Fake News - Kannada
 

ಸುಪ್ರೀಂ ಕೋರ್ಟ್ ಜಡ್ಜ್ ಸೂರ್ಯ ಕಾಂತ್ ಜೊತೆಯಲ್ಲಿ ಪತ್ರಕರ್ತರ ಔತಣ ಕೂಟ ಎಂಬುದು ಸುಳ್ಳು

0

‘ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ.ಬಿ.ಪರ್ದೀವಾಲಾ ಅವರ ಜೊತೆ ಪತ್ರಕರ್ತರು ಭೋಜನಕೂಟದಲ್ಲಿ ಪಾಲ್ಗೊಂಡಿದ್ದಾರೆ. ಎನ್‌.ಡಿ ಟಿ.ವಿ. ಸುದ್ದಿವಾಹಿನಿಯ ಸಂಸ್ಥಾಪಕ ಪ್ರಣಯ್‌ ರಾಯ್‌, ಪತ್ರಕರ್ತೆ ರಾಧಿಕಾ ರಾಯ್‌ ಮತ್ತು ‘ದಿ ಹಿಂದು’ ಪತ್ರಿಕೆ ಸಮೂಹದ ಮುಖ್ಯಸ್ಥ ಎನ್‌. ರಾಮ್‌ ಅವರು ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  ಬಿಜೆಪಿ ಮತ್ತು ನೂಪುರ್ ಶರ್ಮಾ ಅವರನ್ನು ದೂಷಿಸುವ ಎಲ್ಲರೂ ಒಟ್ಟಿಗೇ ಸೇರಿದ್ದಾರೆ’ ಎಂದು ಈ ಚಿತ್ರಕ್ಕೆ ವಿವರಣೆ ನೀಡಲಾಗಿದೆ. ಬಿಜೆಪಿಯ ವಕ್ತಾರೆ ಆಗಿದ್ದ ನೂಪುರ್‌ ಶರ್ಮಾ ಅವರ ವಿರುದ್ಧ ಸುಪ್ರೀಂ ಕೋರ್ಟ್‌ ದ್ವಿಸದಸ್ಯ ಪೀಠ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಈ ಚಿತ್ರ ವೈರಲ್ ಆಗಿದೆ. ಹಾಗಿದ್ದರೆ ಈ ಪೋಟೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾನೆ: ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಸೂರ್ಯ ಕಾಂತ್ ಮತ್ತು JB ಪರ್ದಿವಾಲಾ ಅವರ ಫೋಟೋ.

ನಿಜಾಂಶ : ಪೋಸ್ಟ್ ಮಾಡಿದ ಫೋಟೋದಲ್ಲಿ ಸುಪ್ರೀಂ ನ್ಯಾಯಾಧೀಶರಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಇಲ್ಲ. ಫೋಟೋದಲ್ಲಿರುವ ವ್ಯಕ್ತಿಗಳು – ಪ್ರಣಯ್ ರಾಯ್, ರಾಧಿಕಾ ರಾಯ್, ಪಿ ತಿಯಾಗ ರಾಜನ್, ಬೃಂದಾ ಕಾರಟ್, ಪ್ರಕಾಶ್ ಕಾರಟ್, ಎನ್ ರಾಮ್ ಮತ್ತು ದೀಪಾಲಿ ಸಿಕಂದ್. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್ ಮಾಡಿದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಅದೇ ಫೋಟೋವನ್ನು ‘ಮೈಂಡ್‌ಸ್ಕೇಪ್ಸ್‘ ತಮ್ಮ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ‘ಮೈಂಡ್‌ಸ್ಕೇಪ್ಸ್’ ಇದೇ ಫೋಟೋವನ್ನು 03 ಜುಲೈ 2022 ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕೆಳಗಿನ ವಿವರಣೆಯೊಂದಿಗೆ ಪೋಸ್ಟ್ ಮಾಡಿದೆ – “ತಮಿಳುನಾಡಿನ ಹಣಕಾಸು ಸಚಿವ ಶ್ರೀ. ಪಿ. ತ್ಯಾಗರಾಜನ್, ಡಾ. ಪ್ರಣಯ್ ರಾಯ್, ಶ್ರೀಮತಿ ರಾಧಿಕಾ ರಾಯ್, ಶ್ರೀಮತಿ ಬೃಂದಾ ಕಾರಟ್ ಮತ್ತು ಶ್ರೀ ಪ್ರಕಾಶ್ ಕಾರಟ್, ಶ್ರೀ ಎನ್. ರಾಮ್ ಮತ್ತು ಶ್ರೀಮತಿ ದೀಪಾಲಿ ಸಿಕಂದ್ ಬೋಜನಕೂಟದಲ್ಲಿ ಇರುವುದು”.

ದೀಪಾಲಿ ಸಿಕಂದ್ (ಪ್ರಕಾಶ್ ಕಾರಟ್ ಪಕ್ಕದಲ್ಲಿರುವ ಫೋಟೋದಲ್ಲಿ ನೋಡಬಹುದು) ‘ಮೈಂಡ್‌ಸ್ಕೇಪ್ಸ್‘ ನ ಸಂಸ್ಥಾಪಕರು.

ಮೈಂಡ್‌ಸ್ಕೇಪ್ಸ್ ಮಾಡಿದ ಪೋಸ್ಟ್‌ಗಳಲ್ಲಿ ಎಸ್‌ಸಿ ನ್ಯಾಯಾಧೀಶರಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ಉಲ್ಲೇಖವಿಲ್ಲ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ವಿವರಗಳನ್ನು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಸಂಬಂಧವಿಲ್ಲದ ಪೋಟೊವನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೆ.ಬಿ.ಪರ್ದೀವಾಲಾ ಅವರ ಜೊತೆ ಪತ್ರಕರ್ತರು ಭೋಜನಕೂಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll