Fake News - Kannada
 

ಫಿಫಾ ಕ್ವಾರ್ಟರ್ ಫೈನಲ್‌ನಲ್ಲಿ ಬ್ರೆಜಿಲ್ ತಂಡ ಸೋತಿದ್ದಕ್ಕೆ ಆಟಗಾರರ ಬಸ್ಸಿಗೆ ಅಭಿಮಾನಿಗಳು ಮೊಟ್ಟೆ ಎಸೆದಿಲ್ಲ

0

FIFA ವಿಶ್ವಕಪ್ 2022 ರ ಕ್ವಾರ್ಟರ್ ಫೈನಲ್‌ನಲ್ಲಿ ಬ್ರೆಜಿಲ್ ತಂಡವು ಕ್ರೊಯೇಷಿಯಾ ವಿರುದ್ದ ಪರಾಭವಗೊಂಡ ಸಂದರ್ಭದಲ್ಲಿ, ಬ್ರೆಜಿಲ್ ಆಟಗಾರರ ಬಸ್ಸಿಗೆ ಜನರ ಗುಂಪೊಂದು ಮೊಟ್ಟೆಗಳನ್ನು ಎಸೆಯುವ ವೀಡಿಯೊ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಬ್ರೆಜಿಲ್ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದಕ್ಕೆ ಕಲ್ಲು, ಮೊಟ್ಟೆ ಎಸೆಯುವ ಮೂಲಕ ತಮ್ಮ ದೇಶಕ್ಕೆ ಸ್ವಾಗತಿಸಿದ್ದಾರೆ, ಬ್ರೆಜಿಲ್ ಫುಟ್‌ಬಾಲ್ ತಂಡದ ಮೇಲೆ ಅಭಿಮಾನಿಗಳು ಕೋಪವನ್ನು ತೋರಿಸುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: FIFA ವಿಶ್ವಕಪ್ 2022 ರಿಂದ ತಂಡವು ಹೊರಗುಳಿದ ನಂತರ ಬ್ರೆಜಿಲ್‌ನಲ್ಲಿ ಬ್ರೆಜಿಲಿಯನ್ ಫುಟ್‌ಬಾಲ್ ತಂಡವನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಅಭಿಮಾನಿಗಳು ಮೊಟ್ಟೆಗಳನ್ನು ಎಸೆಯುತ್ತಿದ್ದಾರೆ.

ನಿಜಾಂಶ: ಈ ವೀಡಿಯೊವನ್ನು ಮಾರ್ಚ್ 2018 ರಲ್ಲಿ ಬ್ರೆಜಿಲ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ. ಇದು ಆಗಿನ ಮಾಜಿ ಅಧ್ಯಕ್ಷ ಲೂಲಾ ಅವರ ಬೆಂಗಾವಲು ಪಡೆಯ ಭಾಗವೆಂದು ನಂಬಿ ಬ್ರೆಜಿಲ್‌ನಲ್ಲಿ ಪ್ರತಿಭಟನಾಕಾರರು ಬಸ್‌ನ ಮೇಲೆ ಮೊಟ್ಟೆಗಳೊಂದಿಗೆ ದಾಳಿ ಮಾಡುವುದನ್ನು ತೋರಿಸುತ್ತದೆ. ಅಲ್ಲದೆ, 2022 ರ ವಿಶ್ವಕಪ್‌ನಿಂದ ಹೊರಗುಳಿದ ನಂತರ ಬ್ರೆಜಿಲಿಯನ್ ಫುಟ್‌ಬಾಲ್ ತಂಡದ ಮೇಲೆ ಅಭಿಮಾನಿಗಳು ಮೊಟ್ಟೆಗಳನ್ನು ಎಸೆಯುವ ಯಾವುದೇ ಘಟನೆ ವರದಿಯಾಗಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‍ನಲ್ಲಿ ಸರ್ಚ್ ಮಾಡಿದಾಗ ಅದೇ ವೀಡಿಯೊವನ್ನು ಈಗಾಗಲೇ 28 ಮಾರ್ಚ್ 2018 ರಂದು YouTube ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಕಂಡುಬಂದಿದೆ. ಬ್ರೆಜಿಲ್ ನ ಪರಾನಾ ಜನರು ಲೂಲಾ (ಮಾಜಿ ಅಧ್ಯಕ್ಷ) ಅವರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಮೊಟ್ಟೆಗಳನ್ನು ಎಸೆಯುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಈ ಘಟನೆಯ ಮತ್ತೊಂದು ವಿಡಿಯೋವನ್ನು ಬಸ್ಸಿನೊಳಗೆ ಇದ್ದ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದಾರೆ. ಬ್ರೆಜಿಲಿಯನ್ ಮಾಧ್ಯಮಗಳ ಪ್ರಕಾರ, 26 ಮಾರ್ಚ್ 2018 ರಂದು, “ಪರಾನಾ ರಾಜ್ಯದಲ್ಲಿ ಪ್ರತಿಭಟನಾಕಾರರ ಗುಂಪು ಚುನಾವಣಾ ಪ್ರಚಾರದ ಸಮಯದಲ್ಲಿ ಲುಲಾ ಅವರ ಬೆಂಗಾವಲು ಪಡೆಯ ಭಾಗವೆಂದು ತಪ್ಪಾಗಿ ಬಸ್ ಮೇಲೆ ದಾಳಿ ಮಾಡಿದೆ”.

ಇದಲ್ಲದೆ, FIFA ವಿಶ್ವ ಕಪ್ 2022 ಕ್ವಾರ್ಟರ್ ಫೈನಲ್‍ನಲ್ಲಿ ಬ್ರೆಜಿಲ್ ಫುಟ್ಬಾಲ್ ತಂಡದ ಸೋತ ಹಿನ್ನಲೆಯಲ್ಲಿ ಅಭಿಮಾನಿಗಳು ಮೊಟ್ಟೆಗಳನ್ನು ಎಸೆದಿರುವ ಯಾವುದೇ ಘಟನೆ ವರದಿಯಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, FIFA ವಿಶ್ವ ಕಪ್ 2022 ಕ್ವಾರ್ಟರ್ ಫೈನಲ್‍ನಲ್ಲಿ ಕ್ರೊಯೇಷಿಯಾ ವಿರುದ್ದ ಬ್ರೆಜಿಲ್ ತಂಡದ ಪರಾಭವಗೊಂಡ ಹಿನ್ನಲೆಯಲ್ಲಿ ಅಭಿಮಾನಿಗಳು ಮೊಟ್ಟೆಗಳನ್ನು ಎಸೆಯುತ್ತಿರುವಂತೆ ಹಳೆಯ ಸಂಬಂಧವಿಲ್ಲದ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll