Fake News - Kannada
 

ಬಿಜೆಪಿ ಶಾಸಕ ರಾಜಾಸಿಂಗ್‌ರವರನ್ನು ಪೊಲೀಸರು ಬಂಧಿಸಿದ ಹಳೆಯ ವಿಡಿಯೋವನ್ನು ಇತ್ತೀಚಿಗಿನ ಪ್ರಕರಣ ಎಂದು ತಪ್ಪುದಾರಿಗೆಳೆಯುತ್ತಿದ್ದಾರೆ

0

ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಪೊಲೀಸರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿರುವ ಮತ್ತು ಪೊಲೀಸರು ಅವರನ್ನು ಬಂಧಿಸುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೈದರಾಬಾದ್‌ನ ಅಂಬರ್‌ಪೇಟ್‌ನಲ್ಲಿರುವ ದೇವಸ್ಥಾನದ ಬಳಿ ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡುವುದನ್ನು ತಡೆಯಲು ರಾಜಾಸಿಂಗ್ ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿದರು ಎಂದು ಈ ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿದೆ. ಈ ಘಟನೆ ಇತ್ತೀಚೆಗಷ್ಟೇ ನಡೆದಿದೆ ಎಂದೂ ಪೋಸ್ಟ್ ಹೇಳಿಕೊಂಡಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೆ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ತೆಲಂಗಾಣದ ಅಂಬರ್‌ಪೇಟ್‌ನ ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡಲು ಅಡ್ಡಿಪಡಿಸಿದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಇತ್ತೀಚೆಗೆ ಬಂಧಿಸಿರುವ ವೀಡಿಯೊ.

ನಿಜಾಂಶ: ಈ ವೀಡಿಯೋದಲ್ಲಿರುವ ದೃಶ್ಯಗಳು ಮೇ 2019 ರಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿದ್ದಾಗಿವೆ. ಜಮೀನಿನಲ್ಲಿ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆಗಳು ನಡೆದಿದ್ದು, ಅದರ ಮಾಲೀಕತ್ವಕ್ಕಾಗಿ ಎರಡು ಬಣಗಳ ನಡುವೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶಾಸಕ ರಾಜಾ ಸಿಂಗ್ ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದರು. ಈಗ ವೈರಲ್ ಆದ ವೀಡಿಯೊ ಈ ಘಟನೆಗೆ ಸಂಬಂಧಿಸಿದ್ದಾಗಿದೆ. ಹಾಗೆಯೆ ಮುಸ್ಲಿಮರು ರಸ್ತೆಗಳಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೂ ಈ ವೀಡಿಯೋಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋ ಎರಡು ವರ್ಷಗಳಷ್ಟು ಹಳೆಯದಾಗಿದ್ದು, ಸಾರ್ವಜನಿಕ ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡುವುದಕ್ಕೂ ಈ ವೀಡಿಯೋಗು ಯಾವುದೇ ಸಂಬಂಧವಿಲ್ಲ. ಸಂಬಂಧಿತ ಕೀವರ್ಡ್‌ಗಳೊಂದಿಗೆ ಯೂಟ್ಯೂಬ್ ಹುಡುಕಿದಾಗ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ 2019ರ ಹಲವಾರು ಸುದ್ದಿ ವರದಿಗಳು ಕಂಡುಬಂದಿವೆ. ಅದೇ ವೈರಲ್ ದೃಶ್ಯಗಳನ್ನು ಹೊಂದಿರುವ ಅಂತಹ ಒಂದು ವೀಡಿಯೊದಲ್ಲಿ, ಪೊಲೀಸ್ ಕಮಿಷನರ್ ಅಂಜನಿ ಕುಮಾರ್ ಅವರು ಜಮೀನು ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗಳು ನಡೆದವು ಎಂದು ಹೇಳುವುದನ್ನು ನಾವು ಕೇಳಬಹುದು, ಇದು ಅಂತಿಮವಾಗಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟಕ್ಕೆ ಕಾರಣವಾಯಿತು.

ಮೇಲೆ ತಿಳಿಸಿದ ಯೂಟ್ಯೂಬ್ ವೀಡಿಯೊಗಳಿಂದ ಸೂಚನೆಯನ್ನು ತೆಗೆದುಕೊಂಡು, ಸಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್‌ನಲ್ಲಿ ಹುಡುಕಿದಾಗ ಅದೇ ಘಟನೆಗೆ ಸಂಬಂಧಿಸಿದ ವರದಿಗಳು ಸಿಕ್ಕಿವೆ. ಒಂದು ವರದಿಯ ಪ್ರಕಾರ, ಅಂಬರ್‌ಪೇಟ್‌ನ ತುಂಡು ಭೂಮಿಯಲ್ಲಿ ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆಗಳು ಸಂಭವಿಸಿವೆ. ವಕ್ಫ್ ಬೋರ್ಡ್ ಭೂಮಿಯ ಮಾಲೀಕತ್ವವನ್ನು ಹೊಂದಿದೆ ಎಂದು ಹೇಳಿಕೊಂಡರೆ, ರಾಜಾ ಸಿಂಗ್ ಈ ಭೂಮಿಯನ್ನು ಜಿಎಚ್‌ಎಂಸಿ ಖರೀದಿಸಿದೆ ಎಂದು ವಾದಿಸಿದ್ದರು.

ಈ ಸಂದರ್ಭದಲ್ಲಿಯೇ ಎರಡು ಗುಂಪುಗಳ ನಡುವೆ ಘರ್ಷಣೆಗಳು ನಡೆದವು, ಇದು ಕಲ್ಲು ತೂರಾಟಕ್ಕೆ ಕಾರಣವಾಯಿತು ಮತ್ತು ಅಂತಿಮವಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ರಾಜಾ ಸಿಂಗ್‌ನನ್ನು ವಶಕ್ಕೆ ತೆಗೆದುಕೊಂಡರು. ಆಗ ಅನೇಕ ಸುದ್ದಿ ಸಂಸ್ಥೆಗಳು ಈ ಘಟನೆಯನ್ನು ವರದಿ ಮಾಡಿದ್ದವು. ಇವುಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ಇದಲ್ಲದೆ, ಅಂಬರ್‌ಪೇಟ್ ಪ್ರದೇಶದಲ್ಲಿ ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡುವ ಯಾವುದೇ ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ತೆಲಂಗಾಣ ಶಾಸಕ ರಾಜಾ ಸಿಂಗ್‌ನನ್ನು ಪೊಲೀಸರು ಬಂಧಿಸಿದ ಹಳೆಯ ವೀಡಿಯೊವನ್ನು ಮತ್ಯಾವುದೋ ಸನ್ನಿವೇಶದೊಂದಿಗೆ ತಳುಕು ಹಾಕಿ ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡಿವೆ.

Share.

About Author

Comments are closed.

scroll