Fake News - Kannada
 

ಇತ್ತೀಚಿನ ದೆಹಲಿ ರೈತ ಹೋರಾಟದ ಹಿನ್ನೆಲೆಯಲ್ಲಿ ಹಲವು ಹಳೆಯ ಫೋಟೊಗಳನ್ನು ಹಂಚಿಕೊಳ್ಳಲಾಗಿದೆ

0

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಲವು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.  ಅವು ನಿಜವೆ ಎಂಬುದನ್ನು ಪರಿಶೀಲಿಸೋಣ ಬನ್ನಿ

ಪ್ರತಿಪಾದನೆ: ಇತ್ತೀಚಿನ ದೆಹಲಿ ರೈತ ಹೋರಾಟದ ಚಿತ್ರಗಳು.

ನಿಜಾಂಶ: ಇಲ್ಲಿ ಪೋಸ್ಟ್‌ ಮಾಡಲಾದ ಚಿತ್ರಗಳು ಹಳೆಯವು. ಅವುಗಳಿಗೂ ಇತ್ತೀಚಿನ ರೈತ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಫೋಟೊ 1 (ಆರ್ಕೈವ್ ಆವೃತ್ತಿ)

ಈ ಫೋಟೊವನ್ನು ಗೂಗಲ್ ರಿವರ್ಸ್ ಸರ್ಚ್ ಮೂಲಕ ಹುಡುಕಿದಾಗ ಇದೇ ಫೋಟೊ 2017ರ ಸೆಪ್ಟಂಬರ್‌ನಲ್ಲಿಯೇ ಬಳಕೆದಾರರೊಬ್ಬರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಅಲ್ಲದೆ 2017ರ ರಾಜಸ್ಥಾನದಲ್ಲಿ ನಡೆದ ರೈತರ ಹೋರಾಟ ಎಂದು ಹಲವು ಪತ್ರಿಕೆಗಳು ಇದೇ ಫೋಟೊವನ್ನು ಪ್ರಕಟಿಸಿದ್ದವು. ಆ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಸಿಪಿಐ(ಎಂ) ಇದೇ ಫೋಟೋವನ್ನು 2017ರ ಸೆಪ್ಟಂಬರ್ 5 ರಂದು “ರಾಜಸ್ಥಾನದಲ್ಲಿ ಎಐಕೆಎಸ್ ನೇತೃತ್ವದ ರೈತರು ಸಾಲ ಮನ್ನಾ, ಪಿಂಚಣಿ ಯೋಜನೆಗಳು ಮತ್ತು ಎಂಎನ್‌ಆರ್‌ಇಜಿಎಗೆ ಹೆಚ್ಚಿನ ಅನುದಾನ ಬೇಡಿಕೆ”ಗಾಗಿ ಹೋರಾಟ ನಡೆಸಿದವು ಎಂಬ ಶೀರ್ಷಿಕೆಯಡಿ ಟ್ವೀಟ್ ಮಾಡಿದೆ. ಅದೇ ದಿನ ಸೀತಾರಾಂ ಯೆಚೂರಿಯವರು ಸಹ ಇದೇ ಫೋಟೊವನ್ನು ಟ್ವೀಟ್ ಮಾಡಿದ್ದಾರೆ. ಹಾಗಾಗಿ ಈ ಫೋಟೋ ಇತ್ತೀಚಿನ ದೆಹಲಿ ರೈತರ ಪ್ರತಿಭಟನೆಯದ್ದಲ್ಲ ಎಂದು ಖಚಿತವಾಗಿ ಹೇಳಬಹುದು.

ಫೋಟೋ 2 (ಆರ್ಕೈವ್ ಆವೃತ್ತಿ)

ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಸುಮಾರು 25 ಸಾವಿರ ರೈತರು ಮುಂಬೈ ಕಡೆಗೆ ಮೆರವಣಿಗೆ ಹೊರಟಿದ್ದಾರೆ. ಅವರು ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ, ಥಾಣೆಯ ವಿವಿಯಾನಾ ಮಾಲ್ ಎದುರು ಒಟ್ಟುಗೂಡಿದ್ದಾರೆ” ಎಂಬ ಶೀರ್ಷಿಕೆಯಲ್ಲಿ ಮಾರ್ಚ್ 2018ರಲ್ಲಿ ಇದೇ ಫೋಟೊವನ್ನು ಮುಂಬೈ ಲೈವ್ ಟ್ವೀಟ್ ಮಾಡಿದೆ. (ಫೋಟೊದಲ್ಲಿ ಮುಂಬೈಲೈವ್.ಕಾಂ ವಾಟರ್ ಮಾರ್ಕ್ ಇರುವುದನ್ನು ಗಮನಿಸಬಹುದು). ಕೇರಳ ಸಿಎಂ ಪಿಣರಾಯಿ ವಿಜಯನ್ ಸಹ ಇದೇ ಫೋಟೊವನ್ನು 2018ರ ಮಾರ್ಚ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಬಹುದು.

ಫೋಟೊ 3 (ಆರ್ಕೈವ್ ಆವೃತ್ತಿ):

ಫೋಟೊವು 2016ರ ಸೆಪ್ಟಂಬರ್ 16 ರಿಂದಲೇ ಅಂತರ್ಜಾಲದಲ್ಲಿ ಲಭ್ಯವಿದೆ. ಅದರ ಹಳೆಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಫೋಟೊದ ನಿಖರ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ ಇದನ್ನು ಇತ್ತೀಚಿನ ರೈತ ಹೋರಾಟದ್ದಲ್ಲ ಎಂದು ತೀರ್ಮಾನಿಸಬಹುದು.

ಫೋಟೊ 4 (ಆರ್ಕೈವ್ ಆವೃತ್ತಿ)

ಇದೇ ಫೋಟೊವನ್ನು ಒಳಗೊಂಡು 2017ರ ಫೆಬ್ರವರಿಯಲ್ಲಿ ಹಿಂದೂಸ್ತಾನ್ ಟೈಮ್ಸ್ ಲೇಖನವೊಂದನ್ನು ಪ್ರಕಟಿಸಿದೆ. ರೋಹ್ಟಕ್‌ನಲ್ಲಿ ನಡೆಸಿದ ಮೀಸಲಾತಿಗಾಗಿನ ಆಂದೋಲನದ ಸಂದರ್ಭದಲ್ಲಿ ಜಾಟ್ ಮಹಿಳಾ ಪ್ರತಿಭಟನಾಕಾರರು ಜಸ್ಸಿಯಾ ಗ್ರಾಮಕ್ಕೆ ತೆರಳುತ್ತಿರುವುದು. (ಪಿಟಿಐ ಫೋಟೋ) ಎಂದು ವಿವರಣೆ ನೀಡಿದೆ. ಇದೇ ಫೋಟೊವನ್ನು ಔಟ್‌ಲುಕ್ ವೆಬ್‌ಸೈಟ್‌ನಲ್ಲಿಯೂ ಸಹ ನೋಡಬಹುದು.

ಈ ಮೇಲಿನ ಫೋಟೊಗಳು ಹಳೆಯವಾಗಿದೆ. ಆದರೆ ಇತ್ತೀಚೆಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಚಿತ್ರಗಳನ್ನು ನೀವು ಇಲ್ಲಿ ನೋಡಬಹುದು.

ಒಟ್ಟಿನಲ್ಲಿ ಇತ್ತೀಚಿನ ದೆಹಲಿ ರೈತ ಹೋರಾಟದ ಹಿನ್ನೆಲೆಯಲ್ಲಿ ಹಲವು ಹಳೆಯ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll