Fake News - Kannada
 

ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ದಿವಾಳಿಯಾಗಲಿದೆ ಎಂದು ಒಬಾಮ ಹೇಳಿದರೆ?

0

ನರೇಂದ್ರ ಮೋದಿ ಮತ್ತೊಮ್ಮೆ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಭಾರತ ದಿವಾಳಿಯಾಗುತ್ತದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಶೇರ್ ಆಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಪ್ರತಿಪಾದನೆ: ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ದಿವಾಳಿಯಾಗಲಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ನಿಜಾಂಶ: ಬರಾಕ್ ಒಬಾಮಾ ಅವರು ನರೇಂದ್ರ ಮೋದಿಯವರ ಆಡಳಿತದ ವಿರುದ್ಧ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ‘ಎ ಪ್ರಾಮಿಸ್ಡ್ ಲ್ಯಾಂಡ್’ ಪುಸ್ತಕದಲ್ಲಿ ಬರಾಕ್ ಒಬಾಮ ಅವರು ಬಿಜೆಪಿ ಭಾರತದಲ್ಲಿ ವಿಭಜಕ ರಾಷ್ಟ್ರೀಯತೆಯನ್ನು ಪ್ರಚಾರ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದ ಆರ್ಥಿಕತೆಯ ಆಧುನೀಕರಣಕ್ಕೆ ಮನಮೋಹನ್ ಸಿಂಗ್ ನೀಡಿದ ಕೊಡುಗೆಗಾಗಿ ಒಬಾಮಾ ಹಲವು ಬಾರಿ ಹೊಗಳಿದ್ದರೂ, ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತದ ಆರ್ಥಿಕತೆ ದಿವಾಳಿಯಾಗುತ್ತಿರುವ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ದಿವಾಳಿಯಾಗುತ್ತದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆಯೇ ಎಂದು ಪರಿಶೀಲಿಸಿದಾಗ ಒಬಾಮಾ ಅವರ ಅಂತಹ ಹೇಳಿಕೆಯ ಬಗ್ಗೆ ಯಾವುದೇ ಸುದ್ದಿ ವರದಿಯಾಗಿಲ್ಲ. ಬರಾಕ್ ಒಬಾಮಾ ಇಂತಹ ಹೇಳಿಕೆ ನೀಡಿದ್ದರೆ ವ್ಯಾಪಕವಾಗಿ ವರದಿಯಾಗುತ್ತಿತ್ತು. ಬರಾಕ್ ಒಬಾಮಾ ಅವರು ತಮ್ಮ ಅಧಿಕೃತ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳಲ್ಲಿ ನರೇಂದ್ರ ಮೋದಿ ಅಥವಾ ಭಾರತೀಯ ಆರ್ಥಿಕತೆಯ ವಿರುದ್ಧ ಯಾವುದೇ ರೀತಿಯ ಕಾಮೆಂಟ್‌ಗಳನ್ನು ಮಾಡಿಲ್ಲ.

ಬರಾಕ್ ಒಬಾಮಾ 2020 ರಲ್ಲಿ ಬಿಡುಗಡೆಯಾದ ತಮ್ಮ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ನಲ್ಲಿ, ಭಾರತದಲ್ಲಿ ಬಿಜೆಪಿಯಿಂದ ವಿಭಜಕ ರಾಷ್ಟ್ರೀಯತೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ವರದಿಗಳ ಪ್ರಕಾರ, ಒಬಾಮಾ ತಮ್ಮ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ,  “ಅವರು (ಡಾ. ಮನಮೋಹನ್ ಸಿಂಗ್) ಅಧಿಕಾರವನ್ನು ತೊರೆದಾಗ ಏನಾಗುತ್ತದೆ ಎಂದು ನಾನು ಆಶ್ಚರ್ಯ ಪಡುತ್ತೇನೆ. ತನ್ನ ತಾಯಿ ಹಾಕಿಕೊಟ್ಟ ಮಾರ್ಗವನ್ನು ಈಡೇರಿಸುವ ಮೂಲಕ ಮತ್ತು ಬಿಜೆಪಿಯು ಬಿಂಬಿಸುತ್ತಿರುವ ವಿಭಜಕ ರಾಷ್ಟ್ರೀಯತೆಯ ವಿರುದ್ದ ಕಾಂಗ್ರೆಸ್ ಪಕ್ಷದ ಪ್ರಾಬಲ್ಯವನ್ನು  ಯಶಸ್ವಿಯಾಗಿ ರಾಹುಲ್ ಮುಂದುವರೆಸುತ್ತಾರೆಯೇ? ಎಂದು ತಮ್ಮ  ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

2017 ರ ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ನರೇಂದ್ರ ಮೋದಿಯವರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಬರಾಕ್ ಒಬಾಮಾ, “ನಾನು ಅವರನ್ನು ಇಷ್ಟಪಡುತ್ತೇನೆ. ಅವರು ದೇಶದ ಬಗ್ಗೆ ದೂರದೃಷ್ಟಿಯನ್ನು ಹೊಂದಿದ್ದಾರೆಂದು ನಾನು ಭಾವಿಸುತ್ತೇನೆ. ಅವರು ಅಧಿಕಾರಶಾಹಿಯ ಅಂಶಗಳನ್ನು ಆಧುನೀಕರಿಸುತ್ತಿದ್ದಾರೆ. ಇದಲ್ಲದೆ,  “ನಾನು ಡಾ (ಮನಮೋಹನ್) ಸಿಂಗ್ ಅವರೊಂದಿಗೆ ಉತ್ತಮ ಸ್ನೇಹಿತನಾಗಿದ್ದೆ. ಆರ್ಥಿಕತೆಯನ್ನು ಆಧುನೀಕರಿಸಲು ಡಾ. ಸಿಂಗ್ ತೆಗೆದುಕೊಂಡ ಕ್ರಮಗಳನ್ನು ನೀವು ನೋಡಿದಾಗ; ಇದು ಭಾರತೀಯ ಆರ್ಥಿಕತೆಯನ್ನು ಆಧುನೀಕರಿಸಲು ಅಡಿಪಾಯವಾಗಿತ್ತು. ಶೃಂಗಸಭೆಯಲ್ಲಿ ಬರಾಕ್ ಒಬಾಮಾ ಅವರು ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ಇಬ್ಬರನ್ನೂ ಉತ್ತಮ ನಾಯಕರು ಎಂದು ಪರಿಗಣಿಸಿದ್ದಾರೆ ಮತ್ತು ಭಾರತದ ಆರ್ಥಿಕತೆ ಮತ್ತು ಯುಎಸ್-ಭಾರತ ಸಂಬಂಧವನ್ನು ಅಭಿವೃದ್ಧಿಪಡಿಸಲು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಪ್ರಶಂಸಿಸಿದರು. ಭಾರತದ ಆರ್ಥಿಕತೆಯನ್ನು ಆಧುನೀಕರಿಸುವಲ್ಲಿ ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ಬರಾಕ್ ಒಬಾಮಾ ಅನೇಕ ಸಂದರ್ಭಗಳಲ್ಲಿ ಶ್ಲಾಘಿಸಿದರೂ, ನರೇಂದ್ರ ಮೋದಿ ಪ್ರಧಾನಿಯಾಗಿದ್ದಾಗ ಭಾರತದ ಆರ್ಥಿಕತೆಯನ್ನು ದುರ್ಬಲಗೊಳಿಸಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತವು ದಿವಾಳಿಯಾಗುತ್ತದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll