Fake News - Kannada
 

ಭಾರತೀಯ ಮಹಿಳಾ ಕುಸ್ತಿ ಪಂದ್ಯದ ಹಳೆಯ ವೀಡಿಯೊ ‘ಪಾಕಿಸ್ತಾನದ ಕುಸ್ತಿಪಟುವನ್ನು ಆರ್‌ಎಸ್‌ಎಸ್ ಸದಸ್ಯೆ ಹೊಡೆಯುತ್ತಿದ್ದಾರೆ ಎಂದು ಹರಿದಾಡುತ್ತಿದೆ

0

ಮುಕ್ತ ಶೈಲಿಯ ಕುಸ್ತಿ ಸ್ಪರ್ಧೆಯಲ್ಲಿ ಇಬ್ಬರು ಮಹಿಳೆಯರು ಕುಸ್ತಿಯಾಡುತ್ತಿರುವ ವಿಡಿಯೊವನ್ನು, ‘ಪಾಕಿಸ್ತಾನದ ಕುಸ್ತಿ ಪಟು ಭಾರತವನ್ನು ನಿಂದಿಸಿದಾಗ ಆರೆಸ್ಸೆಸ್‌‌ನ ಅಂಗ ಸಂಸ್ಥೆ ದುರ್ಗಾ ವಾಹಿನಿಯ ಸ್ವಯಂ ಸೇವಕಿ ಸಂಧ್ಯಾ ಪಡಕೆ ಬಂದು ಅವರನ್ನು ಹೊಡೆದರು” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕೆಲವು ಪೋಸ್ಟ್‌ನಲ್ಲಿ“ ಪಾಕಿಸ್ತಾನಿ ಕುಸ್ತಿ ಪಟು ತನ್ನ ವಿರುದ್ದ ಹೋರಾಡಲು ಸವಾಲು ಹಾಕಿದರು, ಅವರನ್ನು ಆರೆಸ್ಸೆಸ್ಸಿನ ಸ್ವಯಂ ಸೇವಕಿ ಸಂಧ್ಯಾ ಪಡಕೆ ಹೊಡೆದರು” ಎಂದು ಕೂಡಾ ವೈರಲ್ ಆಗಿದೆ. ಇದು ನಿಜವೆ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ತನ್ನ ವಿರುದ್ದ ಸ್ಪರ್ಧೆಗೆ ಬರುವಂತೆ ಪ್ರೇಕ್ಷಕರೊಂದಿಗೆ ಸವಾಲೆಸೆದ ಪಾಕಿಸ್ತಾನದ ಕುಸ್ತಿಪಟುವನ್ನು ಆರೆಸ್ಸೆಸ್ಸಿನ ದುರ್ಗಾ ವಾಹಿನಿಯ ಸಂಧ್ಯಾ ಪಡಕೆ (ಕೇಸರಿ ಬಟ್ಟೆ ಧರಿಸಿರುವ) ಹೊಡೆದರು.

ವಾಸ್ತವ: ಈ ವಿಡಿಯೋ ಹರಿಯಾಣದ ಮಾಜಿ ಪೋಲಿಸ್ ಅಧಿಕಾರಿ ಕವಿತಾ ಮತ್ತು ಪವರ್ ಲಿಫ್ಟಿಂಗ್ ಹಾಗೂ ಎಂಎಂಎ ಚಾಂಪಿಯನ್ ಬುಲ್ ಬುಲ್ ಅವರ ವಿರುದ್ದ ಕುಸ್ತಿಯಾಡಿದ್ದಾಗಿದೆ. ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಬುಲ್‌ಬುಲ್‌‌, ತನ್ನ ವಿರುದ್ಧ ಹೋರಾಡಲು ಪ್ರೇಕ್ಷಕರಿಗೆ ಸವಾಲು ಹಾಕಿದಂತೆ ವೀಡಿಯೊದಲ್ಲಿ ತೋರಿಸಲಾಗುತ್ತದೆ. ಈ ಮಹಿಳೆಯರಿಬ್ಬರೂ ಪಾಕಿಸ್ತಾನ ಅಥವಾ ದುರ್ಗಾ ವಾಹಿನಿ, ಆರ್‌ಎಸ್‌ಎಸ್‌ನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೈರಲ್‌ ವಿಡಿಯೋ ಬಗ್ಗೆ ಸಂಬಂಧಿತ ಕೀವರ್ಡ್‌ಗಳೊಂದಿಗೆ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ, ಅದೇ ವೀಡಿಯೊವನ್ನು ಮಾಜಿ WWE ಕುಸ್ತಿಪಟು ಖಲಿ (ದಿಲೀಪ್ ಸಿಂಗ್) ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ 2016 ರಲ್ಲಿ ಹಂಚಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಪೋಸ್ಟ್‌ನಲ್ಲಿ ಬುಲ್ ಬುಲ್ ಎಂದು ಸವಾಲೆಸೆಯುವ ಮಹಿಳೆಯನ್ನು (ಕಪ್ಪು ಬಣ್ಣದ ಬಟ್ಟೆ ಧರಿಸಿರುವ) ಗುರುತಿಸಿದೆ. ಮತ್ತು ಮತ್ತೊಬ್ಬ ಮಹಿಳೆ (ಕೇಸರಿ ಸಲ್ವಾರ್-ಕಮೀಜ್‌ ಧರಿಸಿರುವ) ಮಾಜಿ ಹರಿಯಾಣ ಪೊಲೀಸ್ ಅಧಿಕಾರಿ ಮತ್ತು ಪವರ್-ಲಿಫ್ಟಿಂಗ್, ಎಂಎಂಎ (ಮಿಶ್ರ ಮಾರ್ಷಲ್ ಆರ್ಟ್ಸ್) ಚಾಂಪಿಯನ್ ಕವಿತಾ ಎಂದು ಗುರುತಿಸಿದೆ. ವೈರಲ್‌ ಪೋಸ್ಟ್‌ನಲ್ಲಿ ಹೇಳಿರುವಂತೆ ಅವರ ಹೆಸರು ಸಂಧ್ಯಾ ಪಡಕೆ ಅಲ್ಲ.

ವಿಡಿಯೊ ಬಗ್ಗೆ ಇನ್ನೂ ಹೆಚ್ಚಿನ ಹುಡುಕಾಟ ನಡೆಸಿದಾಗ ಅದೇ ವೀಡಿಯೊ ಬಗ್ಗೆ ವರದಿ ಮಾಡಿದ 2016 ರ ಸುದ್ದಿ ಲೇಖನವನ್ನು ನಮಗೆ ಸಿಕ್ಕಿದೆ. ಈ ಲೇಖನದಲ್ಲಿ ಮಹಿಳೆಯರಿಬ್ಬರನ್ನು ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಬುಲ್ ಬುಲ್ ಮತ್ತು ಹರ್ಯಾಣದ ಮಾಜಿ ಪೊಲೀಸ್ ಅಧಿಕಾರಿ ಕವಿತಾ ಮತ್ತು ಪವರ್-ಲಿಫ್ಟಿಂಗ್, ಎಂಎಂಎ (ಮಿಶ್ರ ಮಾರ್ಷಲ್ ಆರ್ಟ್ಸ್) ಚಾಂಪಿಯನ್ ಎಂದು ಗುರುತಿಸಿದೆ. ವೀಡಿಯೊವನ್ನು ವರದಿ ಮಾಡಿದ ಇನ್ನೊಂದು ಸುದ್ದಿ ಲೇಖನವು ಮಹಿಳೆಯರ ಗುರುತಿನ ಬಗ್ಗೆಯೂ ಅದೇ ಮಾತನ್ನು ಪುನರುಚ್ಚರಿಸಿದೆ. ಆದಾಗ್ಯೂ, ಈ ಯಾವುದೇ ಸುದ್ದಿ ಲೇಖನಗಳು ಈ ಯಾವುದೇ ಮಹಿಳೆಯರನ್ನು ಪಾಕಿಸ್ತಾನ ಅಥವಾ ಆರ್‌ಎಸ್‌ಎಸ್‌ಗೆ ಸಂಬಧದ ಬಗ್ಗೆ ಉಲ್ಲೇಖಿಸಿಲ್ಲ.

ಮತ್ತೊಂದು ವೀಡಿಯೊದಲ್ಲಿ, ಬುಲ್ ಬುಲ್ (ಕಪ್ಪು ಬಣ್ಣದ ಬಟ್ಟೆ ಧರಿಸಿರುವವರು) ಕವಿತಾ ದೇವಿಯ ಮೇಲೆ ಸೇಡು ತೀರಿಸಿಕೊಳ್ಳುವುದನ್ನು ಕಾಣಬಹುದು. ಆದುದರಿಂದ, ಈ ಎಲ್ಲ ಸಾಕ್ಷ್ಯಗಳು ಸೂಚಿಸುತ್ತಿರುವುದು ಏನೆಂದರೆ ಈ ಇಬ್ಬರೂ ಮಹಿಳೆಯರು ಪಾಕಿಸ್ತಾನದೊಂದಿಗೆಯೋ, ಆರೆಸ್ಸೆಸ್‌‌ನೊಂದಿಗೆಯೋ ಸಂಬಂಧ ಹೊಂದಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತೀಯ ಮಹಿಳಾ ಕುಸ್ತಿ ಪಂದ್ಯದ ಹಳೆಯ ವಿಡಿಯೋವನ್ನು ಪಾಕಿಸ್ತಾನದ ಕುಸ್ತಿಪಟುವನ್ನು ಆರೆಸ್ಸೆಸ್ ಸದಸ್ಯೆ ಹೊಡೆದರು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Share.

About Author

Comments are closed.

scroll