Fake News - Kannada
 

ಮಹಾ ಸಾಲಿಗ್ರಾಮ ಅನಂತಪದ್ಮನಾಭ ದೇಗುಲ ಕೇರಳ ಎಂದು ಬೆಂಗಳೂರಿನ ಮನೆಯೊಂದರ ವಿಗ್ರಹದ ಹಂಚಿಕೆ

0

ಕೇರಳದ ತಿರುವನಂತಪುರಂನ ಸಾಲಿಗ್ರಾಮ ಅನಂತಪದ್ಮನಾಭ ವಿಗ್ರಹವನ್ನು ವರ್ಷಕ್ಕೊಮ್ಮೆ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಸುದ್ದಿ ನಿಜವೆ ಎಂದು ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ತಿರುವನಂತಪುರಂನಲ್ಲಿರುವ ಸಾಲಿಗ್ರಾಮ ಅನಂತ ಪದ್ಮನಾಭ ಸ್ವಾಮಿಯ ಫೋಟೋ. ವರ್ಷಕ್ಕೊಮ್ಮೆ ಮಾತ್ರ ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತದೆ.

ನಿಜಾಂಶ : ಇದು ಬೆಂಗಳೂರಿನ “ಡಿವೈನ್ ಸಾಲಿಗ್ರಾಮ್” ಎಂಬ ಆಧ್ಯಾತ್ಮಿಕ ಕೇಂದ್ರದಲ್ಲಿನ ‘ಸಾಲಿಗ್ರಾಮದ ಅನಂತ ಪದ್ಮನಾಭ ಸ್ವಾಮಿ’ಯ ವಿಗ್ರಹ ಫೋಟೋವಾಗಿದೆ. ತಿರುವನಂತಪುರ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ವೆಬ್‌ಸೈಟ್ ಮತ್ತು ಸಾಲಿಗ್ರಾಮ ದರ್ಶನದ ಬಗ್ಗೆ ಈ ರೀತಿಯ ಸುದ್ದಿ ವರದಿಗಳು ಎಲ್ಲಿಯೂ ಕಂಡುಬರುವುದಿಲ್ಲ. 2018 ರಿಂದ ಅವರು ತಮ್ಮ ಮನೆಯಲ್ಲಿರುವ ಈ ಸಾಲಿಗ್ರಾಮದ ವಿಗ್ರಹವನ್ನು ತಿರುವನಂತಪುರಂನಲ್ಲಿರುವ ದೇವಸ್ಥಾನಕ್ಕೆ ಹೋಲಿಸಿ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಮೊದಲನೆಯದಾಗಿ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ವೆಬ್‌ಸೈಟ್‌ನಲ್ಲಿ ಹುಡುಕಾಟ ನಡೆಸಿದಾಗ ಸಾಲಿಗ್ರಾಮದ ವಿಶೇಷ ದರ್ಶನದ ಯಾವುದೇ ಪುರಾವೆಗಳು ಸಿಗಲಿಲ್ಲ. ಅಲ್ಲದೆ, ಈ ವಿಷಯದ ಬಗ್ಗೆ ಎಲ್ಲಿಯೂ ಸುದ್ದಿಗಳಿಲ್ಲ. ಆದರೂ, ತಿರುವನಂತಪುರಂನಲ್ಲಿರುವ ಪದ್ಮನಾಭ ಸ್ವಾಮಿಯ ಪ್ರತಿಮೆಯು 12,008 ಸಾಲಿಗ್ರಾಮಗಳಿಂದ ಮಾಡಲ್ಪಟ್ಟಿದೆ ಎಂದು ದೇವಸ್ಥಾನದ ವೆಬ್‌ಸೈಟ್ ತಿಳಿಸಿದೆ.

ಪೋಸ್ಟ್‌ನಲ್ಲಿನ ಫೋಟೋಗಾಗಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ಫೋಟೋ 2018 ರಿಂದ ಇದೇ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವುದು ಕಂಡುಬಂದಿದೆ. 23 ಸೆಪ್ಟೆಂಬರ್ 2018 ರಂದು, ಅದೇ ಫೋಟೋವನ್ನು “ಶ್ರೀ ಅನಂತ ಪದ್ಮನಾಭ ಸಾಲಿಗ್ರಾಮ” ಎಂದು ಪೋಸ್ಟ್ ಮಾಡಲಾಗಿದೆ. ಆದರೆ ಈ ಪೋಸ್ಟ್ ಗೆ ಬಂದಿರುವ ಕಾಮೆಂಟ್‌ಗಳಲ್ಲಿ “ಸಾಗರ ಶ್ರೀಮಾಲಿ” ಎಂಬ ವ್ಯಕ್ತಿ “ಇದು ನಮ್ಮ ಸಾಲಿಗ್ರಾಮ ಶಿಲೆಯಿಂದ” ಮಾಡಿದ ವಿಗ್ರಹ ಎಂದು ಫೋಟೊ ಸಹಿತ ಪೋಸ್ಟ್ ಮಾಡಿದ್ದಾರೆ. ಎರಡು ಫೋಟೋಗಳನ್ನು ಹೋಲಿಸಿ ನೋಡಿದರೆ ಎರಡೂ ಒಂದೇ ವಿಗ್ರಹ ಎಂದು ಹೇಳಬಹುದು.

ಆದರೆ, ಈ ಕಾಮೆಂಟ್ ಮಾಡಿದ ವ್ಯಕ್ತಿ ತನ್ನ ಫೇಸ್ ಬುಕ್ ಖಾತೆಯನ್ನು ಲಾಕ್ ಮಾಡಿದ್ದು, ಸಂಪರ್ಕಕ್ಕೆ ಸಿಗಲಿಲ್ಲ. ಇದೇ ಫೋಟೋವನ್ನು 2021ರಲ್ಲಿ ಮತ್ತೊಬ್ಬರು ಹಂಚಿಕೆ ಮಾಡಿದ್ದು, ಆ ಪೋಸ್ಟ್ ಅಡಿಯಲ್ಲಿ ನಾಗರಾಜ್ ಎಂಬ ವ್ಯಕ್ತಿ ಈ ಸಾಲಿಗ್ರಾಮ ವಿಗ್ರಹ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿದ್ದು, ಇದು ತಿರುವನಂತಪುರಕ್ಕೆ ಸೇರಿದ್ದಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಲಭ್ಯವಾದ ಮಾಹಿತಿಯೊಂದಿಗೆ ಅಂತರ್ಜಾಲದಲ್ಲಿ ಹುಡುಕಾಡಿದಾಗ ಬೆಂಗಳೂರಿನಲ್ಲಿ “ದೈವಿಕ ಶಾಲಿಗ್ರಾಮ” ಎಂಬ ಕೇಂದ್ರವಿರುವುದು ಕಂಡುಬಂದಿದ್ದು. ಸಂಬಂಧಿತ ಫೇಸ್‌ಬುಕ್ ಪ್ರೊಫೈಲ್ ಅನ್ನು ನೋಡಿದಾಗ, 23 ಸೆಪ್ಟೆಂಬರ್ 2018 ರಂದು ಅನಂತ ಚತುರ್ದಶಿಯ ಸಂದರ್ಭದಲ್ಲಿ ಹಂಚಿಕೊಂಡ ಫೋಟೋಗಳನ್ನು ಇಲ್ಲಿ ನೋಡಬಹುದು. ಅದೇ ದಿನ, ಅಲಂಕಾರ ಪೂರ್ವ ಫೋಟೋವನ್ನು ಸಹ ಹಂಚಿಕೊಳ್ಳಲಾಗಿದೆ. ಈ ಫೋಟೋ ಈಗ ವೈರಲ್ ಆಗುತ್ತಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ” Divine Shaligram ” ವನ್ನು ಸಂಪರ್ಕಿಸಿದಾಗ, ಇದು ತಮ್ಮ ಮನೆಯಲ್ಲಿ ನಡೆದ ಪೂಜೆಗೆ ಸಂಬಂಧಿಸಿದ ಫೋಟೋ ಎಂದು ಸ್ಪಷ್ಟಪಡಿಸಿದರು ಮತ್ತು 2018 ರಿಂದ ಕೇರಳದ ಪದ್ಮನಾಭ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹಂಚಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಅಲ್ಲದೆ, ಅವರ ಯೂಟ್ಯೂಬ್ ಚಾನೆಲ್‌ನಲ್ಲಿ, ವಿವಿಧ ಗಾತ್ರದ ಸಾಲಿಗ್ರಾಮ ವಿಗ್ರಹ ಪ್ರದರ್ಶಿಸುವುದನ್ನು ಕಾಣಬಹುದು.

ಇದಲ್ಲದೆ, ತಿರುವನಂತಪುರಂನ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ವಿಶೇಷ ಸಾಲಿಗ್ರಾಮ ವಿಗ್ರಹ ದರ್ಶನದ ವಿವರಗಳಿಗಾಗಿ ನಾವು ದೇವಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಅವರು ಪ್ರತಿಕ್ರಿಯಿಸಿದ ನಂತರ ನಾವು ಆ ಮಾಹಿತಿಯನ್ನು ಈ ಲೇಖನಕ್ಕೆ ಸೇರಿಸುತ್ತೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ಇದು ಬೆಂಗಳೂರಿನ ಮನೆಯೊಂದರಲ್ಲಿ ಇರುವ ಅನಂತ ಪದ್ಮನಾಭ ಸ್ವಾಮಿ ಸಾಲಿಗ್ರಾಮ ವಿಗ್ರಹದ ಪೂಜೆಯ ಛಾಯಾಚಿತ್ರ ಎಂಬುದು ಸ್ಪಷ್ಟವಾಗುತ್ತದೆ. ಇದು ತಿರುವನಂತಪುರ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಸೇರಿಲ್ಲ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll