Fake News - Kannada
 

ಪ್ರಧಾನಿ ಮೋದಿಯವರನ್ನು ಹೊಗಳಿದ ಈ ವ್ಯಕ್ತಿ ಪಾಕಿಸ್ತಾನದ ಪತ್ರಕರ್ತನಲ್ಲ, ಬದಲಿಗೆ ಭಾರತದವರು

0

ಪಾಕಿಸ್ತಾನದ ಪತ್ರಕರ್ತನೊಬ್ಬ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್‌ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಪಾಕಿಸ್ತಾನದ ಪತ್ರಕರ್ತನೊಬ್ಬ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.

ನಿಜಾಂಶ: ಈ ವಿಡಿಯೋದಲ್ಲಿ ಮಾತನಾಡುವ ವ್ಯಕ್ತಿಯನ್ನು ಹರ್ಷವರ್ಧನ್ ಜೈನ್ ಎಂದು ಹೆಸರಿಸಲಾಗಿದೆ. ಈ ವಿಡಿಯೋ ಆಗಸ್ಟ್ 14, 2020ರಲ್ಲಿ ಹರ್ಷವರ್ಧನ್ ಜೈನ್ ಎಂಬುವವರ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿದೆ. ಚಾನೆಲ್ ವಿವರಣೆಯಲ್ಲಿ ಅವರು ತಮ್ಮನ್ನು ಭಾರತದವರು ಎಂದು ಪರಿಚಯಿಸಿಕೊಂಡಿದ್ದಾರೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋದ ಸೋಷಿಯಲ್ ಮೀಡಿಯಾ ಸಂಪರ್ಕದ ವಾಟರ್‌ ಮಾರ್ಕ್‌ನಲ್ಲಿ  ಹರ್ಷವರ್ಧನ್ ಜೈನ್ ಎಂದು ಬರೆಯಲಾಗಿದೆ. ಅಲ್ಲಿಂದ ಕ್ಯೂ ಪಡೆದು ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇದೇ ವಿಡಿಯೋದ ಪೂರ್ತಿ ವಿಡಿಯೋ ಆಗಸ್ಟ್ 14, 2020ರಲ್ಲಿ ‘ಹರ್ಷವರ್ಧನ್ ಜೈನ್’ ಎಂಬುವವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಆಗಿದೆ. ಆ ಯೂಟ್ಯೂಬ್ ಚಾನೆಲ್‌ನ ‘ಪರಿಚಯ’ ವಿಭಾಗದಲ್ಲಿ ಹರ್ಷವರ್ಧನ್ ಜೈನ್ ಭಾರತೀಯ ಮೂಲದ ಪ್ರೇರಣ ನೀಡುವ ಭಾಷಣಕಾರರಾಗಿದ್ದು ತರಬೇತಿ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಎಂದು ಬರೆಯಲಾಗಿದೆ.

ಅಲ್ಲದೇ ಅವರ ಖಾಸಗಿ ವೆಬ್‌ಸೈಟ್ ಮತ್ತು ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿಯೂ ಇದೇ ರೀತಿಯ ಹಲವು ಭಾಷಣಗಳನ್ನು ಕಾಣಬಹುದು. ಅಲ್ಲಿಯು ಅವರು ಭಾರತೀಯರೆಂದು ಪರಿಚಯಿಸಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ವಿಭಾಗವು ಹರ್ಷವರ್ಧನ್ ಜೈನ್‌ರವರ ಕಚೇರಿಯನ್ನು ಸಂಪರ್ಕಿಸಿದೆ. ಜೈನ್‌ರವರು ಪಾಕಿಸ್ತಾನದ ಪತ್ರಕರ್ತರಲ್ಲ, ಅವರು ಭಾರತದವರು ಮತ್ತು ಈ ಭಾಷಣವನ್ನು ಭಾರತದ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಮಾಡಿದ್ದಾರೆ ಎಂದು ಜೈನ್ ಕಚೇರಿಯು ಸಿಬ್ಬಂದಿ ತ್ರಿಲೋಕ್ ಶರ್ಮಾ ಎಂಬುವವರು ಸ್ಪಷ್ಟೀಕರಣ ನೀಡಿದ್ದಾರೆ.

ಹರ್ಷವರ್ಧನ್ ಜೈನ್‌ರವರು ರಾಜಸ್ಥಾನದ ಜೈಪುರ ಜಿಲ್ಲೆಯವರು. ಇವರಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಕಾರ್ಪೊರೇಟ್ ಕಂಪನಿಗಳ ಉದ್ಯೋಗಿಗಳಿಗೆ ನಾಯಕತ್ವ ಬಲವರ್ಧನೆ ಕುರಿತು ಪ್ರೇರಣೆಯ ಭಾಷಣ ಮತ್ತು ತರಬೇತಿ ನೀಡುತ್ತಾರೆ. ಕಾರ್ಪೊರೇಟ್ ಕಂಪನಿಯೊಂದರ ಮಾರುಕಟ್ಟೆ ವಿಭಾಗದ ಉದ್ಯೋಗಿಗಳಿಗೆ ಕೆಲದಿನಗಳ ಹಿಂದೆ ಅವರು ತರಬೇತಿ ನೀಡಿದ ವಿಡಿಯೋ ಇದು ಎಂದು ಶರ್ಮಾ ತಿಳಿಸಿದ್ದಾರೆ.

ಒಟ್ಟಿನಲ್ಲಿ ವಿಡಿಯೋದಲ್ಲಿ ಪ್ರಧಾನಿ ಮೋದಿಯವರನ್ನು ಹೊಗಳುತ್ತಿರುವ ವ್ಯಕ್ತಿ ಪಾಕಿಸ್ತಾನದ ಪತ್ರಕರ್ತರಲ್ಲ. ಅವರು ಭಾರತದ ಪ್ರೇರಣೆಯ ಭಾಷಣಕಾರರಾಗಿದ್ದಾರೆ.

Share.

About Author

Comments are closed.

scroll