Fake News - Kannada
 

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಶ್ಮೀರ ಸುರಕ್ಷಿತವಾಗಿದೆ ಎಂಬುದಕ್ಕೆ ಆಧಾರಗಳಿಲ್ಲ

0

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಮತ್ತು ನಂತರ ಕಾಶ್ಮೀರದ ಪರಿಸ್ಥಿತಿ ಹೇಗಿದೆ ನೋಡಿ ಎಂದು ಹೇಳುವ ಪೋಸ್ಟ್ ಮೂಲಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಹೇಳಿರುಂತೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಬದಲಾವಣೆ ಆಗಿರುವುದು ನಿಜವೆ ಎಂದು ಪೊಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : 2014ರ ಮೊದಲು ಮತ್ತು ನಂತರ ಕಾಶ್ಮೀರದ ಪರಿಸ್ಥಿತಿಯನ್ನು ಹೋಲುವ ದೃಶ್ಯಗಳು.

ನಿಜಾಂಶ : 31 ಮೇ 2019 ರಂದು ಶ್ರೀನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸುಕುಧಾರಿ ವ್ಯಕ್ತಿಗಳು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಾಹನದ ಮೇಲೆ ಕಲ್ಲು ತೂರಿ, ದಾಳಿ ಮಾಡಿರುವುದಾಗಿ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ವಾಹನವೊಂದಕ್ಕೆ ವ್ಯಕ್ತಿಯನ್ನು ಕಟ್ಟಿ ಹಾಕಿ ವಾಹನ ಚಲಾಯಿಸಿರುವ ಘಟನೆಯು 2017ರಲ್ಲಿ ವರದಿಯಾಗಿದೆ. ಈ ಎರಡೂ ಘಟನೆಗಳ ಸಮಯದಲ್ಲಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿದ್ದರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗುವ ಮೊದಲು ಎಂದು ಹೇಳಿಕೊಳ್ಳುವ ದೃಶ್ಯಗಳು ವಾಸ್ತವವಾಗಿ 2019 ರಲ್ಲಿ ಜರುಗಿದ ದೃಶ್ಯಗಳಾಗಿವೆ. ಮುಸುಕುಧಾರಿಗಳು ಜೆ & ಕೆ ಪೊಲೀಸ್ ವಾಹನಕ್ಕೆ ಕಲ್ಲು ತೂರಿ ಹಾನಿ ಮಾಡುವ ದೃಶ್ಯಗಳು 31 ಮೇ 2019 ರಂದು ಶ್ರೀನಗರದಲ್ಲಿ ನಡೆದ ಪ್ರತಿಭಟನೆಗಳಾಗಿವೆ. ಅಸೋಸಿಯೇಟೆಡ್ ಪ್ರೆಸ್‌ನಲ್ಲಿ ಕೆಲಸ ಮಾಡಿದ ದಾರ್ ಯಾಸಿನ್ ಎಂಬ ಪತ್ರಕರ್ತರು ಈ ಪ್ರತಿಭಟನೆಯ ಸಂದರ್ಭದಲ್ಲಿ ವಾಹನದ ಬಾನೆಟ್ ಮೇಲೆ ಹಾರಿದ ವ್ಯಕ್ತಿಯ ಚಿತ್ರವನ್ನು ಸೆರೆ ಹಿಡಿದಿದ್ದರು, ಅದಕ್ಕಾಗಿ ಅವರಿಗೆ 2020 ರಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ನಿಡಲಾಗಿತ್ತು.

ಶ್ರೀನಗರದಲ್ಲಿ ಈ ಘಟನೆ ಸಂಭವಿಸುವ ಕೆಲವು ದಿನಗಳ ಮೊದಲು, ಬಿಜೆಪಿ ಸರ್ಕಾರವು ಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಎರಡನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬಂದಿತ್ತು. ಹಿಂದಿನ ಅವಿಭಜಿತ ಜಮ್ಮು ಮತ್ತು ಕಾಶ್ಮೀರವು ಈ ಸಮಯದಲ್ಲಿ (2019) ರಾಷ್ಟ್ರಪತಿ ಆಳ್ವಿಕೆಯಲ್ಲಿತ್ತು.

ವ್ಯಕ್ತಿಯೊಬ್ಬನನ್ನು ವಾಹನಕ್ಕೆ ಕಟ್ಟಿಹಾಕಿರುವ ದೃಶ್ಯವು 2017 ರಲ್ಲಿ ಸೆರೆಹಿಡಿದಿರುವ ದೃಶ್ಯ ಎಂದು ತಿಳಿದು ಬಂದಿದೆ.. ಸುದ್ದಿ ವರದಿಗಳ ಪ್ರಕಾರ, ಜಮ್ಮು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಗಳು ತೆರಳುತ್ತಿದ್ದ ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸುತ್ತಿದ್ದರು ಅದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ, ಭದ್ರತಾ ಸಿಬಂದ್ದಿಯನ್ನು ಹೊತ್ತೊಯ್ಯುತ್ತಿದ್ದ ಜೀಪಿನ ಮುಂಭಾಗಕ್ಕೆ ಕಾಶ್ಮೀರಿ ವ್ಯಕ್ತಿಯೊಬ್ಬನನ್ನು ಕಟ್ಟಲಾಗಿತ್ತು. ಭಾರತೀಯ ಸೇನೆಯ ಅಧಿಕಾರಿಗಳು ಕಲ್ಲೇಟಿನಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯನ್ನು ‘ಅಸ್ತ್ರವಾಗಿ’  ಬಳಸಿಕೊಂಡಿದ್ದಾರೆ ಎಂದು ಘಟನೆಯ ವಿಡಿಯೋ ಏಪ್ರಿಲ್ 2017 ರಲ್ಲಿ ವೈರಲ್ ಆಗಿತ್ತು ಮತ್ತು ಆ ಸಮಯದಲ್ಲಿ ಸಾಕಷ್ಟು ವಿವಾದವೂ ಸೃಷ್ಟಿಯಾಗಿತ್ತು. 2017 ರ ಸಮಯದಲ್ಲಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹಿಂದಿನ ಅವಿಭಜಿತ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಬಿಜೆಪಿ-ಪಿಡಿಪಿ ಒಕ್ಕೂಟದ ಆಡಳಿತದಲ್ಲಿತ್ತು.

ಮಿಲಿಟರಿ ಸಮವಸ್ತ್ರದಲ್ಲಿರುವ ಸಿಬ್ಬಂದಿ ಮೂವರನ್ನು ವಿಚಾರಣೆ ನಡೆಸುತ್ತಿರುವ ದೃಶ್ಯಗಳನ್ನು ಕನಿಷ್ಠ 2017 ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ ಅವುಗಳನ್ನು (ಇಲ್ಲಿ ಮತ್ತು ಇಲ್ಲಿ) ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋದಲ್ಲಿರುವ ಘಟನೆಗಳು ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದಿವೆ. ಹಾಗಾಗಿ ಪೋಸ್ಟ್‍ನಲ್ಲಿ ಹೇಳಿರುವಂತೆ ಮೋದಿಯವರ ಆಡಳಿತಾವಧಿಯಲ್ಲಿ ಹಿಂದಿಗಿಂತ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿತ್ತು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ.

Share.

Comments are closed.

scroll