾ ಅವರು ಉದಿತ್ ನಾರಾಯಣ್ ಅವರ ‘ಘರ್ ಸೆ ನಿಕಲ್ತೆ ಹಿ’ಹಾಡನ್ನು ಹಾಡಲು ಆಯ್ಕೆ ಮಾಡಿಕೊಂಡಿದ್ಧಾರೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಗಿರೀಶ್ ಲುತ್ರಾ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವಿಡಿಯೋ ಕಂಡುಬಂದಿದೆ.
‘07 ಆಗಸ್ಟ್ 2020’ ರಂದು, 190 ಪ್ರಯಾಣಿಕರಿದ್ದ ದುಬೈನಿಂದ ಕೇರಳಕ್ಕೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೇರಳದ ಕೋಜಿಕೋಡ್ ವಿಮಾನ ನಿಲ್ದಾಣದಲ್ಲಿ ರನ್‌ವೇಯನ್ನು ಓವರ್‌ಶಾಟ್ ಮಾಡಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪೈಲಟ್-ಇನ್ ಕಮಾಂಡ್ ಕ್ಯಾಪ್ಟನ್ ದೀಪಕ್ ವಸಂತ್ ಸಾಥೆ ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ನಿವೃತ್ತ ವೈಸ್ ಅಡ್ಮಿರಲ್ ಗಿರೀಶ್ ಲುತ್ರಾ ಅವರು ಹಾಡಿದ್ದ ವಿಡಿಯೊವನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಪ್ಟನ್ ದಿವಂಗತ ದೀಪಕ್ ವಸಂತ್ ಸಾಥೆ ಅವರು ಹಾಡಿರುವ ಹಾಡು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.